ರೈತರ ಬಂಧನ ಖಂಡಿಸಿ ‘ಕೊಡಗು ಬಂದ್’?: ಜುಲೈ 29 ರಂದು ರೈತ ಸಂಘದ ಪ್ರಮುಖರ ನಿರ್ಣಾಯಕ ಸಭೆ

Farmers Protest

Share this post :

ಗೋಣಿಕೊಪ್ಪ: ಬಿಡದಿ ರೈತಪರ ಹೋರಾಟಕ್ಕೆ ತೆರಳುತ್ತಿದ್ದ ರೈತರನ್ನು ಪೊಲೀಸರು ಬಂಧಿಸಿರುವ ಕ್ರಮವನ್ನು ಖಂಡಿಸಿ ಕೊಡಗು ಬಂದ್‌ಗೆ ಕರೆ ನೀಡುವ ಕುರಿತು ನಿರ್ಧರಿಸಲು ಜುಲೈ 29 ರಂದು ಪೂರ್ವಭಾವಿ ಸಭೆ ನಡೆಸಲಾಗುವುದು ಎಂದು ಕೊಡಗು ರೈತ ಸಂಘ ಮತ್ತು ಹಸಿರು ಸೇನೆ ಕಾನೂನು ಸಲಹೆಗಾರ ಹೇಮಚಂದ್ರ ತಿಳಿಸಿದ್ದಾರೆ.

ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಅವರು, ಬುಧವಾರ ಬೆಳಿಗ್ಗೆ 10.30ಕ್ಕೆ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣ ಮತ್ತು ಸೋಮವಾರಪೇಟೆ ಪತ್ರಿಕಾ ಭವನದಲ್ಲಿ ಪ್ರತ್ಯೇಕವಾಗಿ ಸಭೆಗಳು ನಡೆಯಲಿವೆ. ಈ ಸಭೆಯಲ್ಲಿ ವಿವಿಧ ಸಂಘ-ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರ ಸಲಹೆ-ಮಾರ್ಗದರ್ಶನ ಪಡೆದು ಬಂದ್ ಆಚರಿಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಹೋರಾಟ ನಿರತ ರೈತರು ಹಾಗೂ ಮಹಿಳೆಯರನ್ನು ವಶಕ್ಕೆ ಪಡೆದು ತೊಂದರೆ ನೀಡಿದ ಪೊಲೀಸ್ ಇಲಾಖೆಯ ನಡೆ ಸರಿಯಲ್ಲ ಎಂದ ಅವರು, ಬಂದ್ ಹೋರಾಟಕ್ಕೆ ಎಲ್ಲರೂ ಬೆಂಬಲ ನೀಡಬೇಕೆಂದು ಮನವಿ ಮಾಡಿದರು. ರೈತರನ್ನು ಕಡೆಗಣಿಸಿ ಯಾವ ಸರ್ಕಾರವೂ ಉಳಿದಿಲ್ಲ ಎಂದು ಸೋಮವಾರಪೇಟೆ ತಾಲೂಕು ಅಧ್ಯಕ್ಷ ಕೆ.ಎಂ. ದಿನೇಶ್ ಅಸಮಾಧಾನ ವ್ಯಕ್ತಪಡಿಸಿದರೆ, ರೈತ ಸಂಘವು ಯಾವುದೇ ರಾಜಕೀಯ ಪಕ್ಷದ ಬೆಂಬಲವಿಲ್ಲದೆ ಕೇವಲ ರೈತರ ಹಿತಕ್ಕಾಗಿ ಹೋರಾಟ ನಡೆಸುತ್ತಿದೆ ಎಂದು ರೈತ ಮುಖಂಡ ಪುಚ್ಚಿಮಾಡ ರಾಯ್ ಮಾದಪ್ಪ ಸ್ಪಷ್ಟಪಡಿಸಿದರು. ಸಭೆಯಲ್ಲಿ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಜಿಲ್ಲಾ ಉಪಾಧ್ಯಕ್ಷ ಹೂವಯ್ಯ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

coorg buzz
coorg buzz