80ನೇ ಸ್ವಾತಂತ್ರ್ಯ ದಿನೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ಬಿಎಸ್‌ಎನ್‌ಎಲ್ ಸಂಸ್ಥೆಯು ಕೊಡಗು ಜಿಲ್ಲೆಯ ಗ್ರಾಹಕರಿಗೆ ಅತ್ಯಾಕರ್ಷಕ ಕೊಡುಗೆಗಳು ಹಾಗೂ ಡಿಜಿಟಲ್ ಸೇವೆಗಳನ್ನು ಘೋಷಿಸಿದೆ. ಆಗಸ್ಟ್ 12 ರಿಂದ ಸೆಪ್ಟೆಂಬರ್ 12, 2026 ರವರೆಗೆ ಹೊಸ ಸಂಪರ್ಕ ಪಡೆಯುವ ಗ್ರಾಹಕರಿಗೆ ಉಚಿತವಾಗಿ 4G ಸಿಮ್ ಕಾರ್ಡ್ ನೀಡಲಾಗುತ್ತಿದ್ದು, ಕೇವಲ ₹1 ರ ಮೊದಲ ರಿಚಾರ್ಜ್ (First Recharge) ಮೂಲಕ 24 ದಿನಗಳ ಅವಧಿಗೆ ಪ್ರತಿದಿನ 1 GB ಹೈಸ್ಪೀಡ್ ಡೇಟಾ, ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಉಚಿತ ಕರೆಗಳು ಹಾಗೂ ದಿನಕ್ಕೆ 100 ಎಸ್‌ಎಂಎಸ್ ಸೌಲಭ್ಯ ದೊರೆಯಲಿದೆ.
ಇದರೊಂದಿಗೆ ಬಿಎಸ್‌ಎನ್‌ಎಲ್ ಸೆಲ್ಫ್ ಕೇರ್ ಆಪ್ (BSNL Self Care App) ಮೂಲಕ 1,000ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳು, ಸಿನಿಮಾಗಳು, ವೆಬ್ ಸರಣಿಗಳು ಮತ್ತು ಸಂಗೀತ ಸೇವೆಗಳನ್ನು ಸಂಪೂರ್ಣ ಉಚಿತವಾಗಿ ವೀಕ್ಷಿಸಬಹುದು. ಮೊಬೈಲ್ ಸಂಖ್ಯೆ ಬದಲಾಯಿಸದೆ ಎಂಎನ್‌ಪಿ (MNP) ಮೂಲಕ ಬಿಎಸ್‌ಎನ್‌ಎಲ್‌ಗೆ ಬದಲಾಗಲು ಅಥವಾ ಹೊಸ ಸಿಮ್ ಪಡೆಯಲು ಹತ್ತಿರದ ಗ್ರಾಹಕ ಸೇವಾ ಕೇಂದ್ರ, ರೀಟೇಲರ್‌ಗಳನ್ನು ಸಂಪರ್ಕಿಸಬಹುದು ಅಥವಾ ವ್ಯಾಟ್ಸಾಪ್ ಸಂಖ್ಯೆ 1800 4444 ಮತ್ತು ಆಪ್ ಮೂಲಕ ಕಾಯ್ದಿರಿಸಬಹುದು. ಹೆಚ್ಚುವರಿಯಾಗಿ, ₹2,399 ರಿಚಾರ್ಜ್ ಯೋಜನೆಯ ವ್ಯಾಲಿಡಿಟಿಯನ್ನು 412 ದಿನಗಳಿಗೆ ಹೆಚ್ಚಿಸಲಾಗಿದ್ದು, ದಿನಕ್ಕೆ 2 GB ಡೇಟಾ ಹಾಗೂ ಅನ್‌ಲಿಮಿಟೆಡ್ ಕರೆಗಳ ಪ್ರಯೋಜನ ಸಿಗಲಿದೆ.
ಬಿಎಸ್‌ಎನ್‌ಎಲ್ 4G ನೆಟ್‌ವರ್ಕ್ ಕೊಡಗಿನಲ್ಲಿ 196ಕ್ಕೂ ಹೆಚ್ಚು ಟವರ್‌ಗಳ ಮೂಲಕ ಎಲ್ಲ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಿದ್ದು, ‘ಡಿಜಿಟಲ್ ಭಾರತ್ ನಿಧಿ’ ಅಡಿಯಲ್ಲಿ 47 ಹೊಸ 4G ಟವರ್‌ಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಹೈಸ್ಪೀಡ್ ‘ಫೈಬರ್ ಟು ದಿ ಹೋಮ್’ (FTTH) ಬ್ರಾಡ್‌ಬ್ಯಾಂಡ್ ಸೇವೆ ತಲುಪಿಸಲಾಗಿದ್ದು, ಸ್ವಾತಂತ್ರ್ಯ ದಿನೋತ್ಸವದ ಆಫರ್‌ನಲ್ಲಿ ₹499 ಯೋಜನೆಯ ಹೊಸ ಗ್ರಾಹಕರಿಗೆ ಮೊದಲ ತಿಂಗಳು ಉಚಿತ ಸೇವೆ ಮತ್ತು ಮುಂದಿನ 3 ತಿಂಗಳ ಬಿಲ್‌ನಲ್ಲಿ ತಲಾ ₹100 ರಿಯಾಯಿತಿ (60 Mbps ವೇಗದ ಅನ್‌ಲಿಮಿಟೆಡ್ ಡೇಟಾ) ದೊರೆಯಲಿದೆ. ಪ್ರಮುಖ ಬಸ್ ನಿಲ್ದಾಣಗಳು, ಆಸ್ಪತ್ರೆಗಳು ಮತ್ತು ತಾಲೂಕು ಕೇಂದ್ರಗಳಲ್ಲಿ ಉಚಿತ ವೈ-ಫೈ ರೋಮಿಂಗ್ ಸೌಲಭ್ಯ ಕಲ್ಪಿಸಲು ಬಿಎಸ್‌ಎನ್‌ಎಲ್ ಯೋಜಿಸಿದ್ದು, ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು 08272-223800 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.



