ಪೊನ್ನಂಪೇಟೆ: ರಾಷ್ಟ್ರೀಯ ಮಾನವ ಶ್ರೇಷ್ಠತಾ ಪ್ರಶಸ್ತಿ 2026ಕ್ಕೆ ಭಾಜನರಾದ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ಡಿ. ಹೆಚ್. ಸೂಫಿ ಹಾಜಿ ಅವರನ್ನು ದುದ್ದಿಯಂಡ ಕುಟುಂಬಸ್ಥರ ಪರವಾಗಿ ಹುಟ್ಟೂರಿನಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು. ವಿರಾಜಪೇಟೆ ಸಮೀಪದ ನಲ್ವತ್ತೋಕ್ಲೀನಲ್ಲಿ ಸೋಮವಾರದಂದು ಕುಟುಂಬದ ತಕ್ಕ ಮುಖ್ಯಸ್ಥರಾದ ಡಿ.ಎ. ಫಕ್ರುದ್ದೀನ್, ಮಾಹಿನ್ ಹಾಜಿ ಮತ್ತು ಅಬ್ದುಲ್ಲಾ ಅವರ ಸಮ್ಮುಖದಲ್ಲಿ ನಡೆದ ದುದ್ದಿಯಂಡ ‘ಕುಟುಂಬ ಸಂಗಮ’ದಲ್ಲಿ ದುದ್ದಿಯಂಡ ಕುಟುಂಬ ಸಂಘದ ಅಧ್ಯಕ್ಷರೂ ಆಗಿರುವ ಸೂಫಿಯವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಕ್ಕ ಮುಖ್ಯಸ್ಥರು, ಸಮಾಜ ಸೇವ ಕ್ಷೇತ್ರದಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ಸೂಫಿ ಹಾಜಿಯವರು ಭಾರತದ ಅತ್ಯಂತ ಸ್ಪೂರ್ತಿದಾಯಕ ಬದಲಾವಣೆಯ ಹರಿಕಾರರ ಕ್ಷೇತ್ರದಿಂದ ಕರ್ನಾಟಕ ರಾಜ್ಯದಿಂದಲೇ ಏಕೈಕ ವ್ಯಕ್ತಿಯಾಗಿ ರಾಷ್ಟ್ರಪ್ರಶಸ್ತಿ ಪಡೆದಿರುವುದು ಕುಟುಂಬಕ್ಕೆ ಹೆಮ್ಮೆಯ ವಿಷಯವಾಗಿದೆ. ಇದರಿಂದ ಗ್ರಾಮದ ಹಿರಿಮೆಯೂ ಹೆಚ್ಚಿದಂತಾಗಿದೆ. ಕುಟುಂಬದ ಅಭಿಮಾನವಾಗಿರುವ ಸೂಫಿ ಹಾಜಿಯವರ ಸಮಾಜ ಸೇವೆ ಮುಂದೆಯೂ ಬಡವರು ಮತ್ತು ನಿರ್ಲಕ್ಷಿತರ ಧ್ವನಿಯಾಗುವ ಮೂಲಕ ಮತ್ತಷ್ಟು ಸಮಾಜಮುಖಿಗಾಗಿ ಮುಂದುವರಿಯಲಿ ಎಂದು ಆಶಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ದುದ್ದಿಯಂಡ ಸೂಫಿ ಹಾಜಿ, ಜನ್ಮ ಪಡೆದ ಊರಿನಲ್ಲಿ ಸಿಗುವ ಗೌರವ ಮತ್ತು ಸನ್ಮಾನಕ್ಕೆ ಜಗತ್ತಿನ ಯಾವುದೇ ದೊಡ್ಡ ಪ್ರಶಸ್ತಿಯೂ ಸಮನಾಗಲು ಸಾಧ್ಯವಿಲ್ಲ. ಹುಟ್ಟೂರಿನ ಸನ್ಮಾನವು ಕೇವಲ ಗೌರವವಲ್ಲ, ಅದು ಸಾಧನೆಗೆ ಸಿಗುವ ಅತ್ಯಂತ ಪವಿತ್ರವಾದ ಆಶೀರ್ವಾದವಾಗಿದೆ. ರಾಷ್ಟ್ರ ಪ್ರಶಸ್ತಿಗಿಂತ ಹುಟ್ಟೂರಿನಲ್ಲಿ ದೊರೆತ ಸನ್ಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಾನು ಯಾವುದೇ ಪ್ರಶಸ್ತಿಯನ್ನು ನಿರೀಕ್ಷಿಸಿರಲಿಲ್ಲ. ಆದರೂ ಗುರುತಿಸಿರುವುದು ಸಂತೋಷ ಮೂಡಿಸಿದೆ. ಪ್ರಶಸ್ತಿಗಳು ಮತ್ತು ಗೌರವಗಳು ಕೇವಲ ವೈಯಕ್ತಿಕ ಸಾಧನೆಯ ಗುರುತಲ್ಲ. ಅವು ವ್ಯಕ್ತಿ ಮತ್ತು ಸಂಸ್ಥೆಗಳಲ್ಲಿ ಸಾಮಾಜಿಕ ಹೊಣೆಗಾರಿಕೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಇದೆ ವೇಳೆ ಕುಟುಂಬದ ಯುವಕರ ಬಳಗದಿಂದಲೂ ಸೂಫಿ ಹಾಜಿ ಅವರನ್ನು ಪ್ರತ್ಯೇಕವಾಗಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ನಲ್ವತ್ತೋಕ್ಲು ಮೊಹಿದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಪಿ. ಎ. ಹನೀಫ್, ನಿವೃತ್ತ ಜಿಲ್ಲಾ ಖಜಾನಾಧಿಕಾರಿ ದುದ್ದಿಯಂಡ ಎಂ. ಉಸ್ಮಾನ್ ಹಾಜಿ, ದುದ್ದಿಯಂಡ ಕುಟುಂಬ ಸಂಘದ ಕಾರ್ಯದರ್ಶಿ ಡಿ. ಇ. ಫಕ್ರುದ್ದೀನ್ ಸೇರಿದಂತೆ ಕುಟುಂಬ ಸಂಘದ ಪದಾಧಿಕಾರಿಗಳು, ಯುವಕರ ಬಳಗದ ಪದಾಧಿಕಾರಿಗಳು, ಗ್ರಾಮದ ಪ್ರಮುಖರು, ಸದಸ್ಯರು ಪಾಲ್ಗೊಂಡಿದ್ದರು.



