ಮಡಿಕೇರಿ : ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ವಿವಿಧ ಸಾಧನೆ ಮಾಡಬೇಕಾದರೆ ಒಳ್ಳೆಯ ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಜಿ.ಪಂ.ಸಿಇಒ ಆನಂದ ಪ್ರಕಾಶ್ ಮೀನಾ ಹೇಳಿದರು.
ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ ವತಿಯಿಂದ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-೨೦೨೫ರ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಾಹಿತಿ ಕೆ.ಪಿ.ಬಾಲಸುಬ್ರಹ್ಮಣ್ಯ ಕಂಜರ್ಪಣೆ ಮಾತನಾಡಿ, ಪ್ರತಿ ವರ್ಷ ನವೆಂಬರ್ ೧೪ ರಿಂದ ಒಂದು ವಾರ ಕಾಲ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ನಡೆಸಲಾಗುತ್ತದೆ. ನೆಹರೂ ಅವರ ಜನ್ಮದಿನಾಂಕದಿಂದ ಇದು ಒಂದು ವಾರ ನಡೆಯುತ್ತದೆ ಎಂದರು. ಭಾರತದಲ್ಲಿ ಗ್ರಂಥಾಲಯ ವಿಜ್ಞಾನದ ಪಿತಾಮಹರೆಂದೇ ಹೆಸರಾದ ಡಾ.ಎಸ್.ಆರ್. ರಂಗನಾಥನ್ (೧೮೯೨-೧೯೭೨) ಅವರ ನೆನಪಿನಲ್ಲಿ ಈ ಸಪ್ತಾಹ ನಡೆಸಲಾಗುತ್ತದೆ ಎಂದರು.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸವರಾಜು ಮಾತನಾಡಿ, ಪುಸ್ತಕಗಳನ್ನು ಓದುವುದರಿಂದ ಅಭಿವೃದ್ಧಿಗೆ ಸಹಕಾರಿ ಆಗಿದೆ. ಪುಸ್ತಕಗಳು ವಿದ್ಯಾರ್ಥಿಗಳ ಜ್ಞಾನ ದೇಗುಲ ಬಾಗಿಲು ತೆರೆಸುವಂತೆ ಆಗಿದೆ. ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪುಸ್ತಕವನ್ನು ಓದಲು ಆಸಕ್ತಿ ತೋರಬೇಕು. ಅನುಮೋದನೆ ನೀಡಬೇಕು. ಸಾಧನೆಗಳಿಗೆ ಸೂಕ್ತವಾಗಿರುವುದು ಗ್ರಂಥಾಲಯವಾಗಿದೆ ಎಂದು ಹೇಳಿದರು.
ಸಹಾಯಕ ಪ್ರಾಧ್ಯಾಪಕರು ಹಾಗೂ ಲೇಖಕರಾದ ಡಾ.ದೀಕ್ಷಿತಾ ವರ್ಕಾಡಿ ಅವರು ಮಾತನಾಡಿ ಬದುಕನ್ನು ಬದಲಾಯಿಸಿಕೊಳ್ಳಲು ಒಳ್ಳೆಯ ಪುಸ್ತಕ ಓದಬೇಕು. ಪುಸ್ತಕ ಓದುವುದರಿಂದ ದಾರಿದೀಪವನ್ನಾಗಿ ರೂಪಿಸಿಕೊಳ್ಳಲು ಸಾಧ್ಯ ಹಾಗೂ ಹೆಚ್ಚು ಪುಸ್ತಕಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ ಎಂದರು.
ಭಾರತದಲ್ಲಿ ಗ್ರಂಥಾಲಯ ವಿಜ್ಞಾನದ ಪಿತಾಮಹರೆಂದೇ ಹೆಸರಾದ ದಿವಂಗತ ಡಾ.ಎಸ್ ಆರ್.ರಂಗನಾಥನ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾ ಕೇಂದ್ರ ಗ್ರಂಥಾಲಯ ಮುಖ್ಯ ಗ್ರಂಥಾಲಯಾಧಿಕಾರಿ ಸುರೇಖಾ ಸ್ವಾಗತಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಸಂಚಾರಿ ಗ್ರಂಥಾಲಯ ಮೇಲ್ವಿಚಾರಕರಾದ ನಾಗವೇಣಿ ಪ್ರಾರ್ಥಿಸಿದರು. ಕಿಶೋರ್ ರೈ ಕತ್ತಲೆಕಾಡು ಕಾರ್ಯಕ್ರಮ ನಿರೂಪಿಸಿದರು.



