ಗೃಹಲಕ್ಷ್ಮಿ: ಮನೆ ಬಾಗಿಲಿಗೆ ಬರಲಿದ್ದಾರೆ ಅಧಿಕಾರಿಗಳು, 17 ಪ್ರಶ್ನೆಗಳಿಗೆ ಉತ್ತರಿಸಿದರೆ ಮಾತ್ರ ₹2,000!

Gruha Lakshmi Scheme

Share this post :

ರಾಜ್ಯ ಸರ್ಕಾರದ ಪ್ರಮುಖ ಐದು ಗ್ಯಾರಂಟಿಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಯಡಿ ತಿಂಗಳಿಗೆ ರೂ. 2,000 ಪ್ರೋತ್ಸಾಹಧನ ಪಡೆಯುತ್ತಿರುವ ಫಲಾನುಭವಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಹತ್ವದ ಸೂಚನೆ ನೀಡಿದೆ. ಯೋಜನೆಯ ದುರುಪಯೋಗ ತಡೆಯಲು ಮತ್ತು ಅನರ್ಹರನ್ನು ಪಟ್ಟಿಯಿಂದ ಹೊರಗಿಡಲು ಸರ್ಕಾರ ಬೃಹತ್ ಮರುಪರಿಶೀಲನಾ (Verification) ಅಭಿಯಾನ ಕೈಗೆತ್ತಿಕೊಂಡಿದೆ.

ಇದಕ್ಕಾಗಿ ಇಲಾಖೆಯು 17 ನಿರ್ದಿಷ್ಟ ಪ್ರಶ್ನೆಗಳನ್ನೊಳಗೊಂಡ ನೂತನ ಪರಿಶೀಲನಾ ಮಾರ್ಗಸೂಚಿ (Guidelines) ಸಿದ್ಧಪಡಿಸಿದ್ದು, ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲಾಗುತ್ತಿದೆ.

17 ಪ್ರಶ್ನೆಗಳ ಪರಿಶೀಲನೆ ಏಕೆ?
ಅನೇಕ ಕಡೆಗಳಲ್ಲಿ ಸರ್ಕಾರಿ ನೌಕರರು, ಐಟಿ ಪಾವತಿದಾರರು ಹಾಗೂ ತೆರಿಗೆ ಪಾವತಿಸುವ ಕುಟುಂಬದವರೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯುತ್ತಿದ್ದಾರೆ ಎಂಬ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ, ನೈಜ ಬಡ ಕುಟುಂಬಗಳಿಗೆ ಹಾಗೂ ಅರ್ಹ ಯಜಮಾನಿಯರಿಗೆ ಮಾತ್ರ ಹಣ ತಲುಪುವಂತೆ ಮಾಡಲು ಇಲಾಖೆ ಈ ಕಠಿಣ ಕ್ರಮಕ್ಕೆ ಮುಂದಾಗಿದೆ.

ಹೊಸ ಮಾರ್ಗಸೂಚಿಯ ಪ್ರಮುಖ ಅಂಶಗಳು:
ಮನೆ-ಮನೆ ಭೇಟಿ: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಇಲಾಖೆಯ ಸಿಬ್ಬಂದಿ ಪ್ರತಿಯೊಬ್ಬ ಫಲಾನುಭವಿಯ ಮನೆ ಬಾಗಿಲಿಗೆ ತೆರಳಿ 17 ಪ್ರಶ್ನಾವಳಿ ಆಧಾರಿತ ಸಮೀಕ್ಷೆ ನಡೆಸಲಿದ್ದಾರೆ.

ಪುರುಷ ಯಜಮಾನನ ಮಾಹಿತಿ ಕಡ್ಡಾಯ: ಇಲ್ಲಿಯವರೆಗೆ ಮಹಿಳೆಯರ ವಿವರಕ್ಕೆ ಮಾತ್ರ ಪ್ರಾಮುಖ್ಯತೆ ನೀಡಲಾಗುತ್ತಿತ್ತು. ಆದರೆ ಇನ್ಮುಂದೆ ಕುಟುಂಬದ ಪುರುಷ ಯಜಮಾನನ (ಗಂಡ/ತಂದೆ) ವಿವರ, ಅವರ ಗುರುತಿನ ಚೀಟಿ (Identity Verification) ದಾಖಲಿಸುವುದು ಕಡ್ಡಾಯವಾಗಿದೆ.

ಆದಾಯ ಮತ್ತು ತೆರಿಗೆ ವಿವರ: ಕುಟುಂಬದಲ್ಲಿ ಯಾರಾದರೂ ಆದಾಯ ತೆರಿಗೆ (Income Tax) ಅಥವಾ ಜಿಎಸ್‌ಟಿ (GST) ಪಾವತಿಸುತ್ತಿದ್ದಾರೆಯೇ? ಸರ್ಕಾರಿ ಅಥವಾ ಅರೆ-ಸರ್ಕಾರಿ ನೌಕರರಿದ್ದಾರೆಯೇ? ಎಂಬ ಮಾಹಿತಿಯನ್ನು ಕಟ್ಟುನಿಟ್ಟಾಗಿ ತಪಾಸಣೆ ಮಾಡಲಾಗುತ್ತದೆ.

ಆಸ್ತಿ ವಿವರ: ಕುಟುಂಬಕ್ಕೆ ಸೇರಿದ ಜಮೀನು, ಸ್ವಂತ ಮನೆ, ವಾಹನಗಳು ಹಾಗೂ ಒಟ್ಟಾರೆ ಆರ್ಥಿಕ ಪರಿಸ್ಥಿತಿಯ ಕುರಿತು ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಅನರ್ಹರು ಕಂಡುಬಂದರೆ ಏನಾಗಲಿದೆ?
ಪರಿಶೀಲನೆಯ ವೇಳೆ ತಪ್ಪು ಮಾಹಿತಿ ನೀಡಿ ಯೋಜನೆಯ ಲಾಭ ಪಡೆಯುತ್ತಿರುವುದು ಸಾಬೀತಾದರೆ ಅಥವಾ ಸರ್ಕಾರದ ನಿಯಮಗಳಿಗೆ ಹೊರತಾದ ಕುಟುಂಬಗಳಾಗಿದ್ದರೆ, ಅಂತಹ ಅರ್ಜಿಗಳನ್ನು ತಕ್ಷಣವೇ ರದ್ದುಗೊಳಿಸಲಾಗುತ್ತದೆ. ಜೊತೆಗೆ ಅಂತಹವರ ಖಾತೆಗೆ ಇನ್ಮುಂದೆ ಮಾಸಿಕ ರೂ. 2,000 ಜಮೆಯಾಗುವುದಿಲ್ಲ.

ಈಗಾಗಲೇ ಸಮೀಕ್ಷೆಗಾಗಿ ಸಿಬ್ಬಂದಿಗೆ ತರಬೇತಿ ಪ್ರಕ್ರಿಯೆ ಆರಂಭಗೊಂಡಿದ್ದು, ಶೀಘ್ರದಲ್ಲೇ ರಾಜ್ಯಾದ್ಯಂತ ವೆರಿಫಿಕೇಷನ್ ಕಾರ್ಯ ಪೂರ್ಣಗೊಳ್ಳಲಿದೆ. ಅರ್ಹ ಫಲಾನುಭವಿಗಳು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

coorg buzz
WhatsApp Image 2026-08-11 at 16.11.22