ಪೊನ್ನಂಪೇಟೆ: ಕೇಂದ್ರ ಸರಕಾರಿ ಅನುಮೋದಿತ ‘ಐ ಕ್ಯಾನ್ ಫೌಂಡೇಶನ್ ಇಂಡಿಯಾ’ ವತಿಯಿಂದ ‘ವಿಶ್ವ ಮಾನವೀಯತೆ ದಿನಾಚರಣೆ ‘ ಅಂಗವಾಗಿ ನೀಡಲಾಗುವ ‘ರಾಷ್ಟ್ರೀಯ ಮಾನವ ಶ್ರೇಷ್ಠತಾ ಪ್ರಶಸ್ತಿ-2026’ ಅನ್ನು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ಹಾಗೂ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಅಧ್ಯಕ್ಷರಾಗಿರುವ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರಿಗೆ ಪ್ರಧಾನ ಮಾಡಲಾಯಿತು. ‘ಭಾರತದ ಅತ್ಯಂತ ಸ್ಪೂರ್ತಿದಾಯಕ ಬದಲಾವಣೆಯ ಹರಿಕಾರ ‘ ಕ್ಷೇತ್ರದಿಂದ ಕರ್ನಾಟಕ ರಾಜ್ಯದಿಂದಲೇ ಏಕೈಕ ವ್ಯಕ್ತಿಯಾಗಿ ಆಯ್ಕೆಗೊಂಡಿದ್ದ ಸೂಫಿ ಹಾಜಿಯವರಿಗೆ ಈ ಪ್ರಶಸ್ತಿಯನ್ನು ನವದೆಹಲಿಯ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಶ್ಚಿಮ ದೆಹಲಿ ಲೋಕಸಭಾ ಕ್ಷೇತ್ರದ ಸದಸ್ಯರಾದ ಕಮಲ್ಜಿತ್ ಶೇರಾವತ್ ಅವರು ಸಮರ್ಪಣೆ ಮಾಡಿದರು.
ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸೂಫಿ ಹಾಜಿ, ಸಮಾಜ ಸೇವೆ ಎಂಬುದು ಕೇವಲ ಒಂದು ನಿರ್ದಿಷ್ಟ ಚೌಕಟ್ಟಿಗೆ ಅಥವಾ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಅದಕ್ಕೆ ಯಾವುದೇ ಭೌಗೋಳಿಕ, ಆರ್ಥಿಕ ಮತ್ತು ಸಾಮಾಜಿಕ ಗಡಿಗಳಿಲ್ಲ. ಸಮಾಜ ಸೇವೆಗೆ ವಯಸ್ಸು ಮತ್ತು ವಿದ್ಯಾರ್ಹತೆಯ ಮಿತಿಯೂ ಇಲ್ಲ. ಸಮಾಜ ಸೇವೆ ಎನ್ನುವುದು ಒಂದು ಸಾಗರವಿದ್ದಂತೆ. ನಾವು ನೀಡುವ ಒಂದು ಸಣ್ಣ ಸಹಾಯ ಹಸ್ತವೂ ಸಮಾಜದಲ್ಲಿ ದೊಡ್ಡ ಬದಲಾವಣೆಯನ್ನು ತರಬಲ್ಲದು. ಆದರೆ, ಸಮಾಜ ಸೇವೆ ಎಂಬುದು ಕೇವಲ ಪ್ರಚಾರ ಅಥವಾ ಪ್ರಶಸ್ತಿಗಾಗಿ ಮಾಡುವ ವಸ್ತುವಲ್ಲ. ಅದು ನಮ್ಮೊಳಗಿನ ಮಾನವೀಯತೆಯಿಂದ ಹೊರಹೊಮ್ಮಬೇಕಾದ ಕರ್ತವ್ಯವಾಗಬೇಕು ಎಂದು ಅನಿಸಿಕೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ದೆಹಲಿ ಸರ್ಕಾರದ ಮಾಜಿ ಶಿಕ್ಷಣ ಸಚಿವ ರಾಜ್ ಕುಮಾರ್ ಆನಂದ್, ದೆಹಲಿಯ ನಿವೃತ್ತ ಪೊಲೀಸ್ ಆಯುಕ್ತರಾದ ಲಕ್ಷ್ಮೀನಾರಾಯಣ್ ರಾವ್, ಸಿಎನ್ಎನ್ ನ್ಯೂಸ್ 18ರ ಹಿರಿಯ ಸಂಪಾದಕರಾದ ಪಲ್ಲವಿ ಘೋಷ್, ದೆಹಲಿ ವಿಶ್ವವಿದ್ಯಾಲಯದ ಉನ್ನತ ಶಿಕ್ಷಣ ವಿಭಾಗದ ವೃತ್ತಿಪರ ಅಭಿವೃದ್ಧಿ ಕೇಂದ್ರದ ನಿರ್ದೇಶಕರಾದ ಪ್ರೊ. ಗೀತಾ ಸಿಂಗ್, ರಾಷ್ಟ್ರೀಯ ವೈದ್ಯಕೀಯ ಆಯೋಗದ ಮೌಲ್ಯಮಾಪನ ಮತ್ತು ಮೌಲ್ಯನಿರ್ಧಾರ ಮಂಡಳಿಯ ಸದಸ್ಯರಾದ ಡಾ. ಜೀತು ಲಾಲ್ ಮೀನಾ, ಕೇಂದ್ರ ಗುಪ್ತಚರ ಇಲಾಖೆಯ ನಿವೃತ್ತ ಉಪನಿರ್ದೇಶಕರಾದ ಲಾಲ್ ಚತುರ್ವೇದಿ, ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ಮಾಜಿ ನಿರ್ದೇಶಕರಾದ ಡಾ. ಚೌಹಾರಿ ಲಾಲ್, ಐ ಕ್ಯಾನ್ ಫೌಂಡೇಶನ್ ಇಂಡಿಯಾ ಮುಖ್ಯಸ್ಥರಾದ ಗೌರವ ಗೌತಮ್ ಮೊದಲಾದವರು ಪಾಲ್ಗೊಂಡಿದ್ದರು. ವಿಶ್ವ ಮಾನವೀಯತೆ ದಿನಾಚರಣೆ ಅಂಗವಾಗಿ ವಿವಿಧ ರಾಜ್ಯಗಳಿಂದ ಮತ್ತು ಬೇರೆ ಬೇರೆ ಕ್ಷೇತ್ರಗಳಿಂದ ಆಯ್ಕೆಗೊಂಡಿದ್ದ 25 ಸಂಘ ಸಂಸ್ಥೆಗಳಿಗೆ ಮತ್ತು 56 ವೈಯಕ್ತಿಕ ಸಾಧಕರಿಗೆ ಸೇರಿದಂತೆ 81 ರಾಷ್ಟ್ರೀಯ ಮಾನವ ಶ್ರೇಷ್ಠತಾ ಪ್ರಶಸ್ತಿಯನ್ನು ಸಮಾರಂಭದಲ್ಲಿ ಪ್ರಧಾನ ಮಾಡಲಾಯಿತು.



