ಮಡಿಕೇರಿ: ಭಾರತ ಸ್ವಾತಂತ್ರ್ಯದ 80ನೇ ವರ್ಷಾಚರಣೆಯ ಅಂಗವಾಗಿ ಇದೇ ಆಗಸ್ಟ್ 15ರಂದು ಮೂರ್ನಾಡು ಕೊಡವ ಸಮಾಜದಲ್ಲಿ ‘ಯುನೈಟೆಡ್ ಕೊಡವ ಆರ್ಗನೈಜೇಷನ್’ (ಯುಕೊ) ಹಾಗೂ ‘ಮೂರ್ನಾಡು ಕೊಡವ ಸಮಾಜ’ದ ಜಂಟಿ ಸಹಯೋಗದಲ್ಲಿ “ನೆಪ್ಪುರ ನಳತ್ ಮಾಂಜತ ಮೊಟ್ಟ್” (‘The Ever Lasting Footprints in the Shadow of Memories’) ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕೊಡಗಿನ ನೈಜ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದಾಗಿ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ತಿಳಿಸಿದ್ದಾರೆ.
ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ತೇಲಪಂಡ ಸುಬ್ಬಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, “ದೇಶದ ಸ್ವಾತಂತ್ರ್ಯಕ್ಕಾಗಿ ಕೊಡಗಿನ ಹಿರಿಯರು ನಿಸ್ವಾರ್ಥ ಸೇವೆ ಹಾಗೂ ತ್ಯಾಗ ಮಾಡಿದ್ದಾರೆ. ಆದರೆ ಸರ್ಕಾರದಿಂದಾಗಲಿ, ಸಾರ್ವಜನಿಕರಿಂದಾಗಲಿ ಅವರಿಗೆ ಸರಿಯಾದ ಗೌರವ ಸಿಗುತ್ತಿಲ್ಲ. ಸ್ಥಳೀಯ ಸತ್ಯಾಗ್ರಹಿಗಳನ್ನು ಮತ್ತು ಹೋರಾಟಗಾರರನ್ನು ಗುರುತಿಸಿ ಸ್ಮರಿಸದಿದ್ದರೆ ಈ ಮಣ್ಣಿನ ನೈಜ ಇತಿಹಾಸ ಅಳಿಸಿಹೋಗಲಿದೆ. ಈ ನಿಟ್ಟಿನಲ್ಲಿ ಇಂದಿನ ಪೀಳಿಗೆಗೆ ಅವರ ತ್ಯಾಗ ಬಲಿದಾನಗಳನ್ನು ಪರಿಚಯಿಸಲು ಈ ಕಾರ್ಯಕ್ರಮ ರೂಪಿಸಲಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದ ಭಾಗವಾಗಿ ವಿಚಾರ ವಿನಿಮಯ, ದೇಶಭಕ್ತಿ ಗೀತೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ನೆನಪುಗಳನ್ನು ಮೆಲುಕು ಹಾಕುವ ಅಪರೂಪದ ಛಾಯಾಚಿತ್ರ ಪ್ರದರ್ಶನವೂ ಜರುಗಲಿದೆ.
ಸಮಾಜದ ಅಧ್ಯಕ್ಷ ತೇಲಪಂಡ ಸುಬ್ಬಯ್ಯ ಮಾತನಾಡಿ, ಕೊಡವರ ಅಸ್ತಿತ್ವ ಮತ್ತು ಸಂಸ್ಕೃತಿಯನ್ನು ಕಾಪಾಡಿಕೊಳ್ಳಲು ಇತಿಹಾಸವನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದರು. ಆಗಸ್ಟ್ 15ರಂದು ಮಧ್ಯಾಹ್ನ 1:00 ಗಂಟೆಗೆ ಛಾಯಾಚಿತ್ರ ಪ್ರದರ್ಶನದ ಉದ್ಘಾಟನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಕಾರ್ಯಕ್ರಮದಲ್ಲಿ ಮಡಿಕೇರಿ ಹಾಗೂ ವಿರಾಜಪೇಟೆ ಕ್ಷೇತ್ರದ ಜನಪ್ರತಿನಿಧಿಗಳು, ಶಾಸಕರು, ಸಂಸದರು, ಸಚಿವರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಸ್ಥರು ಭಾಗವಹಿಸಲಿದ್ದಾರೆ.
ಈ ಸಭೆಯಲ್ಲಿ ಮೂರ್ನಾಡು ಕೊಡವ ಸಮಾಜದ ಉಪಾಧ್ಯಕ್ಷ ಕೋಟೆರ ರಾಜ, ಕಾರ್ಯದರ್ಶಿ ಚಂಗಂಡ ಸೂರಜ್ ತಮ್ಮಯ್ಯ, ಖಜಾಂಚಿ ಅಮ್ಮಾಟಂಡ ದೇವಯ್ಯ, ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಪಳಂಗಂಡ ರೇಖ, ಉಪಾಧ್ಯಕ್ಷೆ ಪೆಮ್ಮಂಡ ಗೀತಾ ಪವಿತ್ರ, ಯುಕೊ ಸದಸ್ಯ ಪುದಿಯೊಕ್ಕಡ ದಿನೇಶ್, ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಚೊಟ್ಟೆಯಂಡ ಸಂಜು ಕಾವೇರಪ್ಪ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.



