ಮಡಿಕೇರಿ : ರಾಜ್ಯ ಸರ್ಕಾರ ಪಡಿತರ ಕಾರ್ಡ್ ಫಲಾನುಭವಿಗಳ ಇ-ಕೆವೈಸಿ ಮಾಡಲು ಆದೇಶಿಸಿದ್ದು, ಸರ್ವರ್ ಸಮಸ್ಯೆಯಿಂದಾಗಿ ಈ ಕಾರ್ಯ ತುಂಬಾ ವಿಳಂಬವಾಗುತ್ತಿದೆ ಎಂದು ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್. ಅಶೋಕ್ ಹೇಳಿದರು.
ಮಡಿಕೇರಿಯ ಕೊಡವ ಸಮಾಜದಲ್ಲಿ ನಡೆದ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ನಾವು ಸರ್ಕಾರದ ಅಂಗವಾಗಿ ಕೆಲಸ ಮಾಡುತ್ತಿದ್ದೇವೆ. ಸರ್ಕಾರದ ಯೋಜನೆ ಜನರಿಗೆ ತಲುಪಲು ನಮ್ಮ ಶ್ರಮ ದೊಡ್ಡದಿದೆ. ಆದರೆ ಸರ್ಕಾರ ಸರಿಯಾದ ಸವಲತ್ತು ಕಲ್ಪಿಸದೆ ನಮ್ಮ ಮೇಲೆ ಒತ್ತಡ ಹೇರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇ-ಕೆವೈಸಿ ಮಾಡಲು ಸರ್ವರ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಒಬ್ಬ ವ್ಯಕ್ತಿಗೆ 15 ನಿಮಿಷ ಸಮಯ ತಗಲುತ್ತಿದೆ. ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ, ಆಹಾರ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿ ಗಮನಕ್ಕೆ ತರಲಾಗಿದೆ. ರಾಜ್ಯ ಘಟಕದಿಂದ ಸಚಿವರಿಗೂ ಮನವಿ ಮಾಡಲಾಗಿದೆ. ಆದರೆ ಯಾವುದೇ ಪ್ರಗತಿ ಆಗಿಲ್ಲ. ಕಳೆದ ಬಾರಿ ಇ-ಕೆವೈಸಿ ಮಾಡಿದಾಗ ಒಂದು ಕಾರ್ಡ್ಗೆ 20 ರೂಪಾಯಿ ಕೊಡ್ತೇವೆ ಅಂತ ಸರ್ಕಾರ ಹೇಳಿತ್ತು. ಆ ಹಣ ಇನ್ನೂ ಸಿಕ್ಕಿಲ್ಲ. ಈ ಬಾರಿಯ ಪ್ರಕ್ರಿಯೆಯಲ್ಲಿ ಹಣದ ಬಗ್ಗೆ ಪ್ರಸ್ತಾಪವೇ ಮಾಡಿಲ್ಲ. ಬೆಳಗ್ಗೆ 06 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಕೆಲಸ ಮಾಡಬೇಕೆಂದು ಹೇಳಿದ್ದಾರೆ. ನಾವು ಏಜೆನ್ಸಿ ಮೂಲಕ ಕಮಿಷನ್ ಆಧಾರದಲ್ಲಿ ಕೆಲಸ ಮಾಡುತ್ತಿರುವವರು. ನಮಗೆ ಸರಿಯಾದ ಸವಲತ್ತು ಕೊಡದೆ ಮಾನಸಿಕ ಹಿಂದೆ ನೀಡಲಾಗುತ್ತಿದೆ ಆರೋಪಿಸಿದರು.
ಖಜಾಂಚಿ ಗೌತಮ್ ಶಿವಪ್ಪ ಮಾತನಾಡಿ, ಸರ್ವರ್ ಸಮಸ್ಯೆಯಿಂದ ಪಡಿತರ ವಿತರಕರ ಜೊತೆಗೆ ಫಲಾನುಭವಿಗಳಿಗೂ ಸಮಸ್ಯೆಯಾಗುತ್ತಿದೆ. ಬಹುತೇಕ ಕೂಲಿ ಕಾರ್ಮಿಕ ವರ್ಗದ ಮಂದಿ ಪಡಿತರ ಕಾರ್ಡ್ ಸವಲತ್ತು ಪಡೆಯುತ್ತಿದ್ದಾರೆ. ಇ-ಕೆವೈಸಿ ಮಾಡಿಸಲು ಮೂರ್ನಾಲ್ಕು ದಿನ ಕೆಲಸಕ್ಕೆ ಹೋಗದೆ ನ್ಯಾಯಬೆಲೆ ಅಂಗಡಿ ಮುಂದೆ ಕಾಯಬೇಕಾದ ಪರಿಸ್ಥಿತಿ ಇದೆ. ಅಂಗಡಿಯವರಿಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ ಎಂದರು.
ಈ ಸಂದರ್ಭ ಗೌರವಾಧ್ಯಕ್ಷ ರಮೇಶ್, ಉಪಾಧ್ಯಕ್ಷ ಸುಬ್ಬಯ್ಯ, ಕಾರ್ಯದರ್ಶಿ ಟಿ.ಕೆ. ಭವ್ಯ, ಸಹಕಾರ್ಯದರ್ಶಿ ಜಗನ್ ಜೋನಸ್, ನಿರ್ದೇಶಕರು ಉಪಸ್ಥಿತರಿದ್ದರು.



