ವಿದ್ಯಾರ್ಥಿಗಳಿಗೆ ಶಿಸ್ತು, ನಾಯಕತ್ವ ಹಾಗೂ ಪರಿಶ್ರಮವೇ ಯಶಸ್ಸಿನ ಮೆಟ್ಟಿಲು: ಅನೂಪ್ ಮಾದಪ್ಪ

Share this post :

ವಿರಾಜಪೇಟೆಯ ಕಾವೇರಿ ಪದವಿ ಕಾಲೇಜಿನ ಸಭಾಂಗಣದಲ್ಲಿ 2026-27ನೇ ಸಾಲಿನ ವಿದ್ಯಾರ್ಥಿ ಕ್ಷೇಮಪಾಲನ ಸಂಘದ ಉದ್ಘಾಟನಾ ಸಮಾರಂಭವು ಮಂಗಳವಾರ ಜರುಗಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು, ನೂತನ ವಿದ್ಯಾರ್ಥಿ ನಾಯಕರು ಹಾಗೂ ತರಗತಿ ಪ್ರತಿನಿಧಿಗಳಿಗೆ ಪ್ರಮಾಣವಚನ ಬೋಧಿಸಿ ಮಾತನಾಡಿದ ವಿರಾಜಪೇಟೆ ವೃತ್ತ ನಿರೀಕ್ಷಕರಾದ ಅನೂಪ್ ಮಾದಪ್ಪ ಅವರು, ಸಮಾಜಕ್ಕೆ ಉತ್ತಮ ಪ್ರಜೆಯಾಗಲು ಶಿಸ್ತು, ಅನ್ಯೋನ್ಯತೆ ಹಾಗೂ ನಾಯಕತ್ವದ ಗುಣಗಳು ಅತ್ಯಂತ ಮುಖ್ಯ ಎಂದು ಅಭಿಪ್ರಾಯಪಟ್ಟರು. ಪದವಿ ಹಂತದ ಶಿಕ್ಷಣವು ಬದುಕಿನ ಮಹತ್ವದ ಘಟ್ಟವಾಗಿದ್ದು, ವಿದ್ಯಾರ್ಥಿಗಳು ಮಾದಕ ವಸ್ತುಗಳ ಚಟ ಹಾಗೂ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಗೆ ದಾಸರಾಗದೆ ನಿರ್ದಿಷ್ಟ ಗುರಿ ಹೊಂದಿ ಕಠಿಣ ಪರಿಶ್ರಮದಿಂದ ಮುನ್ನಡೆಯಬೇಕು ಎಂದು ಕರೆ ನೀಡಿದರು. ಜೊತೆಗೆ ಸಂಚಾರ ನಿಯಮಗಳನ್ನು ಪಾಲಿಸಿ ಸುರಕ್ಷತೆಗೆ ಒತ್ತು ನೀಡಬೇಕೆಂದು ಕಿವಿಮಾತು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ಅಂತರರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಮಾತನಾಡಿ, ಪ್ರತಿಯೊಬ್ಬರಿಗೂ ಜೀವನದಲ್ಲಿ ದೊಡ್ಡ ಕನಸಿರಬೇಕು ಮತ್ತು ಅದನ್ನು ನನಸಾಗಿಸಲು ಶಿಸ್ತುಬದ್ಧ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದರು. ಸಮಯದ ಸದ್ಬಳಕೆ ಮಹತ್ತರವಾದದ್ದು, ಲಭ್ಯವಿರುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಶ್ರಮಿಸಿದರೆ ಭವಿಷ್ಯದಲ್ಲಿ ಖಂಡಿತವಾಗಿಯೂ ಯಶಸ್ಸು ಲಭಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಪ್ರೇರೇಪಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾವೇರಿ ಎಜುಕೇಷನ್ ಸೊಸೈಟಿಯ ನಿರ್ದೇಶಕ ಪುಚ್ಚಿಮಾಡ ಟಿ. ಸುಬ್ಬಯ್ಯ ಅವರು ಮಾತನಾಡಿ, ವಿದ್ಯಾರ್ಥಿಗಳು ಸಮಾಜದ ಉತ್ತಮ ವ್ಯಕ್ತಿಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ಜೀವಿಸಬೇಕು ಎಂದರು. ಕೇವಲ ಗೆಲುವು ಸಾಧಿಸುವುದಷ್ಟೇ ಗುರಿಯಾಗದೆ ಪ್ರತಿಯೊಂದು ಚಟುವಟಿಕೆಯಲ್ಲೂ ಸಕ್ರಿಯವಾಗಿ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಹಾಗೂ ಆಯ್ಕೆಯಾದ ವಿದ್ಯಾರ್ಥಿ ಮುಖಂಡರು ಕಿರಿಯರಿಗೆ ಸದಾ ಮಾದರಿಯಾಗಿರಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಾಗೂ ನೂರಕ್ಕೆ ನೂರು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ಜಿ. ವೀಣಾ, ಐಕ್ಯೂಎಸಿ ಸಂಯೋಜಕ ಎಲ್.ಆರ್. ರಾಘವೇಂದ್ರ ಹಾಗೂ ವಿದ್ಯಾರ್ಥಿ ಕ್ಷೇಮಪಾಲನ ಸಂಘದ ಮುಖ್ಯಸ್ಥ ಸೋಮಣ್ಣ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ಸಮಾರಂಭದಲ್ಲಿ ಕಾವೇರಿ ಎಜುಕೇಶನ್ ಸೊಸೈಟಿಯ ನಿರ್ದೇಶಕ ಪ್ರೊ. ಎಂ.ಕೆ. ಮೊಣ್ಣಪ್ಪ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಎಂ.ಕೆ. ಪದ್ಮ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

coorg buzz
WhatsApp Image 2026-08-11 at 16.11.22