ಮನೆಗಳಿಂದಲೇ ಆರಂಭವಾಗಲಿ ಪರಿಸರ ಸ್ವಚ್ಛತೆಯ ಜಾಗೃತಿ: ವಿರಾಜಪೇಟೆಯಲ್ಲಿ ಅರ್ಥಪೂರ್ಣ ‘ವನಮಹೋತ್ಸವ’

Tree Plantation

Share this post :

ವಿರಾಜಪೇಟೆ: ಪರಿಸರ ಸ್ವಚ್ಛತೆ ಮತ್ತು ಸಂರಕ್ಷಣೆಯ ಪರಿಪಾಠವು ಪ್ರತಿಯೊಬ್ಬರ ಮನೆಗಳಿಂದಲೇ ಆರಂಭವಾಗಬೇಕು. ಮನೆಯಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿದಾಗ ಮಾತ್ರ ಸಮಾಜದಲ್ಲಿಯೂ ಸ್ವಚ್ಛ ಪರಿಸರ ನಿರ್ಮಾಣ ಸಾಧ್ಯ ಎಂದು ವಿರಾಜಪೇಟೆ ತಾಲೂಕು ತಹಸಿಲ್ದಾರ್ ಪ್ರವೀಣ್ ಕುಮಾರ್ ಅವರು ಅಭಿಪ್ರಾಯಪಟ್ಟಿದ್ದಾರೆ. ವಿರಾಜಪೇಟೆಯ ತಾಲೂಕು ಕಚೇರಿಯ ಆವರಣದಲ್ಲಿ ತಾಲೂಕು ಆಡಳಿತ, ವಿರಾಜಪೇಟೆ ಪತ್ರಕರ್ತರ ವೇದಿಕೆ, ನ್ಯೂಸ್ 3 ಡಿಜಿಟಲ್ ಮೀಡಿಯಾ ಹಾಗೂ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್.ಎಸ್.ಎಸ್ ಮತ್ತು ಯುವ ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ವನಮಹೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಪ್ರತಿಯೊಬ್ಬರೂ ತಮ್ಮ ಮನೆ ಹಾಗೂ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಮತ್ತು ಗಿಡಗಳನ್ನು ನೆಟ್ಟು ಪೋಷಿಸುವುದರ ಮಹತ್ವವನ್ನು ಸಮಾಜಕ್ಕೆ ತಿಳಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಿವೈಎಸ್ಪಿ ಮಹೇಶ್ ಕುಮಾರ್ ಅವರು ಮಾತನಾಡಿ, ಮರಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದ್ದು, ಪರಿಸರ ಜಾಗೃತಿ ಮೂಡಿಸುವಲ್ಲಿ ಎನ್.ಎಸ್.ಎಸ್ ವಿದ್ಯಾರ್ಥಿಗಳ ಪಾತ್ರ ಅಪಾರವಾಗಿದೆ ಎಂದು ಶ್ಲಾಘಿಸಿದರು. ಸೆಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕರಾದ ರೆ. ಫಾ. ಮದಲೈ ಮುತ್ತು ಅವರು ಮಾತನಾಡಿ, ನಾವು ಭೂಮಿಯನ್ನು ರಕ್ಷಿಸಿದರೆ ಭೂ ತಾಯಿ ನಮ್ಮನ್ನು ರಕ್ಷಿಸುತ್ತಾಳೆ, ಹೀಗಾಗಿ ಪರಿಸರವನ್ನು ಕಲುಷಿತಗೊಳಿಸದಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯ ಎಂದರು. ಹಾಗೆಯೇ, ಪುರಸಭೆಯ ಮುಖ್ಯಾಧಿಕಾರಿ ಪಿ. ಕೆ. ನಾಚಪ್ಪ ಅವರು ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಹಾಗೂ ಪ್ಲಾಸ್ಟಿಕ್ ಎಸೆಯುವುದನ್ನು ನಿಲ್ಲಿಸಬೇಕೆಂದು ಮನವಿ ಮಾಡಿದರು.

ಈ ಅರ್ಥಪೂರ್ಣ ಕಾರ್ಯಕ್ರಮದ ಅಂಗವಾಗಿ ಎನ್.ಎಸ್.ಎಸ್ ಘಟಕದ ಸ್ವಯಂಸೇವಕ ವಿದ್ಯಾರ್ಥಿಗಳು ಹಾಗೂ ತಾಲೂಕು ಕಚೇರಿಯ ಸಿಬ್ಬಂದಿಗಳು ಒಗ್ಗೂಡಿ ಕಚೇರಿಯ ಆವರಣದಲ್ಲಿ ಸೀಬೆ, ಹಿಪ್ಪೆ, ನೇರಳೆ, ಲಿಂಬೆ ಹಾಗೂ ಬಟರ್ ಫ್ರೂಟ್ ಸೇರಿದಂತೆ ಐವತ್ತಕ್ಕೂ ಅಧಿಕ ವಿವಿಧ ಹಣ್ಣಿನ ಗಿಡಗಳನ್ನು ನೆಟ್ಟರು. ಎನ್.ಎಸ್.ಎಸ್ ಅಧಿಕಾರಿ ಬಿ. ಎನ್. ಶಾಂತಿಭೂಷಣ್ ಪ್ರಾಸ್ತಾವಿಕವಾಗಿ ಮಾತನಾಡಿದ ಈ ಸಮಾರಂಭದಲ್ಲಿ ಗ್ರೇಡ್-2 ತಹಸಿಲ್ದಾರ್ ಪ್ರದೀಪ್ ಕುಮಾರ್, ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಐಕ್ಯೂಎಸಿ ಸಂಚಾಲಕಿ ಹೇಮ, ಯುವ ರೆಡ್ ಕ್ರಾಸ್ ಅಧಿಕಾರಿ ವಿಲೀನ ಗೋನ್ಸಾಲ್ವೆಸ್, ಮಾಧ್ಯಮ ಪ್ರತಿನಿಧಿಗಳು, ಪುರಸಭೆಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

coorg buzz
coorg buzz