ವೀರಾಜಪೇಟೆ ಪೊಮ್ಮಕ್ಕಡ ಒಕ್ಕೂಟದ ವಾರ್ಷಿಕ ಮಹಾಸಭೆ

Share this post :

ವಿರಾಜಪೇಟೆ : ವಿರಾಜಪೇಟೆ ಕೊಡವ ಸಮಾಜದ ಕೊಡವ ಪೊಮ್ಮಕ್ಕಡ ಒಕ್ಕೂಟದ 2025-26 ನೇ ಸಾಲಿನ ಮಹಾಸಭೆ ಒಕ್ಕೂಟದ ಅಧ್ಯಕ್ಷೆ ತಾತಂಡ ಜ್ಯೋತಿ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆಯಿತು.

ಒಕ್ಕೂಟದ ಅಧ್ಯಕ್ಷೆ ತಾತಂಡ ಜ್ಯೋತಿ ಪ್ರಕಾಶ್ ಮಾತನಾಡಿ, ಮಹಿಳೆಯರು ಇಂದು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾಳೆ. ಆಕೆ ಕೇವಲ ಮನೆಯ ನಿರ್ವಹಣೆ ಮಾಡುವಲ್ಲಿ ಮಾತ್ರ ಸೀಮಿತವಾಗದೆ ಸಮಾಜದಲ್ಲಿಯೂ ತನ್ನ ಸೇವೆಯನ್ನು ಸಲ್ಲಿಸುತ್ತಾ ಬಂದಿರುತ್ತಾಳೆ. ಯಾವುದೇ ಕೆಲಸವನ್ನು ನಾವು ಮಾಡುವ ಸಂದರ್ಭದಲ್ಲಿ ಶ್ರದ್ಧೆಯಿಂದ ಪ್ರಾಮಾಣಿಕತೆಯಿಂದ ಮಾಡಬೇಕು. ಮನಸ್ಸಿಟ್ಟು ಮಾಡುವ ಕೆಲಸವು ಸಮಾಜಕ್ಕೆ ಕೊಡುಗೆಯನ್ನು ನೀಡುವಂತಿರಬೇಕು. ಇಂದು ನಮ್ಮ ಒಕ್ಕೂಟದ ಮಹಾಸಭೆಯು ನಡೆಯುತ್ತಿದ್ದು ನನ್ನ ಅಧ್ಯಕ್ಷತೆಯಲ್ಲಿ ಇದು ಮೊದಲ ಮಹಾಸಭೆಯಾಗಿದ್ದು ಈ ಒಂದು ವರ್ಷದಲ್ಲಿ ಒಕ್ಕೂಟದ ಸರ್ವರು ಸಹಕಾರವನ್ನು ನೀಡಿರುತ್ತಾರೆ.ಹಲವಾರು
ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದು ಸರ್ವರ ಪ್ರೋತ್ಸಾಹದಿಂದ ಸಾಧ್ಯವಾಗಿದೆ ಎಂದರು. ಒಕ್ಕೂಟದ ಸದಸ್ಯರುಗಳು ಸಮಾಜಮುಖಿ ಚಟುವಟಿಕೆಗಳಿಗೆ ಪ್ರೋತ್ಸಾಹವನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಇನ್ನು ಮುಂದೆಯೂ ವೈವಿಧ್ಯಮಯ ಕಾರ್ಯಚಟುವಟಿಕೆಗಳ ಧ್ಯೇಯೋದ್ದೇಶವನ್ನು ಹೊಂದಿದ್ದೇವೆ ಎಂದರು.

ಕುಂಜಿರ ಚಿತ್ರ ಚರ್ಮಣ ಕಳೆದ ಮಹಾಸಭೆಯ ವರದಿ ವಾಚಿಸಿದರು. ತಾತಂಡ ಏಸು ಕಬೀರ್ ರವರು ಲೆಕ್ಕ ಪರಿಶೋಧನಾ ವರದಿ ಮಂಡಿಸಿದರು.  2026-27 ನೇ ಸಾಲಿನಲ್ಲಿ ಆಯೋಜಿಸಲಾಗುವ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು. ಉಮ್ಮತ್ತಾಟ್ ಪ್ರದರ್ಶನ, ಆಟೋಟ ಸ್ಪರ್ಧೆ, ಹಬ್ಬಗಳನ್ನು ಆಚರಿಸುವುದು ಹಾಗೂ ವಿರಾಜಪೇಟೆ ಕೊಡವ ಸಮಾಜವು ಒಕ್ಕೂಟಕ್ಕೆ ನೀಡುತ್ತಿರುವ ಸಹಕಾರವನ್ನು ಶ್ಲಾಘಿಸಲಾಯಿತು. ಒಕ್ಕೂಟದ ಬೈಲ, ವಂತಿಕೆಯ ಬಗ್ಗೆ ಹಾಗೂ ಸಮಾಜ ಸೇವೆಯಲ್ಲಿ ಒಕ್ಕೂಟದ ಪಾಲ್ಗೊಳ್ಳುವಿಕೆಯ ಕುರಿತು ಚರ್ಚೆ ಮಾಡಲಾಯಿತು.

ಮೂಕೊಂಡ ಪ್ರೀತ್ ಈರಪ್ಪ ಪ್ರಾರ್ಥಿಸಿದರು. ಚೇದಂಡ ರೋಸಿ ಸುರೇಶ್ ಹಾಗೂ ಮಾತಂಡ ಸುಷ್ಮಾ ಅರುಣ್ ನಿರೂಪಿಸಿ , ಮುರುವಂಡ ಉಷಾ ಮೊಣ್ಣಪ್ಪ ವಂದಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

coorg buzz
coorg buzz