ಯೋಗಾಸನದಲ್ಲಿ ಹೊಸದಾಗಿ ಮೂರು ವಿಶ್ವ ದಾಖಲೆ ಮಾಡಿದ ಮದೆನಾಡಿನ ಬಿ.ಕೆ. ಸಿಂಚನಾ

Share this post :

ಮಡಿಕೇರಿ : ಯೋಗಾಸನದಲ್ಲಿ ಕೊಡಗಿನ ಸಿಂಚನಾ ಹೊಸದಾಗಿ ಮೂರು ವಿಶ್ವ ದಾಖಲೆ ಮಾಡಿದ್ದಾಳೆ. ಮದೆನಾಡಿನ ಬಿಜಿಎಸ್‌ ಶಾಲೆಯ ಆವರಣ ನೂತನ ದಾಖಲೆಗೆ ಸಾಕ್ಷಿಯಾಯಿತು.
ಯೋಗಾಸನದಲ್ಲಿ ಈಗಾಗಲೆ 07 ವಿಶ್ವ ದಾಖಲೆ ಮಾಡಿದ್ದ ಸಿಂಚನಾ, ಮಂಗಳವಾರ ಮೂರು ಹೊಸ ದಾಖಲೆ ಸೃಷ್ಟಿಸುವ ಮೂಲಕ 10 ಜಾಗತಿಕ ದಾಖಲೆಯಲ್ಲಿ ತನ್ನ ಹೆಸರು ನಮೂದಿಸಿದ್ದಾರೆ. ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ಗಾಗಿ ಶಾಲೆಯಲ್ಲಿ ವೇದಿಕೆ ಸಿದ್ಧವಾಗಿತ್ತು. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ ಸಮ್ಮುಖದಲ್ಲಿ, ಹಲವು ಗಣ್ಯರ ಉಪಸ್ಥಿತಿಯಲ್ಲಿ ಸಿಂಚನಾ ಹೊಸ ದಾಖಲೆ ಮಾಡಿದ್ದಾರೆ.
ಡಿಂಬಾಸನ ಭಂಗಿಯಲ್ಲಿ ಒಂದು ನಿಮಿಷದಲ್ಲಿ 10 ಬಾರಿ ತಿರುಗುವುದು, ಧನುರಾಸನ ಭಂಗಿಯಲ್ಲಿ ನಿಮಿಷದಲ್ಲಿ 20 ಬಾರಿ ತಿರುಗುವುದು, ಕಂಡಪೀಡಾಸನದಲ್ಲಿ ಹೆಚ್ಚು ಸಮಯ ಕುಳಿತುಕೊಳ್ಳುವುದರಲ್ಲಿ ಸಿಂಚನಾ ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ಗೆ ಸೇರ್ಪಡೆಯಾಗಿದ್ದಾಳೆ. ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ ಸಂಸ್ಥೆಯ ಏಷ್ಯಾ ಖಂಡದ ಮುಖ್ಯಸ್ಥ ಮನೀಷ್‌ ವಿಷ್ನೋಯ್‌ ಈಕೆಯ ಸಾಧನೆಯನ್ನು ದಾಖಲಿಸಿಕೊಂಡರು. ಈ ವೇಳೆ ಮಾತನಾಡಿದ ಅವರು, ನಮ್ಮದು ಅಮೇರಿಕಾ ಮೂಲದ ಕಂಪೆನಿ. ಈ ರೀತಿಯ ಮಕ್ಕಳ ಸಾಧನೆಯಿಂದ ಜಿಲ್ಲೆ, ರಾಜ್ಯ, ರಾಷ್ಟ್ರಕ್ಕೆ ಹೆಸರು ಬಂದಂತಾಗುತ್ತದೆ. ಪೋಷಕರು ಜೊತೆಗಿದ್ದು ಬೆಂಬಲವಾಗಿ ನಿಂತರೆ ಮಕ್ಕಳು ಸಾಧನೆಯ ಹಾದಿಯಲ್ಲಿ ಸಾಗಬಹುದು. ಇವತ್ತಿನ ಸಾಧನೆಯನ್ನು ಪರಿಗಣಿಸಿ ಶೀಘ್ರದಲ್ಲೇ ಸರ್ಟಿಫಿಕೇಟ್‌ ನೀಡುತ್ತೇವೆ ಎಂದರು.
ನಿರ್ಮಲಾನಂದ ಸ್ವಾಮೀಜಿ ಮಾತನಾಡಿ, ಜಗತ್ತಿಗೆ ನೂರಾರು ಕೊಡುಗೆಯನ್ನು ಭಾರತ ನೀಡಿದೆ. ಯೋಗ ಯಾವ ಜಾತಿ, ಧರ್ಮಕ್ಕೆ ಸೇರಿದ್ದಲ್ಲ, ಮನುಕುಲಕ್ಕೆ ಸೇರಿದ್ದು. ನಮ್ಮಲ್ಲಿದ್ದ ಯೋಗವನ್ನು ಮೋದಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದು ಜಾಗತಿಕವಾಗಿ ಯೋಗ ದಿನ ಆಚರಿಸುವಂತಾಗಿದೆ ಎಂದರು. ಜಗತ್ತಿನ ಮೂಲೆ ಮೂಲೆಯಲ್ಲಿರುವ ಪ್ರತಿಭೆಯನ್ನು ಗುರುತಿಸಿ ಎಲ್ಲರಿಗೂ ತೋರಿಸುವ ಕಾರ್ಯವನ್ನು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕರಾದ ಎ.ಎಸ್.‌ ಪೊನ್ನಣ್ಣ, ಡಾ. ಮಂತರ್ ಗೌಡ ಮಾತನಾಡಿ, ಸಿಂಚನಾಳ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ಸಾಧನೆಯ ಹಾದಿಯಲ್ಲಿ ಸರ್ಕಾರ ಹಾಗೂ ವೈಯಕ್ತಿಕವಾಗಿ ನೆರವಾಗುವುದಾಗಿ ಭರವಸೆ ನೀಡಿದರು. ಈ ವೇಳೆ ಇಬ್ಬರು ಶಾಸಕರು ವೈಯಕ್ತಿಕವಾಗಿ ಪ್ರೋತ್ಸಾಹ ಧನವನ್ನು ಸಿಂಚನಾಳಿಗೆ ನೀಡಿದರು.
ಮೈಸೂರು ಕೊಡಗು ಶಾಖಾ ಮಠದ ಸೋಮೇಶ್ವನಾಥ ಸ್ವಾಮೀಜಿ, ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜು, ಮದೆಮಹೇಶ್ವರ ಪಿಯು ಕಾಲೇಜು ಅಧ್ಯಕ್ಷ ಹುದೇರಿ ರಾಜೇಂದ್ರ, ಸಿಂಚನಾ ಪೋಷಕರಾದ ಕೀರ್ತಿ ಕುಮಾರ್‌, ರೇಣುಕಾ ಮುಂತಾದವರಿದ್ದರು.


coorg buzz
WhatsApp Image 2026-08-11 at 16.11.22