ವಿರಾಜಪೇಟೆ: ಸಮೀಪದ ಬೇಟೋಳಿ ಗ್ರಾಮದ ರಾಮನಗರದಲ್ಲಿರುವ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನವರಾತ್ರಿ ಉತ್ಸವ ಹಾಗೂ ವನದುರ್ಗೆ ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ಶ್ರದ್ಧಾ-ಭಕ್ತಿಯಿಂದ ನೆರವೇರಿಸಲಾಯಿತು.
ದೇವಸ್ಥಾನದ ಪ್ರಧಾನ ಅರ್ಚಕರಾದ ವಿಶ್ವನಾಥ್ ಭಟ್ ಹಾಗೂ ವಾಮನ ಮೂರ್ತಿ ಭಟ್ ಅವರ ನೇತೃತ್ವದಲ್ಲಿ ಬೆಳಿಗ್ಗೆಯಿಂದಲೇ ಧಾರ್ಮಿಕ ವಿಧಿವಿಧಾನಗಳು ಆರಂಭವಾದವು. ಮೊದಲಿಗೆ ದೇವಸ್ಥಾನದ ಒಳ ಆವರಣದಲ್ಲಿರುವ ಶ್ರೀ ಮಹಾಗಣಪತಿ, ಶ್ರೀ ಅಯ್ಯಪ್ಪ ಸ್ವಾಮಿ ಹಾಗೂ ಶ್ರೀ ನಾಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ವನದುರ್ಗೆ ದೇವಿಗೆ ಸಂಕಲ್ಪ ನೆರವೇರಿಸಿ ಪ್ರಾರ್ಥನೆ ಸಲ್ಲಿಸಲಾಯಿತು.
ಉತ್ಸವದ ಪ್ರಯುಕ್ತ ದೇವಿಗೆ ಹಾಲಿನ ಅಭಿಷೇಕ, ಸಿಯಾಳ (ಎಳನೀರು) ಅಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಅಲಂಕಾರ ಪೂಜೆ ನೆರವೇರಿತು. ಅರ್ಚಕರು ಶ್ರೀದೇವಿ ಅಷ್ಟೋತ್ತರ ಶತನಾಮಾವಳಿ ಪಠಿಸಿ, ಪಾರಾಯಣ, ಕುಂಕುಮಾರ್ಚನೆ ಹಾಗೂ ಪುಷ್ಪಾರ್ಚನೆ ಸೇವೆಗಳನ್ನು ನೆರವೇರಿಸಿದರು. ನೆರೆದಿದ್ದ ಭಕ್ತಾದಿಗಳು ಹಣ್ಣು-ಕಾಯಿ ಸಮರ್ಪಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ಮಹಾಪೂಜೆಯ ನಂತರ ಅರ್ಚಕರು ಗ್ರಾಮ ಹಾಗೂ ನಾಡಿನ ಸುಭಿಕ್ಷೆಗಾಗಿ ಪ್ರಾರ್ಥನೆ ಸಲ್ಲಿಸಿದರು. ತದನಂತರ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಮತ್ತು ಮಹಾ ಅನ್ನಸಂತರ್ಪಣೆ ನಡೆಯಿತು. ಬೇಟೋಳಿ, ಹೆಗ್ಗಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷರಾದ ಬಿ.ಪಿ. ಸಂತೋಷ್, ಉಪಾಧ್ಯಕ್ಷ ನಂದ ಬಿ.ಜಿ., ಕಾರ್ಯದರ್ಶಿ ಬಿ.ಎನ್. ಶಾಂತಿಭೂಷಣ್, ಖಜಾಂಚಿ ಜ್ಯೋತಿ, ಸದಸ್ಯರಾದ ಸುಮನ, ಸಂಗೀತ, ವೀಣಾ ಶಶಿಧರ್, ರಾಮಶರ್ಮ ಹಾಗೂ ಸೀತಮ್ಮ ಉಪಸ್ಥಿತರಿದ್ದರು.



