ಮಡಿಕೇರಿ : ಸದಾ ಸುದ್ದಿ ಬೆನ್ನತ್ತಿ ಓಡುವ, ದಿನವಿಡೀ ಅಕ್ಷರಗಳೊಂದಿಗೆ ಸೆಣಸಾಡುವ ಪತ್ರಕರ್ತರು ಇದೀಗ ತಮ್ಮ ಕೆಲಸ-ಕಾರ್ಯಗಳನ್ನು ಕೆಲಕಾಲ ಬದಿಗೊತ್ತಿ ಬ್ಯಾಟ್–ಬಾಲ್ ಹಿಡಿದು ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ. ಕ್ರೀಡಾ ತವರು ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಹಬ್ಬಕ್ಕೆ ಸಜ್ಜಾಗಿದ್ದು, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಈ ಪ್ರತಿಷ್ಠಿತ ಪಂದ್ಯಾವಳಿಯ ಆತಿಥ್ಯ ವಹಿಸಿದೆ.
ನ. 2 ಮತ್ತು 3ರಂದು ನಡೆಯಲಿರುವ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಟೂರ್ನಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಪತ್ರಕರ್ತರ ತಂಡಗಳು ಪಾಲ್ಗೊಳ್ಳಲಿದ್ದು, ಎರಡು ದಿನಗಳ ಕಾಲ ಮಡಿಕೇರಿ ಕ್ರಿಕೆಟ್ ಸಂಭ್ರಮದಲ್ಲಿ ಮಿಂದೇಳಲಿದೆ.
ಸುದ್ದಿಗಾಗಿ ಓಡುವ ಹೆಜ್ಜೆಗಳು, ಮೈದಾನದಲ್ಲಿ ರನ್ಗಾಗಿ ಓಡಲಿದ್ದು, ಪ್ರತಿದಿನ ಸುದ್ದಿ ಬರೆಯುವ ಕೈಗಳು ಬ್ಯಾಟ್ ಹಿಡಿಯಲಿವೆ. ವೃತ್ತಿಯ ಒತ್ತಡದ ನಡುವೆ ಸಹೋದ್ಯೋಗಿಗಳೊಂದಿಗೆ ಸ್ನೇಹ, ಕ್ರೀಡಾಸ್ಫೂರ್ತಿ ಹಾಗೂ ಸಂಘಟನಾ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಪಂದ್ಯಾವಳಿ ಆಯೋಜಿಸಲಾಗಿದೆ. ಕೊಡಗಿನ ಆತಿಥ್ಯ, ಪ್ರಕೃತಿಯ ಸೊಬಗು ಹಾಗೂ ಕ್ರೀಡಾಸ್ಫೂರ್ತಿಯ ನಡುವೆ ನಡೆಯಲಿರುವ ಈ ಕ್ರಿಕೆಟ್ ಹಬ್ಬ ಪತ್ರಕರ್ತರ ಪಾಲಿಗೆ ವಿಶಿಷ್ಟ ಅನುಭವವಾಗಲಿದೆ.
24 ತಂಡಗಳ ಸೆಣಸಾಟ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾಗುತ್ತಿರುವ ಈ ಪಂದ್ಯಾವಳಿಯಲ್ಲಿ 22 ಹೊರಜಿಲ್ಲೆಗಳ ಪತ್ರಕರ್ತರ ತಂಡಗಳೊAದಿಗೆ ಅತಿಥೇಯ ಕೊಡಗಿನ ಎರಡು ತಂಡಗಳು ಸೇರಿದಂತೆ ಒಟ್ಟು 24 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ.
ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಲು ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕಳೆದ ಎರಡು ತಿಂಗಳಿನಿAದ ನಿರಂತರವಾಗಿ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದೆ. ಇದೀಗ ಕ್ರಿಕೆಟ್ ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು, ಪಂದ್ಯಾವಳಿಗೆ ಅಗತ್ಯವಿರುವ ಮೈದಾನ, ಪಿಚ್, ವಸತಿ, ಆಹಾರ ಸೇರಿದಂತೆ ವಿವಿಧ ವ್ಯವಸ್ಥೆಗಳ ಸಿದ್ಧತೆಗಳು ಭರದಿಂದ ಸಾಗಿವೆ.
ಕೊಡಗು ಜಿಲ್ಲೆಯ ಆತಿಥ್ಯ
ಕೊಡಗು ಜಿಲ್ಲೆಯಲ್ಲಿ ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟಕ್ಕೆ ವಿಶೇಷ ಇತಿಹಾಸವಿದ್ದು, 2013ರಲ್ಲಿ ಅಂದಿನ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾಗಿದ್ದ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರ ನೇತೃತ್ವದಲ್ಲಿ ಮೊದಲ ಬಾರಿಗೆ ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟ ಆಯೋಜಿಸಲಾಗಿತ್ತು. ಇದೀಗ 13 ವರ್ಷಗಳ ಬಳಿಕ ಮತ್ತೊಮ್ಮೆ ಮಡಿಕೇರಿ ಈ ಕ್ರೀಡಾ ಸಂಭ್ರಮಕ್ಕೆ ಆತಿಥ್ಯ ವಹಿಸುತ್ತಿರುವುದು ವಿಶೇಷ.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ ಅವರ ಮುಂದಾಳತ್ವದಲ್ಲಿ ಈ ಬಾರಿ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದು, ಕೊಡಗಿನಲ್ಲಿ ಎರಡನೇ ಬಾರಿಗೆ ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟ ಆಯೋಜನೆಯಾಗುತ್ತಿದೆ.
ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಪ್ರತಿ ಜಿಲ್ಲೆಯಿಂದ 16 ಮಂದಿ ಆಟಗಾರರು ಆಗಮಿಸಲಿದ್ದು, 24 ತಂಡಗಳಿAದ ಒಟ್ಟು 384 ಮಂದಿ ಪತ್ರಕರ್ತರು ಮೈದಾನಕ್ಕಿಳಿಯಲಿದ್ದಾರೆ. ಇವರೊಂದಿಗೆ ಆತಿಥೇಯ ಕೊಡಗಿನ ಪತ್ರಕರ್ತರು ಪಂದ್ಯಾವಳಿಯ ವಿವಿಧ ಜವಾಬ್ದಾರಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
3 ಮೈದಾನ – 5 ಪಿಚ್
ಲೀಗ್ ಮಾದರಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಗಾಗಿ ಮಡಿಕೇರಿಯ ಮೂರು ಪ್ರಮುಖ ಮೈದಾನಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಒಟ್ಟು 5 ಪಿಚ್ಗಳಲ್ಲಿ ಪಂದ್ಯಗಳು ನಡೆಯಲಿದ್ದು, ಪಂದ್ಯಾವಳಿಯ ಸುಗಮ ನಿರ್ವಹಣೆಗೆ ಮೈದಾನ ಸಮಿತಿ ಸಿದ್ಧತೆಗಳನ್ನು ಭರದಿಂದ ಕೈಗೊಂಡಿದೆ.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನವನ್ನು ಪ್ರಮುಖ ಕ್ರೀಡಾಂಗಣವಾಗಿ ಬಳಸಿಕೊಳ್ಳಲಾಗುತ್ತಿದ್ದು, ಇಲ್ಲಿ ಎರಡು ಪಿಚ್ಗಳಲ್ಲಿ ಪಂದ್ಯಗಳು ನಡೆಯಲಿವೆ. ಜ. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ಪಿಚ್ ಹಾಗೂ ಪೊಲೀಸ್ ಕವಾಯತು ಮೈದಾನದಲ್ಲಿ ಒಂದು ಪಿಚ್ ಸಿದ್ಧಪಡಿಸಲಾಗುತ್ತಿದೆ.
ಪಂದ್ಯಾವಳಿಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಮೈದಾನ ಸಮಿತಿ ಪಿಚ್ ನಿರ್ಮಾಣ, ಮೈದಾನದ ಸಮತಟ್ಟು ಹಾಗೂ ಅಗತ್ಯ ಮೂಲಸೌಕರ್ಯಗಳ ಸಿದ್ಧತೆ ಸೇರಿದಂತೆ ವಿವಿಧ ಕಾರ್ಯಗಳಲ್ಲಿ ನಿರತವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ 24 ತಂಡಗಳ ಆಟಗಾರರಿಗೆ ಉತ್ತಮ ಕ್ರೀಡಾ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ.
ಆಕರ್ಷಕ ನಗದು ಬಹುಮಾನ
ವಿಜೇತ ತಂಡಕ್ಕೆ ರೂ. 1 ಲಕ್ಷ, ರನ್ನರ್ ಅಪ್ ತಂಡಕ್ಕೆ ರೂ. 50 ಸಾವಿರ, ತೃತೀಯ ರೂ. 25 ಸಾವಿರ ಹಾಗೂ ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ ರೂ. 25 ಸಾವಿರ ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿಗಳನ್ನು ವಿತರಿಸಲಾಗುವುದು ಇದರೊಂದಿಗೆ. ಪ್ರತಿ ಪಂದ್ಯಕ್ಕೂ ಮ್ಯಾನ್ ಆಫ್ ದಿ ಮ್ಯಾಚ್ ಸೇರಿದಂತೆ ಪಂದ್ಯಾವಳಿಯಲ್ಲಿ ಶಿಸ್ತುಬದ್ಧ ತಂಡ, ಮ್ಯಾನ್ ಆಫ್ ದಿ ಸೀರಿಸ್, ಬೆಸ್ಟ್ ಕ್ಯಾಚ್, ಬೆಸ್ಟ್ ಬ್ಯಾಟ್ಸ್ಮನ್, ಬೆಸ್ಟ್ ಬೌಲರ್ ಹೀಗೆ ವಿವಿಧ ರೀತಿಯ ವೈಯಕ್ತಿಕ ಬಹುಮಾನವೂ ಇರಲಿದೆ.
ಭಾಗವಹಿಸುತ್ತಿರುವ ತಂಡಗಳು
ಶಿವಮೊಗ್ಗ, ಬಾಗಲಕೋಟೆ, ಹಾವೇರಿ, ಮಂಡ್ಯ, ಚಾಮರಾಜನಗರ, ತುಮಕೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಕೋಲಾರ, ಚಿತ್ರದುರ್ಗ, ಹಾಸನ, ರಾಮನಗರ, ಉಡುಪಿ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಮೈಸೂರು, ಕೊಪ್ಪಳ, ಬೀದರ್, ದಾವಣಗೆರೆ, ಗದಗ, ಬಳ್ಳಾರಿ, ಕೊಡಗು ತಂಡಗಳು ಭಾಗವಹಿಸಲಿವೆ.
ಕೊಡಗು ರೋಬಸ್ಟಾ, ಅರೇಬಿಕಾ
ವಿಶ್ವದ ಪ್ರಮುಖ ಕಾಫಿ ಉತ್ಪಾದನಾ ಪ್ರದೇಶಗಳಲ್ಲಿ ಒಂದಾಗಿರುವ ಕೊಡಗು ಜಿಲ್ಲೆಯ ವೈಶಿಷ್ಟ್ಯವನ್ನು ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯಲ್ಲೂ ಪ್ರತಿಬಿಂಬಿಸಲಾಗಿದೆ. ಅತಿಥೇಯ ಕೊಡಗಿನ ಎರಡು ತಂಡಗಳಿಗೆ ಇಲ್ಲಿನ ಪ್ರಮುಖ ಕಾಫಿ ತಳಿಗಳಾದ ಅರೇಬಿಕಾ ಮತ್ತು ರೋಬಸ್ಟಾ ಹೆಸರುಗಳನ್ನು ನಾಮಕರಣ ಮಾಡಿರುವುದು ವಿಶೇಷವಾಗಿದೆ.
ಮಂಜು ಸುವರ್ಣ ನಾಯಕತ್ವದ ಕೊಡಗು ಅರೇಬಿಕಾ ಹಾಗೂ ರೆಜಿತ್ ಕುಮಾರ್ ಗುಹ್ಯ ನಾಯಕತ್ವದ ಕೊಡಗು ರೋಬಸ್ಟಾ ತಂಡಗಳು ಅತಿಥೇಯ ಜಿಲ್ಲೆಯ ಪ್ರತಿನಿಧಿಗಳಾಗಿ ಪ್ರಶಸ್ತಿಗಾಗಿ ಸೆಣಸಾಡಲಿವೆ. ಕೊಡಗಿನ ಕಾಫಿ ಪರಂಪರೆಯನ್ನು ಪರಿಚಯಿಸುವುದರೊಂದಿಗೆ ಜಿಲ್ಲೆಯ ಗುರುತನ್ನು ಕ್ರೀಡಾ ವೇದಿಕೆಯಲ್ಲೂ ಎತ್ತಿಹಿಡಿಯುವ ಪ್ರಯತ್ನ ಇದಾಗಿದೆ.
<<<< >>>>
ನ. 2 ಹಾಗೂ 3 ರಂದು ನಡೆಯಲಿರುವ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಟೂರ್ನಿಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಉಪಸಮಿತಿಗಳನ್ನು ರಚಿಸಿ ಕಾರ್ಯಯೋಜನೆ ರೂಪಿಸಲಾಗಿದೆ. ಎಲ್ಲವೂ ವ್ಯವಸ್ಥಿತವಾಗಿ ನಡೆಸಲು ಶ್ರಮಿಸಲಾಗುತ್ತಿದ್ದು, ಆಗಮಿಸುವ ಎಲ್ಲಾ ತಂಡಗಳಿಗೂ ವಸತಿ, ಊಟದ ವ್ಯವಸ್ಥೆಯನ್ನು 2 ದಿನಗಳ ಕಾಲ ಮಾಡಲಾಗಿದೆ. ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಮಾದರಿ ಪಂದ್ಯಾವಳಿಯಾಗಿ ರೂಪುಗೊಳ್ಳುವ ವಿಶ್ವಾಸ ಹೊಂದಿದ್ದೇವೆ.

– ಬಾಚರಣಿಯಂಡ ಅನುಕಾರ್ಯಪ್ಪ,
ಅಧ್ಯಕ್ಷರು,
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ
<<<< >>>>
ಪಂದ್ಯಾವಳಿಯನ್ನು ವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ನಿರಂತರ ಶ್ರಮವಹಿಸಲಾಗುತ್ತಿದೆ. ಪತ್ರಕರ್ತರ ಕ್ರೀಡಾ ಹಬ್ಬದಂತೆ ಈ ಪಂದ್ಯಾವಳಿ ನಡೆಯುತ್ತಿರುವುದು ವಿಶೇಷ. 22 ಜಿಲ್ಲೆಗಳ ಆಟಗಾರರು ಕೊಡಗಿಗೆ ಆಗಮಿಸಲು ಉತ್ಸಾಹ ತೋರುತ್ತಿದ್ದಾರೆ. ಸಂಘಟನಾತ್ಮಕವಾಗಿ ಬಲವರ್ಧನೆಗಳು ಕ್ರೀಡೆ ಸಹಕಾರಿಯಾಗಿದ್ದು, ರಾಜಕೀಯ, ಸಾಮಾಜಿಕ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.

– ಹೆಚ್.ಜೆ. ರಾಕೇಶ್,
ಪ್ರಧಾನ ಕಾರ್ಯದರ್ಶಿ,
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ



