( ಪ್ರೇಮದ ಊರಲಿ.. ಹೖದಯದ ತೇರಲಿ.. ಒಲವಿನ ಮಳೆಯಾಗಿದೆ…)
ಸಿನೆಮಾ ವಿಮರ್ಶೆ – ಅನಿಲ್ ಹೆಚ್.ಟಿ., ಹಿರಿಯ ಪತ್ರಕರ್ತರು
ಒಳ್ಳೆಯ ಚಿತ್ರಗಳಿಲ್ಲದೇ ಬರಗೆಟ್ಟಿದ್ದ ಕನ್ನಡ ಚಿತ್ರರಂಗದಲ್ಲಿ ಈಗ ಮುಂಗಾರು ಮಳೆ..
ಕುಶಾಲನಗರದ ಡಿಆರ್ ಸಿ ಸಿನಿಮಾಸ್ ಪ್ರವೇಶಿಸುತ್ತಿದ್ದಂತೆಯೇ ಅಪರಿಚಿತರಾಗಿದ್ದ ಯುವದಂಪತಿ ಮುಗಳು ನಕ್ಕು ಹೇಳಿದ್ದರು. ಸೋಶಿಯಲ್ ಮೀಡಿಯಾ ನೋಡಿಕೊಂಡು ಮೂವಿಗೆ ಬಂದುಬಿಟ್ಟಿದ್ದೇವೆ. ಏನಾಗುತ್ತೋ ಏನೋ..!!!
ಹೌದು. ಕನಾ೯ಟಕದಲ್ಲಿ ಈಗ ಸೋಶಿಯಲ್ ಮೀಡಿಯಾ ಹವಾದಿಂದ ಅದ್ಬುತ ಪ್ರಚಾರ ಪಡೆಯುತ್ತಾ, ಅಪೂವ೯ ಗೆಲವು ಸಾಧಿಸುತ್ತಿರುವ ಸಿನಿಮಾವೇ
ಪ್ರೇಮದ ಊರಲಿ..
ಇಲ್ಲಿ ಸ್ಟಾರ್ ನಟರಿಲ್ಲ. ವಿವಿಧ ಬಿರುದಾಂಕಿತ ಹೀರೋ ಹೀರೋಯಿನ್ ಗಳೂ ಇಲ್ಲ. ಎಲ್ಲರೂ ತೆರೆಗೆ ಹೊಸಬ್ಬರೇ, ತೆರೆಗೆ ಬರುವ ಮುನ್ನ ಭಜ೯ರಿ ಪ್ರಚಾರ ಕೂಡ ಇಲ್ಲ. ಆದರೆ ತೆರೆಗೆ ಬಂದ ಮೇಲೆ ಆದದ್ದೇ ಕನ್ನಡ ಚಿತ್ರರಂಗದ ವಿಸ್ಮಯ!
ಹಿಂದಿಯ ಹನುಮಾನ್ ಅಂಶ್ ನಂತೆ ಕನ್ನಡದಲ್ಲಿಯೂ ಪ್ರೇಮದ ಊರಲಿ ನಿರೀಕ್ಷೆಗೂ ಮೀರಿದ ಯಶಸ್ಸು ಕಾಣುತ್ತಾ ಕೋಟಿಕೋಟೆ ಬಾಚುತ್ತಿದೆ. ಎಲ್ಲೆಡೆ ಹೌಸ್ ಫುಲ್ ಪ್ರದಶ೯ನ ಕಾಣುತ್ತಿರುವುದು ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ಬೆಳವಣಿಗೆ.
ಬಹಳ ವಷ೯ಗಳ ಹಿಂದೆ.. ಡಾ.ರಾಜ್ ಕುಮಾರ್ ಅಭಿನಯದ ಬಂಗಾರದ ಮನುಷ್ಯ ನೋಡಲು ಗ್ರಾಮೀಣ ಜನ ತಂಡೋಪತಂಡವಾಗಿ ಎತ್ತಿನ ಗಾಡಿಯಲ್ಲಿ ಥಿಯೇಟರ್, ಟೆಂಟ್ ಗೆ ಬರುತ್ತಿದ್ದರಂತೆ. ನಂತರ ವಿಷ್ಟುವಧ೯ನ್ ನಟನೆಯ ಯಜಮಾನ ಚಿತ್ರ ನೋಡಲು ಪ್ರೇಕ್ಷಕರು ಟ್ರಾಕ್ಟರ್ ಗಳಲ್ಲಿ ಬರುತ್ತಿದ್ದರು. ಆದರೀಗ. ಬದಲಾದ ಕಾಲಘಟ್ಟದಲ್ಲಿ ಬಿಎಂ.ಡಬ್ಲ್ಯು, ಮಾರುತಿ 800, ಬೈಕ್, ಸ್ಕೂಟರ್ ಗಳಲ್ಲಿಯೂ ಜನರು ಗುಂಪು ಗುಂಪಾಗಿ ಚಿತ್ರಮಂದಿರಗಳತ್ತ ಪ್ರೇಮದ ಊರಲಿ ನೋಡಲು.. ಮತ್ತೆ ಹೆಜ್ಜೆ ಹಾಕುತ್ತಿದ್ದಾರೆ.
ಪ್ರೇಮದ ಊರಲಿ . ಕಥೆ ಏನು?
ಇದು ಗ್ರಾಮೀಣ ಪ್ರದೇಶದ ದೖಶ್ಯ ಕಾವ್ಯ. ಎಲ್ಲೆಲ್ಲೂ ಹಸಿರು.. ತೆರೆಮೇಲೆಲ್ಲಾ ಚಂದದ ಹಸಿರು ವಿಜೖಂಭಿಸಿದರೆ.. ನೋಡುಗನ ಕಣ್ಣಿಗೆ ಹಬ್ಬ. ಮಳೆ ಕೂಡ ಇಲ್ಲಿ ಪಾತ್ರವಾಗಿದೆ. ಮಾತಾಗಿದೆ. ಕೆಲವೊಮ್ಮೆ ಮೌನದ, ವಿಷಾಧದ ಸಂಕೇತವಾಗಿದೆ…!
ಇರುವುದು ಮೂರು ಮತ್ತೊಂದು ಪಾತ್ರ. ನಾಗಣ್ಣನೆಂಬ ತಂದೆ ಪಾತ್ರದಲ್ಲಿ ರಂಗಾಯಣ ರಘು ನಟನೆಗೆ ಅವರೇ ಸಾಟಿ. ಎಂಥ ಅದ್ಬುತ ಕಲಾವಿದ ಈ ರಘು. ಇಡೀ ಚಿತ್ರವನ್ನು ತನ್ನ ಮಗನನ್ನು ಹೊತ್ತಂತೆ ಹೆಗಲಿನಲ್ಲಿ ಹೊತ್ತು ಮೆರೆದಾಡಿದ್ದಾರೆ ರಂಗಾಯಣ ರಘು.
ವಸಂತ ಎಂಬ ಚೆಲ್ಲುಚೆಲ್ಲಾದ ಪಾತ್ರದಲ್ಲಿ ನವನಟಿ ರಮಿಕಾ ಶಿವು ಅವರದ್ದು ಎಂಥ ಅದ್ಬುತ ಅಭಿನಯ… ಎಲ್ಲಿದ್ದೆ ಇಲ್ಲಿ ತನಕ ಎಂಬಂತೆ ವಸಂತ ಪಾತ್ರದಾರಿ ಗಮನ ಸೆಳೆಯುತ್ತಾಳೆ. ಚಿತ್ರದ ಪ್ರಥಮಾಧ೯ ಈಕೆಯದ್ದೇ ಅಂದ ಚಂದ. ವಾವ್ ಎಂಬ ನಟನೆ. ಕೊನೆಗೊಮ್ಮೆ ಹೇಗೆ , ಎಲ್ಲಿ, ಯಾವಾಗ ಬರಬೇಕೋ ಆವಾಗ ಬಂದು ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸುವ ರಮಿಕಾ ಶಿವುಗೆ 2026 ರ ಉದಯೋನ್ಮುಖ ನಟಿ ಪ್ರಶಸ್ತಿ…ಗ್ಯಾರಂಟಿ
ನಮ್ ಕೊಡಗಿನ ಬೆಡಗಿ ತಪಸ್ವಿನಿ ಪೂಣಚ್ಚ, ದ್ವಿತಿಯಾಧ೯ದಲ್ಲಿ ತೆರೆಯನ್ನು ಆಕ್ರಮಿಸಿಕೊಳ್ಳುತ್ತಾಳೆ. ಮುದ್ದಾದ ಹಾವಭಾವದಂತೆ ಈಕೆಗೆ ಸಿಕ್ಕಿರುವ ಅವಕಾಶವನ್ನೂ ಸದುಪಯೋಗಪಡಿಸಿಕೊಂಡು ಭವಿಷ್ಯದ ತಾರೆ ಎನಿಸಿಕೊಳ್ಳುತ್ತಾಳೆ.
ನಾಯಕ, ಸಂತು ಪಾತ್ರಧಾರಿ ಶ್ರೀರಾಮ್ ನಮ್ಮ ಶಂಕರ್ ನಾಗ್ ನಟನೆಯನ್ನೇ ನೆನಪಿಸುತ್ತಾರೆ. ಈ ನಟ ಕನ್ನಡಕ್ಕೆ ಅಗತ್ಯವಿತ್ತು. ಮುಂದೆ ಬಿರುದು ಬಾವಲಿ ಪಡೆದು ಅಭಿಮಾನಿ ಬಳಗವನ್ನು ಪಡೆದುಕೊಳ್ಳಬಲ್ಲ ತಾಕತ್ತು ಈ ನಟನಿಗಿದೆ. ಆತನ ನಟನೆಯಲ್ಲಿ ಈ ಅಂಶವಿದೆ.
ಇವರೆಲ್ಲರೊಂದಿಗೆ, ಹಳ್ಳಿಯ ಎರಡು ಮಾವಿನ ಮರಗಳು ಕೂಡ ಚಿತ್ರದ ಕೇಂದ್ರಬಿಂದು. ಅಂತೆಯೇ ವಸಂತಳ ಜಡೆಯ ಮೋಡಿಯೂ ಚಿತ್ರದ ಪ್ರಮುಖ ಪಾತ್ರವಾಗಿ ವಿಜೖಂಭಿಸಿದೆ.!!
ನಿದೇ೯ಶಕ ಮನೋಜ್ ಕುಮಾರ್ ತನ್ನ ಮೊದಲ ಚಿತ್ರವಾದ ಅಕ್ಷಿ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಯಾಕಾಗಿ ಇವರಿಗೆ ಪ್ರಶಸ್ತಿ ಬಂತು ಎಂದು ಪ್ರಶ್ನಿಸಿದ್ದವರಿಗೆ ಈಗ ಮನೋಹರ್ ತನ್ನ ಎರಡನೇ ಚಿತ್ರವಾದ ಪ್ರೇಮದ ಊರಲಿ ಮೂಲಕ ತನ್ನ ಪ್ರತಿಭೆ ಏನೆಂದು ಉತ್ತರಿಸಿದ್ದಾರೆ.
ಸುನಾದ್ ಗೌತಮ್ ಅವರ ಸಂಗೀತ ಅನೇಕ ದಿನಗಳ ಕಾಲ ಗುನಗುನಿಸುವಂತಿದೆ. ರಾಜ್ ಕಾಂತ್ ಅವರ ಕ್ಯಾಮರದಲ್ಲಿ ಮೂಡಿಬಂದ ಗ್ರಾಮೀಣ ಸೊಬಗು ವಾವ್ ಎನ್ನುವಂತಿದೆ. ಹಷಿ೯ತ್ ಪ್ರಭು ಅವರ ಕೈಚಳಕದಲ್ಲ ಸಂಕಲನ ಕೂಡ ಬಿಗಿಯಾಗಿದೆ. ಎರಡೂವರೆ ಗಂಟೆ ಒಂದಿನಿತೂ ಬೇಸರವಾಗದಂತೆ ನೋಡಿಸಿಕೊಂಡು ಹೋಗುವ, ಅಲ್ಲಲ್ಲಿ, ನಗೆಯುಕ್ಕಿಸುವ. ಮುಂದಿನ ದೖಶ್ಯ ಹೀಗೇ ಇರಲಿದ ಎಂಬ ಪ್ರೇಕ್ಷಕನ ಊಹೆಯನ್ನೂ ತಪ್ಪಿಸುವ ಟ್ವಿಸ್ಟ್ ಗಳ ಕಥೆ… ನಿದೇ೯ಶಕ, ಬರಹಗಾರ, ಸಾಹಿತ್ಯಕಾರನ ಬುದ್ದಿವಂತಿಕೆ ಮೆಚ್ಚತಕ್ಕದ್ದು.
…
ಪ್ರೇಮದ ಊರಲಿ . ನಿಮ್ಮ ಕಣ್ಣಾಲಿಗಳನ್ನು ಒದ್ದೆಮಾಡುತ್ತದೆ.
ಬಾವನೆಗಳು ಮನಮುಟ್ಟುತ್ತದೆ.. ಹಾಡುಗಳು ತಂಗಾಳಿಯಂತೆ ಬೀಸುತ್ತವೆ. ಸಂಭಾಷಣೆಗಳು ಹೖದಯಂಗಮವಾಗಿದೆ. ಪ್ಕತೀ ಸಂಭಾಷಣೆಯನ್ನೂ ಅಳೆದು ತೂಗಿ ಬರೆದಂತಿದೆ. ನೀನು ಕಾಲು ಜಾರಿ ಬಿದ್ದದ್ದು ಅಲ್ಲ ಕಣಮ್ಮ.. ನೀನು ಮನಸ್ಸು ಜಾರಿ ಬಿದ್ದದ್ದು ಎಂಬಂಥ ಮನಮುಟ್ಟುವ ಸಂಭಾಷಣೆಗಳು ಹೇರಳವಾಗಿದೆ. ಹಳೇ ಕಾಲದ ವಾರಪತ್ರಿಕೆಗಳಲ್ಲಿ ಓದುತ್ತಿದ್ದ ಕಾದಂಬರಿಯ ಪಾತ್ರಗಳು ಮತ್ತೆ ಸಿನಿಮಾ ರೂಪದಲ್ಲಿ ಪ್ರತ್ಯಕ್ಷರಾಗಿ ಮನಸ್ಸು ತಟ್ಟಿದಂತಿದೆ.
ಎಲ್ಲಿಯೂ ಕಾಟಾಚಾರಕ್ಕೆ ಎಂಬಂತೆ ಚಿತ್ರದ ದೖಶ್ಯಗಳನ್ನು ಜೋಡಿಸದೇ, ಎಲ್ಲವನ್ನೂ ಮನಸ್ಸಿಟ್ಟು ಚಿತ್ರತಂಡ ರೂಪಿಸಿದೆ. ಹೀಗಾಗಿಯೇ ಚಿತ್ರಕ್ಕೆ ಅದ್ಬುತ ಗೆಲವು ಸಿದ್ದಿಸಿದೆ.
ರೈತರ ಹಾಡು – ಪಾಡಿಗೆ ರೈತರು ಮಾತ್ರವೇ ಅಲ್ಲ. ನಗರಗಳ ಜನ ಕೂಡ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುವಂತೆ ಕೖಷಿಕರ ಪರವಾದ ಕಥೆ ಹೊಂದಿದೆ. ಮಣ್ಣಿನ ಮಕ್ಕಳ ಕಥೆ ಹೊಂದಿರುವ ಚಿತ್ರ ಎಂದರೂ ಸಮಸ್ಯೆಯೇನಿಲ್ಲ.!
….
ಕತ್ತಿ, ಮಚ್ಚು, ಲಾಂಗ್, ರಕ್ತದೋಕುಳಿ, ಬುಲೆಟ್ ಮಳೆ, ಕೆ 47, ಬಾಂಬ್ .. ಇವು ಯಾವುವೂ ಚಿತ್ರದಲ್ಲಿಲ್ಲ…
ಹೊಲದ ಸಿರಿ, ಟ್ರಾಕ್ಟರ್ , ಮಳೆ ಹನಿ, ಹಸಿರ ಹೊನಲು, ವಿಶಾಲ ಕೆರೆ, ಪುಟ್ಟ ಮನೆ, ಬುತ್ತಿಯೂಟ…ಹಳ್ಳಿ ಹುಡುಗಿ, ಕುಳ್ಳ ಹುಡುಗ.. ಇವರಿಗೆಲ್ಲಾ ಮಾವನಂತಿರುವ ಅಪ್ಪ ಎಂಬ ದೇವತಾ ಮನುಷ್ಯ ಎಲ್ಲಿಯೋ ನಡೆದ ಕಥೆಯಾಗಿರದೇ ನಮ್ಮ ನಿಮ್ಮೂರಿನಲ್ಲಿಯೇ ನಡೆದ ಕಥೆಯಂತೆ ಕಂಗೊಳಿಸುವುದೇ ಈ ಚಿತ್ರ ಈ ರೀತಿ ಗೆಲ್ಲಲು ಕಾರಣ.
ನಮ್ಮ ಮಣ್ಣಿನ ಗುಣ, ನಮ್ಮ ಭೂಮಿಯ ಮಹತ್ವವನ್ನು ತಿಳಿಸುವ ಚಂದದ ಸಂದೇಶ ಕೂಡ ಇರುವ ಚಿತ್ರ ಹೀಗಾಗಿಯೇ ಎಲ್ಲರನ್ನೂ ತನ್ನದೇ ಕಥೆಯ ಚಿತ್ರದಂತೆ ಭಾವನಾತ್ನಕವಾಗಿ ಸೆಳೆಯುತ್ತಿದೆ. ಇಲ್ಲಿನ ಪಾತ್ರಧಾರಿಗಳು ನಾವೇ ಏನೋ ಎಂಬಂತೆ ಭಾಸವಾದರೆ ಅದುವೇ ಈ ಚಿತ್ರದ ಪ್ಲಸ್ ಪಾಯಿಂಟ್ …
ಗಾಳಿ ಮಾತು ಎಂಬ ಹಳೇ ಚಿತ್ರದ ಕಥೆ ಎಳೆಯನ್ನು ಹೊಂದಿಕೊಂಡು ಹೊಸತನದಿಂದ ಸಿದ್ದಪಡಿಸಿರುವ ಪ್ರೇಮದ ಊರಲಿ . ಇನ್ನೂ ಅನೇಕ ವಾರಗಳ ಕಾಲ ಕನಾ೯ಟಕದ ಜನಮನ ಗೆಲ್ಲಲಿದೆ. ಮಲಯಾಳ, ತೆಲುಗು, ತಮಿಳಿನಲ್ಲಿಯೂ ಈ ಚಿತ್ರ ಡಬ್ ಆಗುತ್ತಿದೆ. ನೋಡ್ರಿ.. ಕನ್ನಡದ ಸಿನಿಮಾ ಕಥೆಯ ತಾಕತ್ತು ಎಂದು ಪರಭಾಷೆಯವರಿಗೆ ಪ್ರೇಮದ ಊರಲ್ಲಿ ತೋರಿಸುತ್ತಿದೆ.
ಇಂಥ ಆಹ್ಲಾದಕರ ಚಿತ್ರ ಬೇಕಿತ್ತು. ಅನಿವಾಯ೯ತೆಯಿತ್ತು.
ಈ ಚಿತ್ರವನ್ನು ಗೆಲ್ಲಿಸಿ.. ಅಲ್ಲ.. ಗೆದ್ದಿರುವ ಚಿತ್ರವನ್ನು ನೀವೊಮ್ಮೆ ನೋಡಿ,.. ಮಿಸ್ ಮಾಡಬೇಡಿ.!
..
ಸೋಷಿಯಲ್ ಮೀಡಿಯಾ ನೋಡಿಕೊಂಡು ಬಂದೆ ಎಂದ ದಂಪತಿ ಕಾರ್ ಪಾಕಿ೯ಂಗ್ ಏರಿಯಾದಲ್ಲಿ ಮತ್ತೆ ಸಿಕ್ಕಿದರು. ಮಾತನಾಡಿಸುವ ಮುನ್ನವೇ.. ಏನ್ ಸಾರ್.. ಎಂಥಾ ಚಿತ್ರ…. ಉಫ್ ಎಂದು ಸಂಭ್ರಮಿಸಿದರು. ಅವರು ಯಾರೋ.. ನಾವು ಯಾರೋ.. ಪ್ರೇಮದ ಊರಿನಲ್ಲಿರುವಂತೆ ನಾವೆಲ್ಲಾ ಆ ಸಂಭ್ರಮದಲ್ಲಿ ಬೆಸೆದುಕೊಂಡಿದ್ದೆವು.
ಪ್ರೇಮದ ಊರಲಿ ..
ಚಿತ್ರ ಅಂತ್ಯವಾಗುತ್ತಿದ್ದಂತೆಯೇ ಅಲ್ಲಿದ್ದ 240 ಪ್ರೇಕ್ಷಕರು ಯಾರೂ ಹೇಳದೇ, ಯಾರನ್ನೂ ಕೇಳದೇ.. ಎದ್ದುನಿಂತು ಒಂದೇ ಸಮನೆ ಚಪ್ಪಾಳೆ ತಟ್ಟತೊಡಗಿದರು…
ಒಂದು ಸಿನಿಮಾದ ಸಂಭ್ರಮಾಚರಣೆ ಅದು. ಒಂದು ಪ್ರೇಮದ ಗೆಲುವಿನ ಸಡಗರ ಅದು. ಒಂದು ಊರಿನ ಸಂತೋಷ ಅದು. ಒಂದು ಕನ್ನಡ ಚಿತ್ರದ ಯಶಸ್ಸಿನಲ್ಲಿ ನಾವೂ ಪಾಲುದಾರರು ಎಂದು ಕನ್ನಡಿಗರು ಹೇಳಿಕೊಳ್ಳುತ್ತಿರುವ ರೀತಿ ಅದು..
ನಮ್ಮೂರಿನ ಪ್ರೇಮದ ಕಥೆಗಳು..
ಹೀಗೇ ಹತ್ತಾರು .. ನೂರೂರು ಬರಲಿ.. ನೋಡುವ ಭಾಗ್ಯ ನಮ್ಮೆಲ್ಲರದ್ದಾಗಲಿ..!!!



