ಹೆದ್ದಾರಿ 275ರ ಆನೆಕಾಡು ಬಳಿ ಇತ್ತೀಚೆಗೆ ಸಂಭವಿಸಿದ ಸರಣಿ ರಸ್ತೆ ಅಪಘಾತಗಳ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಅವರು ಮಂಗಳವಾರ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆನೆಕಾಡು ಹೆದ್ದಾರಿ ವ್ಯಾಪ್ತಿಯಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು, ಸಾವು-ನೋವುಗಳನ್ನು ತಡೆಯಲು ತುರ್ತು ಕ್ರಮ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಅಪಾಯಕಾರಿ ಸ್ಥಳಗಳಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸುವುದು ಹಾಗೂ ವೇಗ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಹೆದ್ದಾರಿ ವಿಭಾಗದ ಎಂಜಿನಿಯರ್ಗೆ ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು.
ತುರ್ತು ರಸ್ತೆ ಸುರಕ್ಷತಾ ಕ್ರಮಕ್ಕೆ ನಿರ್ದೇಶನ:
ರಸ್ತೆ ಸುರಕ್ಷತೆಯ ದೃಷ್ಟಿಯಿಂದ ತಾತ್ಕಾಲಿಕವಾಗಿ ಆಗಬೇಕಿರುವ ಕಾಮಗಾರಿಗಳನ್ನು ತಕ್ಷಣವೇ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಹೆದ್ದಾರಿಯಲ್ಲಿ ವೇಗ ನಿಯಂತ್ರಣಕ್ಕಾಗಿ ರಸ್ತೆ ಉಬ್ಬುಗಳ ನಿರ್ಮಾಣ (Speed Breakers), ಜೀಬ್ರಾ ಕ್ರಾಸಿಂಗ್ ಅಳವಡಿಕೆ ಹಾಗೂ ಇತರ ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದರು.
ಬ್ಲಾಕ್ ಸ್ಪಾಟ್ ಗುರುತು:
ಈ ಸಂದರ್ಭದಲ್ಲಿ ಮಾತನಾಡಿದ ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಪ್ರದೀಪ್, “ಹೆದ್ದಾರಿ ವಿಭಾಗದಲ್ಲಿ ಅಪಘಾತ ಸಂಭವಿಸುವ ‘ಬ್ಲಾಕ್ ಸ್ಪಾಟ್’ಗಳನ್ನು ಗುರುತಿಸಲಾಗಿದ್ದು, ಈ ಭಾಗಗಳಲ್ಲಿ ಹೆದ್ದಾರಿ ಎಂಜಿನಿಯರ್ಗಳು ತಕ್ಷಣವೇ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಿದೆ” ಎಂದು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಈ ಪರಿಶೀಲನೆಯ ಸಂದರ್ಭದಲ್ಲಿ ಹೆದ್ದಾರಿ ವಿಭಾಗದ ಎಂಜಿನಿಯರ್ ಸಂಜೀವ್ ನಾಯಕ್, ಲೋಕೋಪಯೋಗಿ ಇಲಾಖೆ (PWD) ಎಂಜಿನಿಯರ್ ಕೆ.ಟಿ. ಪ್ರಭು ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.



