ಮಡಿಕೇರಿ : ಕೊಡಗು ಪ್ರೆಸ್ ಕ್ಲಬ್ ಹಾಗೂ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ತಾಳತ್‌ಮನೆಯ ಮಲ್ಲನ ಬೆಳ್ಯಪ್ಪ ಅವರ ಗದ್ದೆಯಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪತ್ರಕರ್ತರ ಕೆಸರುಗದ್ದೆ ಕ್ರೀಡಾಕೂಟದಲ್ಲಿ ನಾಟಿ ಬಾಯ್ಸ್ ಮತ್ತು ಮಡ್ ಕಮಾಂಡೋಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.
ಹ್ಯಾಂಡ್ ಬಾಲ್‌ನ ಫೈನಲ್ ಪಂದ್ಯದಲ್ಲಿ ಇಸ್ಮಾಯಿಲ್ ಕಂಡಕರೆ ನಾಯಕತ್ವದ ನಾಟಿ ಬಾಯ್ಸ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಆದರ್ಶ್ ನಾಯಕತ್ವದ ಯಂಗ್ ಸ್ಪೈಡರ್ಸ್ ದ್ವಿತೀಯ ಸ್ಥಾನ ಪಡೆಯಿತು. ಹಗ್ಗಜಗ್ಗಾಟ ಪಂದ್ಯದಲ್ಲಿ ಕಿಶೋರ್ ರೈ ಕತ್ತಲೆಕಾಡು ನಾಯಕತ್ವದ ಮಡ್ ಕಮಾಂಡೋಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಆದರ್ಶ್ ನಾಯಕತ್ವದ ಯಂಗ್ ಸ್ಪೈಡರ್ಸ್ ದ್ವಿತೀಯ ಸ್ಥಾನ ಪಡೆಯಿತು. ಲೀಗ್ ಮಾದರಿಯಲ್ಲಿ ನಾಟಿ ಬಾಯ್ಸ, ಯಂಗ್ ಸ್ಪೈಡರ್ಸ್, ಮಡ್ ಕಮಾಂಡೋಸ್, ಮಡ್ ಫೀಲ್ಡರ್ಸ್, ಮಡ್ ಬಾಯ್ಸ, ರೈತ ಮಕ್ಕಳು ಸೇರಿದಂತೆ ೬ ತಂಡಗಳು ಸೆಣಸಾಟ ನಡೆಸಿತ್ತು.
ನಂತರ ನಡೆದ ೪೦ ವರ್ಷ ವಯಸ್ಸಿನೊಳಗಿನವರ ವಿಭಾಗದಲ್ಲಿ ನಡೆದ ಓಟದ ಸ್ಪರ್ಧೆಯಲ್ಲಿ ಇಸ್ಮಾಯಿಲ್ ಕಂಡಕರೆ(ಪ್ರ), ದಿವಾಕರ್(ಜಾಕಿ)(ದ್ವಿ), ಸವಾದ್ ಉಸ್ಮಾನ್ ತೃತೀಯ ಸ್ಥಾನ ಪಡೆದರು. ೪೦ ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ನಡೆದ ಗೋಪಾಲ್ ಸೋಮಯ್ಯ(ಪ್ರ), ಚೆನ್ನನಾಯಕ್(ದ್ವಿ), ಚೀರಂಡ ಚಂಗಪ್ಪ ತೃತೀಯ ಸ್ಥಾನಪಡೆದರು.
ಕೊಡಗು ವಿದ್ಯಾಲಯದ ದೈಹಿಕ ಶಿಕ್ಷಣ ಶಿಕ್ಷಕ ದಿನೇಶ್, ರಕ್ಷಿತ್ ಕಟ್ರತನ, ದೇವಂಗೋಡಿ ಜಿತು ತೀರ್ಪುಗಾರರಾಗಿ, ಬಾಚರಣಿಯಂಡ ಶಶಾಂಕ್ ದೇವಯ್ಯ, ಶ್ರುತನ್ ಸುಬ್ಬಯ್ಯ ಸ್ಕೋರರ್ ಆಗಿ ಕಾರ್ಯನಿರ್ವಹಿಸಿದರು.
ಪ್ರದರ್ಶನ ಪಂದ್ಯ: ಉದ್ಘಾಟನಾ ಕಾರ್ಯಕ್ರಮದ ನಂತರ ಪತ್ರಕರ್ತರು ಮತ್ತು ಫಾರ್ಮರ್ಸ್ ಕ್ಲಬ್ ನಡುವೆ ನಡೆದ ಹಗ್ಗಜಗ್ಗಾಟದ ಪ್ರದರ್ಶನ ಪಂದ್ಯದಲ್ಲಿ ಫಾರ್ಮರ್ಸ್ ಕ್ಲಬ್ ತಂಡ ಗೆಲುವು ಸಾಧಿಸಿತು. ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಯಿತು.
ಸಮಾರೋಪ ಸಮಾರಂಭ: ತಾಳತ್ತಮನೆಯ ಸಮೀಪದ ಸ್ವಾಗತ್ ಕನ್ವೆಷನಲ್ ಹಾಲ್‌ನಲ್ಲಿ ನಡೆದ ಸಮಾರೋಪ ಸಮಾರಂಭ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಟ್ಟಮುಡಿ ಹಂಸ ಮಾತನಾಡಿ, ಸಮಾಜದ ಒಳಿತು-ಕೆಡುಕುಗಳನ್ನು ಜನರ ಮುಂದಿಡುವ ಮೂಲಕ ಪತ್ರಕರ್ತರು ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ. ನಿರಂತರ ಕೆಲಸದ ಒತ್ತಡದ ನಡುವೆಯೂ ಕ್ರೀಡಾಕೂಟಗಳು ಮನೋಲ್ಲಾಸ ನೀಡುತ್ತವೆ ಎಂದು ಹೇಳಿದರು.
ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಶಿಕಲಾ ಅವರು ಮಾತನಾಡಿ, ಸುದ್ದಿ ಕ್ಷೇತ್ರದಲ್ಲಿ ಮಾತ್ರವಲ್ಲದೆ ಕ್ರೀಡಾಂಗಣದಲ್ಲೂ ಪತ್ರಕರ್ತರು ಪ್ರತಿಭೆ ತೋರಿಸುತ್ತಿರುವುದು ಶ್ಲಾಘನೀಯ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕಿ ಬಿ.ಆರ್.ಸವಿತಾ ರೈ ಮಾತನಾಡಿ, ವೃತ್ತಿ ಬದುಕಿನ ಒತ್ತಡ ಮರೆತು, ವರ್ಷಕ್ಕೊಮ್ಮೆ ಇಂತಹ ಕ್ರೀಡಾಕೂಟಗಳಲ್ಲಿ ಪತ್ರಕರ್ತರು ತಪ್ಪದೇ ಭಾಗವಹಿಸಬೇಕೆಂದು ಹೇಳಿದರು.
ಕಾಂಗ್ರೆಸ್ ಮುಖಂಡ ಜಾನ್ಸನ್ ಪಿಂಟೋ ಮಾತನಾಡಿ, ಪ್ರಕೃತಿ ವಿಕೋಪ ಮತ್ತು ಕೋವಿಡ್‌ಂತಹ ಸಂಕಷ್ಟದ ಸಂದರ್ಭಗಳಲ್ಲೂ ಕೊಡಗಿನ ಪತ್ರಕರ್ತರು ಜನಪರವಾಗಿ ಕಾರ್ಯನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅನು ಕಾರ್ಯಪ್ಪ, ಮಲ್ಲನ ಆನಂದ್, ಕೊಡಗು ಪ್ರೆಸ್ ಕ್ಲಬ್ ಖಜಾಂಚಿ ಮತ್ತು ಸಂಚಾಲಕರಾದ ಆರ್.ಆರ್.ಮುನೋಜ್ ಇದ್ದರು.
ಕೊಡಗು ಪ್ರೆಸ್ ಕ್ಲಬ್‌ನ ಹಿರಿಯ ಉಪಾಧ್ಯಕ್ಷ ನವೀನ್ ಡಿಸೋಜ ಸ್ವಾಗತಿಸಿದರೆ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಜೆ.ರಾಕೇಶ್ ನಿರೂಪಿಸಿ, ವಂದಿಸಿದರು.
ಕ್ರೀಡಾಕೂಟದಿಂದ ಪರಸ್ಪರ ಬಾಂಧವ್ಯ ವೃದ್ಧಿ
ಕ್ರೀಡಾಕೂಟಗಳು ಪರಸ್ಪರ ಬಾಂಧವ್ಯವನ್ನು ವೃದ್ಧಿಸುತ್ತವೆ ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕಿ ಬಿ.ಆರ್.ಸವಿತಾ ರೈ ಹೇಳಿದರು.
ತಾಳತ್‌ಮನೆಯ ಮಲ್ಲನ ಬೆಳ್ಯಪ್ಪ ಅವರ ಗದ್ದೆಯಲ್ಲಿ ಜಿಲ್ಲಾ ಮಟ್ಟದ ಪತ್ರಕರ್ತರ ಕೆಸರುಗದ್ದೆ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸುದ್ದಿಯ ಜಂಜಾಟದ ನಡುವೆ ಪತ್ರಕರ್ತರ ಜೀವನ ಸದಾ ಒತ್ತಡದಿಂದ ಕೂಡಿರುತ್ತದೆ. ಇಂತಹ ಕ್ರೀಡಾಕೂಟಗಳು ಪರಸ್ಪರ ಬಾಂಧವ್ಯವನ್ನು ಮತ್ತಷ್ಟು ವೃದ್ಧಿಸುತ್ತವೆ. ಆಟವಾಡುವಾಗ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಸಣ್ಣ ನಿರ್ಲಕ್ಷ್ಯವೂ ಗಾಯಕ್ಕೆ ಕಾರಣವಾಗಿ ಜೀವನಪರ್ಯಂತ ನೋವು ಅನುಭವಿಸುವಂತಾಗಬಹುದು. ಆದ್ರಿಂದ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ತಾಳತ್ತಮನೆ ಫಾರ್ಮರ್ಸ್ ಕ್ಲಬ್ ಅಧ್ಯಕ್ಷ ಜನನ್ ಪೊನ್ನೆಟ್ಟಿ ಮಾತನಾಡಿ, ತಾಳತ್ತಮನೆಯಲ್ಲಿ ಈ ಕ್ರೀಡಾಕೂಟ ನಡೆಸುತ್ತಿರುವುದು ನಮಗೆ ಹೆಮ್ಮೆಯ ವಿಷಯ ಎಂದು ಹೇಳಿದರು.
ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಮಳೆಯ ನಡುವೆಯೂ ಕೆಸರುಗದ್ದೆ ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿದೆ. ಫಾರ್ಮರ್ಸ್ ಕ್ಲಬ್‌ನ ಯುವಕರು ಉತ್ತಮ ಸಹಕಾರ ನೀಡಿದ್ದು, ಗದ್ದೆ ಸಿದ್ಧಪಡಿಸುವುದರಿಂದ ಹಿಡಿದು ಆಯೋಜನೆಯ ವಿವಿಧ ಕೆಲಸಗಳಲ್ಲಿ ಕೈಜೋಡಿಸಿದ್ದಾರೆ. ಕ್ರೀಡೆಗೆ ಸೂಕ್ತವಾಗಿರುವಂತೆ ಗದ್ದೆಯನ್ನು ಸಜ್ಜುಗೊಳಿಸಲಾಗಿದ್ದು, ಕಲ್ಲು-ಮುಳ್ಳುಗಳಿಲ್ಲದಂತೆ ನೋಡಿಕೊಳ್ಳಲಾಗಿದೆ. ಗ್ರಾಮಸ್ಥರೇ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಿರುವುದು ವಿಶೇಷ ಎಂದರು.
ಕೊಡಗು ವಿದ್ಯಾಲಯದ ದೈಹಿಕ ಶಿಕ್ಷಕ ಹಾಗೂ ತೀರ್ಪುಗಾರರಾದ ದಿನೇಶ್ ಮಾತನಾಡಿ, ಆಟದಲ್ಲಿ ಕ್ರೀಡಾಸ್ಫೂರ್ತಿ ಇರಬೇಕು. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಅಂಪೈರ್‌ಗಳ ತೀರ್ಪನ್ನು ಎಲ್ಲರೂ ಗೌರವಿಸಬೇಕು. ಅಂಪೈರ್ ಮತ್ತು ಕ್ರೀಡಾಪಟುಗಳ ನಡುವೆ ಉತ್ತಮ ಹೊಂದಾಣಿಕೆ ಇದ್ದರೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದರು.
ಸಮಾಜ ಸೇವಕ ಹಾಗೂ ಬೆಳೆಗಾರರಾದ ಮಲ್ಲನ ಆನಂದ್ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅನು ಕಾರ್ಯಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ವಿಶಾಲ್ ಮಾರ್ಟ್ ವ್ಯವಸ್ಥಾಪಕ ಕೆ.ಕೆ.ಗಿರೀಶ್, ಬೆಳೆಗಾರ ಚೆರಿಯಮನೆ ಪ್ರಸಾದ್, ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಪ್ರದಾನ ಕಾರ್ಯದರ್ಶಿ ರಾಕೇಶ್, ಕ್ರೀಡಾ ಸಂಚಾಲಕ ಸಂತೋಷ್ ರೈ, ಸ್ಟ್ಯಾನ್ಲಿ ಡೇವಿಡ್ ಉಪಸ್ಥಿತರಿದ್ದರು.
ಕೊಡಗು ಪ್ರೆಸ್ ಕ್ಲಬ್‌ನ ನಿದೇರ್ಶಕ ಸಿಂಗಿ ಸತೀಶ್ ಸ್ವಾಗತಿಸಿದರೆ, ಸದಸ್ಯ ಚಂದ್ರಮೋಹನ್ ಸ್ವಾಗತಿಸಿದರು. ಕೊಡಗು ಪ್ರೆಸ್ ಕ್ಲಬ್‌ನ ಸದಸ್ಯ ಕಿಶೋರ್ ರೈ ನಿರೂಪಿಸಿ, ಕೊಡಗು ಪ್ರೆಸ್ ಕ್ಲಬ್ ಖಜಾಂಚಿ ಆರ್.ಆರ್.ಮುನೋಜ್ ವಂದಿಸಿದರು.




