ಲಿಟಲ್ ಸ್ಕಾಲರ್ಸ್ ಅಕಾಡೆಮಿಯಲ್ಲಿ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ

Share this post :

ವಿರಾಜಪೇಟೆ: ಪಟ್ಟಣದ ಮಗ್ಗುಲದಲ್ಲಿರುವ ಲಿಟಲ್ ಸ್ಕಾಲರ್ಸ್ ಅಕಾಡೆಮಿಯು ಪಲ್ಸ್ ಪೋಲಿಯೋ ಅಭಿಯಾನದಲ್ಲಿ ಪಾಲ್ಗೊಂಡಿದ್ದು ಲಿಟಲ್ ಸ್ಕಾಲರ್ಸ್ ಅಕಾಡೆಮಿಯಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನವನ್ನು ಆಯೋಜಿಸಲಾಗಿತ್ತು. ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥೆ ಹಾಗೂ ಸಮಾಜ ಸೇವಕರಾದ ಪೂಜಾ ಸಜೇಶ್ ರವರು ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕೆ ಚಾಲನೆಯನ್ನು ನೀಡಿದರು. ಬಳಿಕ ಅವರು ಮಾತನಾಡಿ ಸರ್ಕಾರವು ದೇಶಾದ್ಯಂತ ಪೋಲಿಯೋವನ್ನು ನಿರ್ಮೂಲನೆ ಮಾಡಿ ಪೋಲಿಯೋ ಮುಕ್ತ ಭಾರತವನ್ನು ನಿರ್ಮಿಸುವ ಉದ್ದೇಶವನ್ನು ಹೊಂದಿದೆ. ಸರ್ಕಾರ ಹಾಗೂ ಆರೋಗ್ಯ ಇಲಾಖೆಯ ಜೊತೆಗೆ ನಮ್ಮ ವಿದ್ಯಾಸಂಸ್ಥೆಯು ಕೂಡ ಈ ಅಭಿಯಾನಕ್ಕೆ ಸಂಪೂರ್ಣ ಸಹಕಾರವನ್ನು ನೀಡಿ ಪಾಲ್ಗೊಂಡಿದ್ದು ಸಂಸ್ಥೆಯು ಸಮುದಾಯದ ಸಹಭಾಗಿತ್ವದ ಜೊತೆಗೆ ಆರೋಗ್ಯಯುಕ್ತ ರಾಷ್ಟ್ರದ ನಿರ್ಮಾಣಕ್ಕೆ ಕೈ ಜೋಡಿಸಿದೆ ಎಂದು ಹೇಳಿದರು.

ಈ ಕಾರ್ಯಕ್ರಮವು ಅತ್ಯಂತ ಜವಾಬ್ದಾರಿಯುತ ಹಾಗೂ ಸಾಮಾಜಿಕ ಕಳಕಳಿಯುಳ್ಳ ಕಾರ್ಯವಾಗಿದ್ದು ಇಂದು ನಮ್ಮ ವಿದ್ಯಾಸಂಸ್ಥೆಯು ಇಂತಹ ಸಮಾಜಮುಖಿ ಕಾರ್ಯದಲ್ಲಿ ಪಾಲ್ಗೊಂಡು ತನ್ನ ಸೇವೆಯನ್ನು ಸಲ್ಲಿಸುತ್ತಿದೆ ಎಂದರು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಸಿಬ್ಬಂದಿಗಳು, ಮಕ್ಕಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಮಗ್ಗುಲ ಹಾಗೂ ವಿರಾಜಪೇಟೆ ವ್ಯಾಪ್ತಿಯ ಒಟ್ಟು ಐದು ಪಲ್ಸ್ ಪೋಲಿಯೋ ಲಸಿಕಾ ಬೂತ್ ನಲ್ಲಿ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಆಡಳಿತ ಮಂಡಳಿಯವರು, ಶಿಕ್ಷಕರು ಹಾಗೂ ಸಿಬ್ಬಂದಿಗಳು ಸ್ವಯಂ ಸೇವಕರಾಗಿ ಪಾಲ್ಗೊಂಡರು. ಶಿಕ್ಷಣ ಸಂಸ್ಥೆಯೊಂದು ಪಲ್ಸ್ ಪೋಲಿಯೋ ಲಸಿಕಾ ಅಭಿಯಾನದಲ್ಲಿ ಪಾಲ್ಗೊಂಡು ಜಾಗೃತಿ ಮೂಡಿಸಿ ಸ್ವಯಂ ಸೇವೆಯನ್ನು ಸಲ್ಲಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಯಿತು.

coorg buzz
coorg buzz