ಶ್ರೀಗಂಧ ಕಳವು ಪ್ರಕರಣ: ಅರಣ್ಯ ಇಲಾಖೆ ಭರ್ಜರಿ ಕಾರ್ಯಾಚರಣೆ, ಇಬ್ಬರು ಆರೋಪಿಗಳ ಬಂಧನ

Sandalwood

Share this post :

ನೆಲ್ಯಹುದಿಕೇರಿ ಗ್ರಾಮದ ಕೆ.ಎಂ. ಪ್ರಕಾಶ್ ಎಂಬುವವರ ಖಾಸಗಿ ಜಾಗದಲ್ಲಿದ್ದ ಶ್ರೀಗಂಧದ ಮರವನ್ನು ಅಕ್ರಮವಾಗಿ ಕಡಿದು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟೆ ಪೈಸಾರಿ ನಿವಾಸಿ ಚಂದ್ರ ಎಂ.ಎಂ. (47) ಹಾಗೂ ಜಲ್ಲಕಟ್ಟೆ ಗ್ರಾಮದ ನಿವಾಸಿ ಉಮೇಶ ಹೆಚ್.ಪಿ. (27) ಬಂಧಿತರಾದವರಾಗಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನುಳಿದ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಆರೋಪಿಗಳು ಕದ್ದ ಶ್ರೀಗಂಧದ ಮರವನ್ನು ತಂದು ಅದರ ಚಕ್ಕೆ ಹಾಗೂ ಛೇಗು ಬೇರ್ಪಡಿಸಿ ಶುಚಿಗೊಳಿಸುತ್ತಿದ್ದಾಗ ಅರಣ್ಯಾಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿದೆ. ಕಾರ್ಯಾಚರಣೆಯ ವೇಳೆ 20 ಕೆಜಿ ಗಂಧದ ಕೊರಡು, 15 ಕೆಜಿ ಗಂಧದ ತುಂಡುಗಳು ಹಾಗೂ 20 ಕೆಜಿ ಚಕ್ಕೆ ಸೇರಿದಂತೆ ಒಟ್ಟು 55 ಕೆಜಿ ಹಸಿ ಶ್ರೀಗಂಧವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ವಿರಾಜಪೇಟೆ ಡಿ.ಸಿ.ಎಫ್. ವಿನಿತಾ ಚೌಹಾಣ್ ಹಾಗೂ ಎ.ಸಿ.ಎಫ್. ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ, ಆರ್.ಎಫ್.ಓ. ರಾಕೇಶ್ ಮತ್ತು ಡಿ.ಆರ್.ಎಫ್.ಓ. ಶಶಿ ಅವರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. ಈ ಯಶಸ್ವಿ ದಾಳಿಯಲ್ಲಿ ಅರಣ್ಯ ಸಿಬ್ಬಂದಿ ರಾಜೇಶ್, ರೋಷನ್, ಪ್ರದೀಪ್, ಪ್ರವೀಣ್, ನಿತಿನ್, ಮಂಜು, ಪ್ರಮೋದ್ ಮತ್ತು ಚಾಲಕ ಸಂಜು ಭಾಗವಹಿಸಿದ್ದರು. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದೆ.

coorg buzz
WhatsApp Image 2026-08-11 at 16.11.22