ಕೊಡಗು ಜಿಲ್ಲೆಗೆ ಸಚಿವ ಸ್ಥಾನ ಬೇಕು – ಇದು ನಮ್ಮ ಅಂತಿಮ ಎಚ್ಚರಿಕೆ ಎಂದ ದಾವೂದ್ ‌

Share this post :

ಯಾರೇ ಕರ್ನಾಟಕದ ಮುಖ್ಯಮಂತ್ರಿಯಾದರು  ಯಾರೇ ಸರ್ಕಾರ ರಚಿಸಿದರೂ ಯಾರೇ ಮಂತ್ರಿಯಾದರೂ ಕೊಡಗಿನ ಪಾಲಿಗೆ ಮಾತ್ರ ಮೋಸ ಅನ್ಯಾಯ ಮತ್ತು ದ್ರೋಹವೇ ಸಿಕ್ಕಿದೆ. ಚುನಾವಣೆ ಬಂದಾಗ ಮಾತ್ರ ಕೊಡಗಿನ ಜನ ನೆನಪಾಗುತ್ತಾರೆ. ಮನೆ ಮನೆಗೆ ಬಂದು  ಈ ಬಾರಿ ಕೊಡಗಿಗೆ ಮಂತ್ರಿ ಸ್ಥಾನ ಖಚಿತ  ಕೊಡಗಿನ ಅಭಿವೃದ್ಧಿಗೆ ಹೊಸ ಅಧ್ಯಾಯ ಆರಂಭ ನಮ್ಮ ಸರ್ಕಾರ ಬಂದರೆ ಕೊಡಗಿಗೆ ನ್ಯಾಯ ಮಾಡುತ್ತೇವೆ ಎಂದು ಭರವಸೆಗಳ ಸುರಿಮಳೆ ಸುರಿಸುತ್ತಾರೆ ಹೊಸ ಮುಖಗಳನ್ನು ಪರಿಚಯಿಸುತ್ತಾರೆ ಜನರ ವಿಶ್ವಾಸ ಗಳಿಸುತ್ತಾರೆ ಮತ ಪಡೆದು ಅಧಿಕಾರಕ್ಕೆ ಬರುತ್ತಾರೆ ಆದರೆ ಸರ್ಕಾರ ರಚನೆಯಾದ ಕೂಡಲೇ ಕೊಡಗು ಮತ್ತೆ ಅನಾಥ ಜಿಲ್ಲೆಯಾಗಿ ಬಿಡುತ್ತದೆ

ಇದು ಒಂದು ಪಕ್ಷದ ವಿರುದ್ಧದ ಆರೋಪವಲ್ಲ ಕಾಂಗ್ರೆಸ್ ಇರಲಿ ಬಿಜೆಪಿ ಇರಲಿ ಜೆಡಿಎಸ್ ಇರಲಿ ಅಥವಾ ಯಾವುದೇ ಸರ್ಕಾರ ಇರಲಿ ಕೊಡಗಿನ ವಿಷಯ ಬಂದಾಗ ಎಲ್ಲರೂ ಒಂದೇ ರೀತಿಯ ನಿರ್ಲಕ್ಷ್ಯ ತೋರಿದ್ದಾರೆ ಈ ಅನ್ಯಾಯವನ್ನು ಇನ್ನೆಷ್ಟು ದಿನ ಸಹಿಸಬೇಕು ಎಂದು ಕೊಡಗಿನ ಜನ ಇಂದು ಪ್ರಶ್ನಿಸುವ ಪರಿಸ್ಥಿತಿ ಬಂದಿದೆ

ಕಾವೇರಿಯ ತಾಯಿಯ ಮಡಿಲಲ್ಲಿ ಹುಟ್ಟಿದ ಕೊಡಗು ಇಂದು ತನ್ನದೇ ಹಕ್ಕಿಗಾಗಿ ಕೈ ಚಾಚುವ ಪರಿಸ್ಥಿತಿಗೆ ತಲುಪಿದೆ ಕಾವೇರಿ ನೀರನ್ನು ಇಡೀ ಕರ್ನಾಟಕಕ್ಕೆ ಕೊಡುತ್ತಿರುವ ಕೊಡಗಿನ ಜನರಿಗೆ ಬೇಸಿಗೆಯಲ್ಲಿ ಕುಡಿಯಲು ನೀರಿಲ್ಲ ಬೋರ್‌ವೆಲ್ ನೀರು ಕುಡಿದು ಬದುಕುವ ಪರಿಸ್ಥಿತಿ ಬಂದಿದೆ ಆದರೂ ನಾವು ಎಂದಿಗೂ ಪಕ್ಕದ ಜಿಲ್ಲೆಗಳಿಗೆ ನೀರು ಕೊಡಬೇಡಿ ಎಂದು ಹೇಳಿಲ್ಲ ಮಂಡ್ಯದ ರೈತರು ಚೆನ್ನಾಗಿರಲಿ ಮೈಸೂರಿನ ಜನ ಚೆನ್ನಾಗಿರಲಿ ಬೆಂಗಳೂರಿನ ಜನರಿಗೆ ನೀರು ಸಿಗಲಿ ಎಂದು ಹಾರೈಸಿದ ಜಿಲ್ಲೆಯೇ ಕೊಡಗು ಆದರೆ ಆ ತ್ಯಾಗಕ್ಕೆ ಪ್ರತಿಫಲವಾಗಿ ಸಿಕ್ಕಿರುವುದು ನಿರ್ಲಕ್ಷ್ಯ ಮಾತ್ರ

ಒಂದು ಕಾಲದಲ್ಲಿ ಎಸ್.ಎಂ. ಕೃಷ್ಣ ಅವರ ಆಡಳಿತದಲ್ಲಿ ಕೊಡಗಿಗೆ ಪ್ರಾತಿನಿಧ್ಯ ಸಿಕ್ಕಿತ್ತು ನಂತರ ಕೆ.ಜಿ. ಬೋಪಯ್ಯ ಅವರು ವಿಧಾನಸಭೆಯ ಸ್ಪೀಕರ್ ಆಗಿದ್ದರು ಅಪ್ಪಚ್ಚು ರಂಜನ್ ಅವರು ಕೆಲಕಾಲ ಮಂತ್ರಿಯಾಗಿದ್ದರು ಆದರೆ ಕಳೆದ ಹಲವು ವರ್ಷಗಳಿಂದ ಕೊಡಗಿನ ಧ್ವನಿ ಮಂತ್ರಿಮಂಡಲದಲ್ಲಿ ಸಂಪೂರ್ಣವಾಗಿ ನಿಂತುಹೋಗಿದೆ ಸರ್ಕಾರಗಳು ಬದಲಾಗುತ್ತಿವೆ ಮಂತ್ರಿಗಳು ಬದಲಾಗುತ್ತಿದ್ದಾರೆ ಆದರೆ ಕೊಡಗಿನ ಪರಿಸ್ಥಿತಿ ಮಾತ್ರ ಬದಲಾಗುತ್ತಿಲ್ಲ

ಮಂಡ್ಯಕ್ಕೆ ಒಂದಕ್ಕಿಂತ ಹೆಚ್ಚು ಮಂತ್ರಿಗಳು ರಾಮನಗರಕ್ಕೂ ಪ್ರಾತಿನಿಧ್ಯ ಬೇರೆ ಜಿಲ್ಲೆಗಳಿಗೆ ಸಮರ್ಪಕ ಸ್ಥಾನಮಾನ ಆದರೆ ಕಾವೇರಿಯ ಉಗಮಸ್ಥಳವಾದ ಕೊಡಗು ಮಾತ್ರ ಮಂತ್ರಿಮಂಡಲದಲ್ಲಿ ಸ್ಥಾನ ಪಡೆಯಲು ಅರ್ಹವಲ್ಲವೇ? ರಾಜ್ಯಕ್ಕೆ ನೀರು ಕೊಡುವ ಜಿಲ್ಲೆಯ ಜನರಿಗೆ ಗೌರವ ಕೊಡಲು ಸರ್ಕಾರಕ್ಕೆ ಏಕೆ ಮನಸ್ಸಾಗುವುದಿಲ್ಲ?

ಕೊಡಗಿನ ಸಮಸ್ಯೆಗಳು ಕೇವಲ ಮಂತ್ರಿ ಸ್ಥಾನಕ್ಕೆ ಸೀಮಿತವಲ್ಲ ಆನೆ ಮಾನವ ಸಂಘರ್ಷದಲ್ಲಿ ಅಮಾಯಕ ರೈತರು ಜೀವ ಕಳೆದುಕೊಳ್ಳುತ್ತಿದ್ದಾರೆ ಮಳೆ ಬಂದರೆ ಗುಡ್ಡ ಕುಸಿಯುತ್ತದೆ ರಸ್ತೆಗಳು ಹದಗೆಟ್ಟಿವೆ ಆಸ್ಪತ್ರೆಗಳಲ್ಲಿ ಸೌಲಭ್ಯಗಳ ಕೊರತೆ ಇದೆ ಯುವಕರಿಗೆ ಉದ್ಯೋಗದ ಅವಕಾಶಗಳು ಕಡಿಮೆ ಪ್ರವಾಸೋದ್ಯಮದಿಂದ ಸಾವಿರಾರು ಕೋಟಿ ಆದಾಯ ಬಂದರೂ ಅದರ ಲಾಭ ಕೊಡಗಿನ ಅಭಿವೃದ್ಧಿಗೆ ತಲುಪುತ್ತಿಲ್ಲ ಕಾಡನ್ನು ಉಳಿಸುವವರು ನಾವು ಕಾವೇರಿಯನ್ನು ಉಳಿಸುವವರು ನಾವು ಪರಿಸರವನ್ನು ಕಾಪಾಡುವವರು ನಾವು ಆದರೆ ಅಭಿವೃದ್ಧಿಯ ವಿಷಯ ಬಂದಾಗ ಕೊಡಗನ್ನು ಮರೆತುಬಿಡಲಾಗುತ್ತಿದೆ

ನಾವು ಯಾರ ಬಳಿಯೂ ಭಿಕ್ಷೆ ಕೇಳುತ್ತಿಲ್ಲ ಮಂತ್ರಿ ಸ್ಥಾನ ಯಾರ ದಯೆಯೂ ಅಲ್ಲ ಅದು ಕೊಡಗಿನ ಹಕ್ಕು ತೆರಿಗೆ ನಮ್ಮದು ಕಾವೇರಿ ನಮ್ಮದು ಪ್ರಕೃತಿ ನಮ್ಮದು ದೇಶಕ್ಕಾಗಿ ರಕ್ತ ಸುರಿಸಿದ ವೀರರ ನೆಲ ನಮ್ಮದು ಆದ್ದರಿಂದ ಗೌರವಯುತ ಪ್ರಾತಿನಿಧ್ಯವೂ ನಮ್ಮ ಹಕ್ಕೇ

ಇಂದು ಕೊಡಗಿನ ಎಲ್ಲಾ ರಾಜಕೀಯ ಪಕ್ಷಗಳು ಎಲ್ಲಾ ಸಂಘ-ಸಂಸ್ಥೆಗಳು ಎಲ್ಲಾ ಧರ್ಮಗಳ ಜನರು ಎಲ್ಲಾ ಸಮುದಾಯಗಳು ರಾಜಕೀಯ ಭೇದ ಮರೆತು ಒಂದೇ ವೇದಿಕೆಯಲ್ಲಿ ನಿಲ್ಲಬೇಕಾದ ಸಮಯ ಬಂದಿದೆ ಇದು ಯಾರ ವಿರುದ್ಧದ ಹೋರಾಟವಲ್ಲ ಇದು ಕೊಡಗಿನ ಅಸ್ತಿತ್ವ ಸ್ವಾಭಿಮಾನ ಮತ್ತು ಭವಿಷ್ಯಕ್ಕಾಗಿ ನಡೆಯುವ ಹೋರಾಟ

ಕರ್ನಾಟಕ ಸರ್ಕಾರಕ್ಕೆ ನಮ್ಮ ಸ್ಪಷ್ಟ ಎಚ್ಚರಿಕೆ ಒಂದೇ ಕಾವೇರಿಯ ತಾಯಿಯ ನೆಲವನ್ನು ನಿರಂತರವಾಗಿ ನಿರ್ಲಕ್ಷಿಸುತ್ತಾ ಹೋದರೆ ಕೊಡಗಿನ ಜನರ ನ್ಯಾಯಯುತ ಹಕ್ಕನ್ನು ಕಸಿದುಕೊಳ್ಳುತ್ತಾ ಹೋದರೆ ಅದರ ನೋವು ಕೇವಲ ರಾಜಕೀಯ ಅಸಮಾಧಾನವಾಗಿ ಉಳಿಯುವುದಿಲ್ಲ  ಕಾವೇರಿಯ ತಾಯಿಯ ಆಶೀರ್ವಾದ ಎಷ್ಟು ಪವಿತ್ರವೋ ಆ ತಾಯಿಯ ನೋವೂ ಅಷ್ಟೇ ಗಂಭೀರ ಪ್ರಕೃತಿಯನ್ನು ಕಾವೇರಿಯ ಉಗಮಸ್ಥಳವನ್ನು ಮತ್ತು ಅದರ ಜನರನ್ನು ನಿರ್ಲಕ್ಷಿಸುವವರು ಇತಿಹಾಸದ ತೀರ್ಪಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ

ಕೊಡಗು ಯಾರ ಭಿಕ್ಷೆಯ ಮೇಲೂ ಬದುಕುವುದಿಲ್ಲ ಕೊಡಗು ಗೌರವದಿಂದ ಬದುಕುತ್ತದೆ  ಆದ್ದರಿಂದ ನಮಗೆ ಭಿಕ್ಷೆ ಬೇಡ ನಮ್ಮ ಹಕ್ಕು ಬೇಕು ಕೊಡಗಿಗೆ ಮಂತ್ರಿ ಸ್ಥಾನ ಬೇಕು ಕೊಡಗಿಗೆ ನ್ಯಾಯ ಬೇಕು ಕೊಡಗಿಗೆ ಗೌರವ ಬೇಕು ಇಲ್ಲವಾದರೆ ಕೊಡಗಿನ ಜನರ ಒಗ್ಗಟ್ಟಿನ ಹೋರಾಟವನ್ನು ಎದುರಿಸಲು ಪ್ರತಿಯೊಂದು ಸರ್ಕಾರವೂ ಸಿದ್ಧವಾಗಿರಬೇಕು ಇದು ವಿನಂತಿಯಲ್ಲ ಕಾವೇರಿಯ ಮಕ್ಕಳ ನ್ಯಾಯಯುತ ಹಕ್ಕಿನ ಘೋಷಣೆ

✍️ ಎಂ ಎಂ ದಾವುದ್

coorg buzz
coorg buzz