ವಿಶ್ವ ಮಾನವೀಯತೆ ದಿನಾಚರಣೆಯ ಅಂಗವಾಗಿ ಪ್ರತಿಷ್ಠಿತ ‘ರಾಷ್ಟ್ರೀಯ ಮಾನವ ಶ್ರೇಷ್ಠತಾ ಪ್ರಶಸ್ತಿ-2026’ ಕ್ಕೆ ಭಾಜನರಾಗಿರುವ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರನ್ನು ಕೆ.ಎಂ.ಎ. ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು. ಕೆ.ಎಂ.ಎ. ಉಪಾಧ್ಯಕ್ಷರಾದ ಅಕ್ಕಳತಂಡ ಎಸ್. ಮೊಯ್ದು ಅವರ ಅಧ್ಯಕ್ಷತೆಯಲ್ಲಿ ವಿರಾಜಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮುದಾಯದ ಪರವಾಗಿ ಸಂಸ್ಥೆ ವತಿಯಿಂದ ಆಡಳಿತ ಮಂಡಳಿ ಪದಾಧಿಕಾರಿಗಳು ಆತ್ಮೀಯವಾಗಿ ಅಭಿನಂದಿಸಿ ಗೌರವಿಸಿದರು.
ಮೊದಲಿಗೆ ಅಭಿನಂದಿಸಿ ಮಾತನಾಡಿದ ಕೆ.ಎಂ.ಎ. ಕೋಶಾಧಿಕಾರಿಗಳಾದ ಹರಿಶ್ಚಂದ್ರ ಎ. ಹಂಸ, ಕೊಡವ ಮುಸ್ಲಿಂ ಅಸೋಸಿಯೇಷನ್ ಗೆ ಕಳೆದ 18 ವರ್ಷಗಳಿಂದ ಸಮರ್ಥವಾದ ನೇತೃತ್ವ ನೀಡಿ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಅಧ್ಯಕ್ಷರಾದ ಸೂಫಿ ಹಾಜಿಯವರು ರಾಷ್ಟ್ರೀಯ ಮಾನವ ಶ್ರೇಷ್ಠತಾ ಪ್ರಶಸ್ತಿ ಪಡೆದಿರುವುದು ಕೆ.ಎಂ.ಎ. ಸಂಸ್ಥೆಗೆ ಸಲ್ಲುವ ರಾಷ್ಟ್ರಮಟ್ಟದ ಗೌರವವಾಗಿದೆ. ಇದು ನಮ್ಮ ಸಂಸ್ಥೆಗೆ ಮಾತ್ರವಲ್ಲ, ಸಮುದಾಯಕ್ಕೆ ಮತ್ತು ಇಡೀ ಕೊಡಗು ಜಿಲ್ಲೆಗೆ ಹೆಮ್ಮೆ ತರುವ ವಿಷಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಅಕ್ಕಳತಂಡ ಎಸ್. ಮೊಯ್ದು ಅವರು ಮಾತನಾಡಿ, ಕಡು ಬಡತನದಲ್ಲಿ ಹುಟ್ಟಿ ತಮ್ಮ ಸ್ವಂತ ಪರಿಶ್ರಮದ ಮೂಲಕ ಬೆಳೆದು ಬಂದ ಸೂಫಿ ಹಾಜಿಯವರ ಸ್ವಾರ್ಥರಹಿತ ಮತ್ತು ನಿಷ್ಕಳಂಕವಾದ ಸಮಾಜ ಸೇವೆ ಸಮಾಜಕ್ಕೆ ಮಾದರಿಯಾದದ್ದು, ಜಾತಿ ಧರ್ಮದ ಭೇದವಿಲ್ಲದೆ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಇವರು ತೋರುವ ಕಾಳಜಿ ನಿಜಕ್ಕೂ ಪ್ರಶಂಷನೀಯ ಎಂದು ಗುಣಗಾನಗೈದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸೂಫಿ ಹಾಜಿ, ಚಿಕ್ಕಂದಿನಿಂದಲೇ ಅನುಭವಿಸಿದ ಬಡತನದ ಬೇಗೆಯೆ ಸಮಾಜಮುಖಿ ಚಿಂತನೆಗೆ ಸ್ಪೂರ್ತಿಯಾಯಿತು. ಬಡತನದ ಕಠಿಣ ಪರಿಸ್ಥಿತಿ ಮತ್ತು ನೋವುಗಳೇ ಒಬ್ಬ ವ್ಯಕ್ತಿಯನ್ನು ಸಮಾಜ ಸೇವೆಗೆ ಪ್ರೇರೇಪಿಸುವ ಪ್ರಮುಖ ಶಕ್ತಿಯಾಗಿದೆ. ಇದುವರೆಗೂ ಯಾವುದೇ ಪ್ರಶಸ್ತಿ ಪುರಸ್ಕಾರವನ್ನು ಗುರಿಯಾಗಿಸಿರಲಿಲ್ಲ. ಆದರೂ ಗುರುತಿಸಿ ನೀಡುವ ಪ್ರಶಸ್ತಿ ಮತ್ತಷ್ಟು ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರುಗಳಾದ ಮಂಡೇಂಡ ಎ. ಮೊಯ್ದು, ಕುಪ್ಪೋಡಂಡ ಅಬ್ದುಲ್ ರಶೀದ್, ಕೋಳುಮಂಡ ರಫೀಕ್ ಮೊದಲಾದವರು ಸೂಫಿ ಹಾಜಿಯವರನ್ನು ಅಭಿನಂದಿಸಿ ಮಾತನಾಡಿದರು. ಸಂಸ್ಥೆಯ ಪದಾಧಿಕಾರಿಗಳಾದ ಪುದಿಯತ್ತಂಡ ಎ. ಸಂಶುದ್ದೀನ್, ಪೊಯಕೆರ ಎಸ್. ರಫೀಕ್, ಪುದಿಯಾಣೆರ ಹನೀಫ್, ಪುಡಿಯಂಡ ಹನೀಫ್, ದುದ್ದಿಯಂಡ ಹೆಚ್. ಮೊಯ್ದು, ಆಲೀರ ಅಬ್ದುಲ್ ಲತೀಫ್, ಕುಂಡಂಡ ರಜ್ಹಾಕ್ ಪರವಂಡ ಸಿರಾಜ್ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ರಫೀಕ್ ತೂಚಮಕೇರಿ ಕಾರ್ಯಕ್ರಮ ನಿರ್ವಹಿಸಿದರು.



