ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ರಾಜ್ಯಾದ್ಯಂತ ಒಟ್ಟು 3,395 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿಯಲ್ಲಿ ತೃತೀಯ ಲಿಂಗಿ ಸಮುದಾಯಕ್ಕೆ 35 ಹುದ್ದೆಗಳನ್ನು ಮೀಸಲಿರಿಸುವ ಮೂಲಕ ವಿಶೇಷ ಅವಕಾಶ ಕಲ್ಪಿಸಲಾಗಿದೆ. 2025ರಲ್ಲಿ ಮೊದಲ ಬಾರಿಗೆ ತೃತೀಯ ಲಿಂಗಿಗಳಿಗೆ ಅವಕಾಶ ನೀಡಲಾಗಿದ್ದರೂ, ಆಯ್ಕೆ ಪ್ರಕ್ರಿಯೆ ಮತ್ತು ದೈಹಿಕ ಪರೀಕ್ಷೆಯ ಕುರಿತಾದ ಅರಿವಿನ ಕೊರತೆಯಿಂದಾಗಿ ಅಂದು ಕೇವಲ ಇಬ್ಬರು ಮಾತ್ರ ಆಯ್ಕೆಯಾಗಿದ್ದರು. ಈ ಬಾರಿಯ ನೇಮಕಾತಿಯಲ್ಲಿ ತೃತೀಯ ಲಿಂಗಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ದೃಢ ನಿಶ್ಚಯದೊಂದಿಗೆ, ಬೆಂಗಳೂರು ನಗರದಲ್ಲಿ 25 ಹುದ್ದೆಗಳು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಲಾ ಒಂದು ಹುದ್ದೆಯನ್ನು ಮೀಸಲಿಡಲಾಗಿದೆ.
ಈ ಬಾರಿಯ ನೇಮಕಾತಿಯಲ್ಲಿ ಮಹಿಳೆಯರಿಗೆ ಭರ್ಜರಿ ಆದ್ಯತೆ ನೀಡಲಾಗಿದ್ದು, ಒಟ್ಟು ಹುದ್ದೆಗಳಲ್ಲಿ ಶೇ. 66.75ರಷ್ಟು ಅಂದರೆ 2,266 ಹುದ್ದೆಗಳನ್ನು ಮಹಿಳೆಯರಿಗಾಗಿಯೇ ಮೀಸಲಿಡಲಾಗಿದೆ. ಉಳಿದಂತೆ ಪುರುಷರಿಗೆ 755 ಹುದ್ದೆಗಳು, ಸೇನಾ ಮೀಸಲಾತಿಯಡಿ 257 ಮತ್ತು ಮಹಿಳಾ ಸೇವಾ ಸಿಬ್ಬಂದಿಗೆ 82 ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ. ಪಿಯುಸಿ ವಿದ್ಯಾರ್ಹತೆ ಹೊಂದಿರುವ ಸಾಮಾನ್ಯ ವರ್ಗದ 18 ರಿಂದ 33 ವರ್ಷದ ಅಭ್ಯರ್ಥಿಗಳು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗದ 18 ರಿಂದ 35 ವರ್ಷದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಲಿಖಿತ ಪರೀಕ್ಷೆ ಹಾಗೂ ದೈಹಿಕ ಸಹಿಷ್ಣುತೆ ಮತ್ತು ಕ್ಷಮತಾ ಪರೀಕ್ಷೆಗಳ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಜೂನ್ 8ರಿಂದ ಆರಂಭವಾಗಿದ್ದು, ಜುಲೈ 3ರಂದು ಕೊನೆಯ ದಿನವಾಗಿದೆ. ಶುಲ್ಕ ಪಾವತಿಸಲು ಜುಲೈ 4ರವರೆಗೆ ಅವಕಾಶ ನೀಡಲಾಗಿದ್ದು, ಆಗಸ್ಟ್ 2ರಂದು ಲಿಖಿತ ಪರೀಕ್ಷೆ ನಡೆಯಲಿದೆ. ಜಿಲ್ಲಾವಾರು ಹುದ್ದೆಗಳ ಹಂಚಿಕೆಯಲ್ಲಿ ಬೆಂಗಳೂರು ನಗರ 2,015 ಸಿಬ್ಬಂದಿ, ಮೈಸೂರು ನಗರ 70, ಹುಬ್ಬಳ್ಳಿ-ಧಾರವಾಡ 75, ಮಂಗಳೂರು ನಗರ 125, ಬೆಂಗಳೂರು ದಕ್ಷಿಣ ಜಿಲ್ಲೆ 25, ತುಮಕೂರು ಜಿಲ್ಲೆ 50, ಕೋಲಾರ 50, ಚಿಕ್ಕಬಳ್ಳಾಪುರ 50, ಮೈಸೂರು ಜಿಲ್ಲೆ 58, ಚಾಮರಾಜನಗರ 50, ಹಾಸನ 40, ಕೊಡಗು 75, ಮಂಡ್ಯ 100, ದಾವಣಗೆರೆ 25, ಶಿವಮೊಗ್ಗ 100, ಚಿತ್ರದುರ್ಗ 75, ಹಾವೇರಿ 50, ದಕ್ಷಿಣ ಕನ್ನಡ 70, ಉಡುಪಿ 100, ಉತ್ತರ ಕನ್ನಡ 50, ಚಿಕ್ಕಮಗಳೂರು 50, ಗದಗ 35, ರೈಲ್ವೇಸ್ ಬೆಂಗಳೂರು 25, ಬಳ್ಳಾರಿ 10, ರಾಯಚೂರು 20 ಹುದ್ದೆಗಳ ಭರ್ತಿಗೆ ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು, “ತೃತೀಯ ಲಿಂಗಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು” ಎಂದು ತಿಳಿಸಿದ್ದಾರೆ.



