ನಾಟಿ ಔಷಧಿ ಸೊಪ್ಪಿನ ರಸ ಕುಡಿಸುವುದರಿಂದ ಮಕ್ಕಳ ಸಾವಿನ ಪ್ರಮಾಣ ಹೆಚ್ಚಳ : ಡಾ.ಮಧುಸೂದನ್‌ ಆತಂಕ

Share this post :

ಮಡಿಕೇರಿ : ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಆರು ತಿಂಗಳವರೆಗೆ ಕಡ್ಡಾಯವಾಗಿ ಎದೆಹಾಲು ಕುಡಿಸಬೇಕು. ಜೊತೆಗೆ ೨ ವರ್ಷದವರೆಗೆ ಪೂರಕ ಆಹಾರದ ಜೊತೆಗೆ ಎದೆಹಾಲು ಉಣಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರ್‌ಸಿಎಚ್ ಅಧಿಕಾರಿ ಡಾ.ಮಧುಸೂದನ್ ಹೇಳಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಮಕ್ಕಳ ವಿಭಾಗದಿಂದ ನಗರದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯ ಮಕ್ಕಳ ಹೊರ ರೋಗಿ ವಿಭಾಗದಲ್ಲಿ ಬುಧವಾರ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಎದೆಹಾಲಿನ ಮಹತ್ವ ಕುರಿತು ಆಗಸ್ಟ್ ೦೧ ರಿಂದ ೦೭ ರವರೆಗೆ ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ. ಎದೆ ಹಾಲಿನ ಮಹತ್ವ ಬಗ್ಗೆ ಹೆಚ್ಚಿನ ಅರಿವು ಮೂಡಿಸಿದರು ಸಹ ಮೂಡನಂಬಿಕೆಗೆ ಒಳಗಾಗುವುದು ತಪ್ಪುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಕ್ಕಳ ಬೆಳವಣಿಗೆಗೆ ಎದೆ ಹಾಲು ಅತ್ಯಮೂಲ್ಯವಾಗಿದೆ. ಎದೆ ಹಾಲಿನ ಮಹತ್ವ ಕುರಿತು ಸ್ಪರ್ಧಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ೬ ತಿಂಗಳ ಒಳಗಿನ ಮಕ್ಕಳಿಗೆ ನಾಟಿ ಔಷಧಿ ಸೊಪ್ಪಿನ ರಸ ಕುಡಿಸಿ ಉಸಿರಾಟದ ತೊಂದರೆಯಾಗಿ ಸಾವನ್ನಪ್ಪುತ್ತಿರುವುದು ಕಂಡುಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕಳೆದ ಮೂರು ತಿಂಗಳಲ್ಲಿ ಒಂದು ವರ್ಷದೊಳಗಿನ ೩೧ ಮಕ್ಕಳು ವಿವಿಧ ಕಾರಣಗಳಿಂದ ಸಾವನಪ್ಪಿರುವುದು ಕಂಡು ಬಂದಿದೆ ಎಂದು ಮಾಹಿತಿ ನೀಡಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಪುರುಷೋತ್ತಮ ಅವರು ಮಾತನಾಡಿ ಎದೆಹಾಲು ಉಣಿಸುವುದು ಒಂದು ಸಹಜ ಪ್ರಕ್ರಿಯೆಯಾಗಿದ್ದರೂ ಸಾಂಸ್ಥಿಕ ಹೆರಿಗೆಗಳು ಜಾಸ್ತಿ ಆಗುತ್ತಿದ್ದರು ಎದೆಹಾಲು ಕುಡಿಸುವವರ ಪ್ರಮಾಣ ಕಡಿಮೆಯಾಗುತ್ತಿದೆ ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಸ್ವಾಗತಿಸಿ, ನಿರೂಪಿಸಿದರು. ಶುಶ್ರೂಷಕ ಅಧಿಕ್ಷಕಿ ವೀಣಾ, ಅಸೋಸಿಯೇಟ್ ಪ್ರೊಫೆಸರ್ ಗುರುಪಾದ, ತಾಲೂಕು ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸುಮತಿ, ಕೇರ್ ಕಂಪನಿಯನ್ ಪ್ರೋಗ್ರಾಮ್ ವತಿಯಿಂದ ನಾಗೇಶ್ ಮತ್ತು ಪ್ರಶಾಂತ್, ಆರೋಗ್ಯ ಇಲಾಖೆಯ ಮತ್ತು ಮಕ್ಕಳ ವಿಭಾಗದ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

coorg buzz
WhatsApp Image 2026-08-11 at 16.11.22