ಗಣಪತಿ ವಿಸರ್ಜನೋತ್ಸವಕ್ಕೆ ವಿರಾಜಪೇಟೆ ಸಜ್ಜು: ಬದಲಿ ವಾಹನ ಸಂಚಾರ ಮಾರ್ಗಗಳು, ಪಾರ್ಕಿಂಗ್ ನಿಯಮ ಹೀಗಿವೆ!

Share this post :

ವಿರಾಜಪೇಟೆ: ಇಲ್ಲಿನ ನಗರದಲ್ಲಿ ನಡೆಯಲಿರುವ ವೈಭವದ ಗೌರಿ-ಗಣಪತಿ ವಿಸರ್ಜನಾ ಮೆರವಣಿಗೆಯ ಹಿನ್ನೆಲೆಯಲ್ಲಿ, ಸಾರ್ವಜನಿಕರ ಸುಗಮ ಸಂಚಾರ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಸೆಪ್ಟೆಂಬರ್ 25ರ ಮಧ್ಯಾಹ್ನ 2:00 ಗಂಟೆಯಿಂದ ಸೆಪ್ಟೆಂಬರ್ 26ರ ಬೆಳಿಗ್ಗೆ 10:00 ಗಂಟೆಯವರೆಗೆ ವಾಹನ ಸಂಚಾರ ನಿರ್ಬಂಧಿಸಿ ಕೊಡಗು ಜಿಲ್ಲಾಧಿಕಾರಿ ಸೋಮಶೇಖರ್ ಎಸ್.ಜೆ. ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.

22 ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ:

ವಿರಾಜಪೇಟೆ ನಗರದಲ್ಲಿ ಪ್ರತಿಷ್ಠಾಪಿಸಲಾಗಿರುವ ಒಟ್ಟು 22 ಗಣೇಶ ಮೂರ್ತಿಗಳನ್ನು ಸಾಮೂಹಿಕವಾಗಿ ವಿಸರ್ಜನೆ ಮಾಡಲಾಗುತ್ತಿದೆ. ಈ ವೈಭವದ ಮೆರವಣಿಗೆಯು ನಗರದ ಪುರಭವನ, ಮಡಿಕೇರಿ ರಸ್ತೆ ಹಾಗೂ ತಾಲ್ಲೂಕು ಕಚೇರಿ ಮಾರ್ಗವಾಗಿ ಹಾದು ವಿರಾಜಪೇಟೆ ಕೆರೆಗೆ ತೆರಳಲಿದೆ. ಈ ಉತ್ಸವದಲ್ಲಿ ಸುಮಾರು 20,000 ದಿಂದ 25,000 ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಸಂಚಾರ ದಟ್ಟಣೆ ನಿಯಂತ್ರಿಸಲು ಪರ್ಯಾಯ ಮಾರ್ಗ ಹಾಗೂ ಪಾರ್ಕಿಂಗ್‌ಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಪ್ರಮುಖ ಬದಲಿ ಸಂಚಾರ ಮಾರ್ಗಗಳು:

ಕೇರಳದಿಂದ ಗೋಣಿಕೊಪ್ಪ/ಸಿದ್ದಾಪುರಕ್ಕೆ: ಪೆರುಂಬಾಡಿ ಚೆಕ್ ಪೋಸ್ಟ್ ➔ ಬಾಳುಗೋಡು ➔ ಬಿಟ್ಟಂಗಾಲ ಜಂಕ್ಷನ್ ➔ ಕೈಕೇರಿ ಜಂಕ್ಷನ್ ➔ ಗದ್ದೆ ಮನೆ ರಸ್ತೆ ಜಂಕ್ಷನ್ ಮಾರ್ಗವಾಗಿ ಪಾಲಿಬೆಟ್ಟ-ಸಿದ್ದಾಪುರಕ್ಕೆ ತೆರಳುವುದು.

ಸಿದ್ದಾಪುರದಿಂದ ಕೇರಳಕ್ಕೆ: ಕೈಕೇರಿ ➔ ಬಿಟ್ಟಂಗಾಲ ➔ ಬಾಳುಗೋಡು ➔ ಪೆರುಂಬಾಡಿ ಮಾರ್ಗ.

ಮಡಿಕೇರಿಯಿಂದ ಕೇರಳಕ್ಕೆ: ಮೂರ್ನಾಡು ➔ ಕೊಂಡಂಗೇರಿ ➔ ಅಮ್ಮತ್ತಿ ➔ ಪಾಲಿಬೆಟ್ಟ ➔ ಕೈಕೇರಿ ➔ ಬಿಟ್ಟಂಗಾಲ ➔ ಬಾಳುಗೋಡು ➔ ಪೆರುಂಬಾಡಿ ಮಾಕುಟ್ಟ ಮಾರ್ಗ.

ಕೇರಳದಿಂದ ಮಡಿಕೇರಿಗೆ: ಪೆರುಂಬಾಡಿ ➔ ಬಿಟ್ಟಂಗಾಲ ➔ ಕೈಕೇರಿ ➔ ಪಾಲಿಬೆಟ್ಟ ➔ ಮೂರ್ನಾಡು ಮಾರ್ಗವಾಗಿ ಮಡಿಕೇರಿ ತಲುಪುವುದು.

ಮಡಿಕೇರಿಯಿಂದ ಮೈಸೂರು/ಬೆಂಗಳೂರಿಗೆ: ಮೂರ್ನಾಡು ➔ ಕೊಂಡಂಗೇರಿ ➔ ಅಮ್ಮತ್ತಿ ➔ ಪಾಲಿಬೆಟ್ಟ ➔ ಕೈಕೇರಿ-ಗೋಣಿಕೊಪ್ಪ ಮಾರ್ಗ.

ಮೈಸೂರು/ಬೆಂಗಳೂರಿನಿಂದ ಮಡಿಕೇರಿಗೆ: ಗೋಣಿಕೊಪ್ಪ ➔ ಸಿದ್ದಾಪುರ ಮಾರ್ಗವಾಗಿ ಮಡಿಕೇರಿಗೆ ಸಂಚರಿಸುವುದು.

ನಿಗದಿತ ಪಾರ್ಕಿಂಗ್ ಸ್ಥಳಗಳು:

ಪೆರಂಬಾಡಿ ಕಡೆಯಿಂದ: ಕೀರ್ತಿ ರೆಸ್ಟೋರೆಂಟ್ ಮುಂಭಾಗದಿಂದ ಆರ್ಜಿ ಕಡೆಗೆ ಹೋಗುವ ರಸ್ತೆಯ ಎಡಭಾಗದಲ್ಲಿ ಪಾರ್ಕಿಂಗ್ ಮಾಡಬೇಕು.

ಸಿದ್ದಾಪುರ ಕಡೆಯಿಂದ: ಮಗ್ಗುಲ ಜಂಕ್ಷನ್ (ಡೆಂಟಲ್ ಕಾಲೇಜು ಜಂಕ್ಷನ್) ಮತ್ತು ರವಿರಾಜ್ ಗ್ಯಾಸ್ ಏಜೆನ್ಸಿ ಕಚೇರಿಯಿಂದ ಐಮಂಗಳ ಕಡೆಗೆ ಹೋಗುವ ರಸ್ತೆಯ ಎಡಬದಿಯಲ್ಲಿ ನಿಲ್ಲಿಸಬೇಕು.

ಗೋಣಿಕೊಪ್ಪ ಕಡೆಯಿಂದ: ಪಂಜರುಪೇಟೆಯ ಸರ್ವೋದಯ ಕಾಲೇಜಿನ ಬಳಿಯಿಂದ ಕಾವೇರಿ ಕಾಲೇಜು ಕಡೆಗೆ ಎಡಬದಿಯಲ್ಲಿ ನಿಲ್ಲಿಸತಕ್ಕದ್ದು.

ಬೇಟೋಳಿ, ಗುಂಡಿಗೆರೆ ಕಡೆಯಿಂದ: ಮಹಿಳಾ ಸಮಾಜ ರಸ್ತೆಯ ಎಡಬದಿಯಲ್ಲಿ ನಿಲ್ಲಿಸಬೇಕು.

ಮಡಿಕೇರಿ ಹಾಗೂ ಒಂಟಿಯಂಗಡಿ ಕಡೆಯಿಂದ: ಕೊಡಗು ಸಮಾಜ ಜಂಕ್ಷನ್‌ನಿಂದ ಚೆಂಬೆಬೆಳ್ಳೂರಿಗೆ ಹೋಗುವ ರಸ್ತೆಯ ಎಡಭಾಗದಲ್ಲಿ ವಾಹನ ನಿಲ್ಲಿಸಬೇಕು.

ಸಂಪೂರ್ಣ ವಾಹನ ಸಂಚಾರ ನಿಸೇಧಿತ ರಸ್ತೆಗಳು:

ಸೆ.25ರ ಅಪರಾಹ್ನ 2 ರಿಂದ ಸೆ.26ರ ಬೆಳಿಗ್ಗೆ 10 ಗಂಟೆಯವರೆಗೆ ತಾಲ್ಲೂಕು ಕಚೇರಿ, ದೊಡ್ಡಟ್ಟಿ ವೃತ್ತ, ಅಪ್ಸರಾ, ಸ್ವಾಮಿ ರಾವ್ ರಸ್ತೆ, ದ್ವಾರಿ ಮುಖ್ಯಸ್ಥ ರಸ್ತೆ, ಅರಸು ನಗರ ರಸ್ತೆ, ಎಫ್.ಎಂ.ಸಿ ರಸ್ತೆ, ಗಡಿಯಾರ ಕಂಬ, ಮಲೆಬಾರ್ ರಸ್ತೆ, ದೊಡ್ಡಟ್ಟಿ ವೃತ್ತದಿಂದ ಪಂಜರುಪೇಟೆ ಸರ್ವೋದಯ ಕಾಲೇಜುವರೆಗೆ ಹಾಗೂ ಮಗ್ಗುಲ ಜಂಕ್ಷನ್‌ನಿಂದ ಮೊಹಲ್ಲಾ ಜಂಕ್ಷನ್‌ವರೆಗೆ ವಾಹನ ಸಂಚಾರ ಹಾಗೂ ಪಾರ್ಕಿಂಗ್ ಸಂಪೂರ್ಣ ನಿಷೇಧಿಸಲಾಗಿದೆ.

ಈ ನಿಯಮ ಉಲ್ಲಂಘಿಸಿದರೆ ಮೋಟಾರು ವಾಹನ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ.

coorg buzz
WhatsApp Image 2026-08-11 at 16.11.22