KMA ವಿಶೇಷ ಶೈಕ್ಷಣಿಕ ಪುರಸ್ಕಾರ-2026: 7 ಪ್ರತಿಭಾನ್ವಿತ ವಿದ್ಯಾರ್ಥಿಗಳ ಆಯ್ಕೆ

Share this post :

ಪೊನ್ನಂಪೇಟೆ: ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಸಹಯೋಗದಲ್ಲಿ ಪ್ರಾಯೋಜಕರ ನೆರವಿನಿಂದ ನೀಡಲಾಗುವ ಈ ಸಾಲಿನ ಕೆ.ಎಂ.ಎ. ವಿಶೇಷ ಶೈಕ್ಷಣಿಕ ಪುರಸ್ಕಾರ-2026ಕ್ಕೆ ಜಿಲ್ಲೆಯ ಒಟ್ಟು 7 ವಿದ್ಯಾರ್ಥಿಗಳನ್ನು ಆಯ್ಕೆಗೊಳಿಸಲಾಗಿದೆ. ಕೆ.ಎಂ.ಎ. ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿಯವರ ಅಧ್ಯಕ್ಷತೆಯಲ್ಲಿ ವಿರಾಜಪೇಟೆಯ ಸಂಸ್ಥೆಯ ಪ್ರಧಾನ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಆಯ್ಕೆಯನ್ನು ಪ್ರಕಟಿಸಲಾಯಿತು. ಕೊಡಗು ಜಿಲ್ಲೆಯ ಸರಕಾರಿ ಶಾಲೆಯಲ್ಲಿ ಓದಿ ಕಳೆದ ಎಸ್. ಎಸ್. ಎಲ್. ಸಿ. ಪರೀಕ್ಷೆಯ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗಾಗಿ ಡಿ. ಹೆಚ್. ಸೂಫಿಯವರು ತಮ್ಮ ಪೋಷಕರಾದ ದಿವಂಗತ ಡಿ. ಪಿ. ಹುಸೈನಾರ್ ಹಾಜಿ ಮತ್ತು ಆಮೀನಾ ಅವರ ಸ್ಮರಣಾರ್ಥಕವಾಗಿ ಪ್ರಾಯೋಜಿಸಿರುವ ಕೆಎಂಎ ಕನ್ನಡ ಚೈತನ್ಯ ಪುರಸ್ಕಾರ-2026ಕ್ಕೆ ಇಬ್ಬರು ವಿದ್ಯಾರ್ಥಿನಿಯರು ಆಯ್ಕೆಗೊಂಡಿದ್ದಾರೆ. ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕಗಳನ್ನು ಪಡೆದ ಮಾಲ್ದಾರೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದ ಎಸ್. ಕೌಸಲ್ಯ ಮತ್ತು 125ಕ್ಕೆ 123 ಅಂಕಗಳನ್ನು ಪಡೆದ ಹೊದವಾಡದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ ಹೊದವಾಡ ಕೆ.ಎಂ. ಫಾತಿಮತ್ ಸಹ್ಲ ಈ ವಿಶೇಷ ಪುರಸ್ಕಾರಕ್ಕೆ ಆಯ್ಕೆಗೊಂಡವರಾಗಿದ್ದಾರೆ.

2025-26 ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್. ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಇಡೀ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಸೋಮವಾರಪೇಟೆಯ ವಿಶ್ವಮಾನವ ಕುವೆಂಪು ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ ಶಿವಾನಿ ಶಾರದಾಮಣಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಇಡೀ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಮಡಿಕೇರಿಯ ಸಂತ ಮೈಕಲರ ಪಿ.ಯು. ಕಾಲೇಜಿನ ವಿದ್ಯಾರ್ಥಿಯಾಗಿದ್ದ ಸಿಂಚನ ಪ್ರಸನ್ನ ಹೆಚ್. ಅವರು ಎನ್.ಸಿ.ಟಿ. ಗ್ರೂಪ್ ಮಾಲೀಕರಾದ ಕೆ. ಎಂ. ಎ. ಉಪಾಧ್ಯಕ್ಷ ಅಕ್ಕಳತಂಡ ಎಸ್. ಮೊಯ್ದು ಅವರು ತಮ್ಮ ಸಹೋದರ ದಿ.ಅಕ್ಕಳತಂಡ ಎಸ್. ಹಂಸ ಅವರ ಸ್ಮರಣಾರ್ಥವಾಗಿ ಪ್ರಾಯೋಜಿಸಿರುವ ಕೆ. ಎಂ. ಎ. ವಿಶೇಷ ಶೈಕ್ಷಣಿಕ ಪುರಸ್ಕಾರಕ್ಕೆ ಆಯ್ಕೆಗೊಂಡಿದ್ದಾರೆ. ಈ ಪುರಸ್ಕಾರವು ತಲಾ ರೂ. ಹತ್ತು ಸಾವಿರ ನಗದು ಬಹುಮಾನ, ಪಾರಿತೋಷಕ ಮತ್ತು ಪ್ರಶಂಸನಾ ಪತ್ರವನ್ನು ಒಳಗೊಂಡಿರುತ್ತದೆ.

ಕಳೆದ ಶೈಕ್ಷಣಿಕ ಸಾಲಿನಲ್ಲಿ ಕೊಡಗು ಜಿಲ್ಲೆಗೆ ಅತಿ ಹೆಚ್ಚು ಅಂಕ ಪಡೆದ ಮುಸ್ಲಿಂ ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನ ಎಂ.ಎ. ಮಹಮ್ಮದ್ ಅವರು ಪ್ರಾಯೋಜಿಸಿರುವ ಕೆ.ಎಂ.ಎ. ವಿಶೇಷ ಪ್ರತಿಭಾ ಪುರಸ್ಕಾರಕ್ಕೆ ಎಸ್. ಎಸ್. ಎಲ್. ಸಿ. ವಿಭಾಗದಲ್ಲಿ ಕೊಟ್ಟಮುಡಿಯ ಮರ್ಕಜ್ಹ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಯಾಗಿದ್ದ ಕುಂಜಿಲದ ಪಿ.ಯು. ಜುನೈಸ, ದ್ವಿತೀಯ ಪಿಯುಸಿ ವಿಭಾಗದಲ್ಲಿ
ವಿರಾಜಪೇಟೆಯ ಕಾವೇರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಕುಂಜಿಲದ ಎಂ.ಎಸ್. ಫರೀದಾ (98%) ಮತ್ತು ಮೂರ್ನಾಡು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಕೆ. ಎಂ. ಜುಹರ (95%) ಆಯ್ಕೆಗೊಂಡಿದ್ದಾರೆ

ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಜಾತಿ-ಧರ್ಮ ಭೇದವಿಲ್ಲದೆ ಶೈಕ್ಷಣಿಕವಾಗಿ ಉತ್ತೇಜಿಸುವ ಉದ್ದೇಶದಿಂದ ಕೊಡವ ಮುಸ್ಲಿಂ ಅಸೋಸಿಯೇಷನ್ ಈ ವಿಶೇಷ ಶೈಕ್ಷಣಿಕ ಪುರಸ್ಕಾರವನ್ನು ಕಳೆದ ಹಲವಾರು ವರ್ಷಗಳಿಂದ ನೀಡುತ್ತಿದೆ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ತಿಳಿಸಿದ್ದಾರೆ.

coorg buzz
WhatsApp Image 2026-08-11 at 16.11.22