ಮಡಿಕೇರಿ : ಕ್ಲೋಸ್‌ಬರ್ನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸ್ಥಳೀಯ ಬೆಳೆಗಾರರಾದ ಜೆ. ಶರತ್ ಬಾಬುರವರು ನೋಟ್ ಪುಸ್ತಕ ಹಾಗೂ ಪಠ್ಯ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಸಾಲಿನಿಂದ ಎಲ್‌ಕೆಜಿ, ಯುಕೆಜಿ ಕೂಡಾ ಆರಂಭವಾಗಿದ್ದು, ಏಳನೇ ತರಗತಿವರೆಗೆ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಹಿಂದಿನ ಶೈಕ್ಷಣಿಕ ಸಾಲಿನಲ್ಲೂ ಶರತ್ ಬಾಬು ನೋಟ್ ಪುಸ್ತಕಗಳನ್ನು ವಿತರಿಸಿದ್ದರು. ಈ ವರ್ಷವೂ ಮುಂದುವರೆಸಿದ್ದು, ಅಗತ್ಯ ಪರಿಕರಗಳನ್ನು ಶಾಲೆಗೆ ತಲುಪಿಸಿದ್ದು, ಶಿಕ್ಷಕರು ವಿದ್ಯಾರ್ಥಿಗಳಿಗೆ ವಿತರಿಸಿದರು. ಅವರ ಸೇವಾ ಮನೋಭಾವಕ್ಕೆ ಶಿಕ್ಷಕರು, ಎಸ್‌ಡಿಎಂಸಿ ಮೆಚ್ಚುಗೆ ಸೂಚಿಸಿದ್ದಾರೆ. ಶಾಲೆ ಆವರಣದಲ್ಲಿ ವೇದಿಕೆ ನಿರ್ಮಾಣಕ್ಕೂ ಅವರು ನೆರವಾಗಿದ್ದು, ಆ ಕಾಮಗಾರಿ ಕೂಡಾ ನಡೆಯುತ್ತಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣ ತಿಳಿಸಿದ್ದಾರೆ. ನಿವೃತ್ತ ಮುಖ್ಯ ಶಿಕ್ಷಕಿ ಲಕ್ಷ್ಮೀ, ಶಿಕ್ಷಕರಾದ ಪಿ.ಸಿ. ಉಷಾ, ಕೆ.ಎಫ್. ಜೆಸ್ಸಿ, ಪ್ರಜ್ಞಾ ಈ ಸಂದರ್ಭ ಇದ್ದರು.



