ಚಲಿಸುವ ಬಸ್ಸಲ್ಲೇ ಗರ್ಭಿಣಿಗೆ ಹೆರಿಗೆ ನೋವು: ಸಕಾಲಕ್ಕೆ ಆಸ್ಪತ್ರೆಗೆ ತಲುಪಿಸಿ ಮಾನವೀಯತೆ ಮೆರೆದ ಸಿಬ್ಬಂದಿಗೆ ಗೌರವ

Share this post :

ಮಡಿಕೇರಿಯಿಂದ ಗೋಣಿಕೊಪ್ಪಕ್ಕೆ ತೆರಳುತ್ತಿದ್ದ ‘ರಾಣಿ’ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅಸ್ಸಾಂ ಮೂಲದ ಗರ್ಭಿಣಿ ಮಹಿಳೆಗೆ ಮಾರ್ಗಮಧ್ಯೆ ದಿಢೀರನೆ ತೀವ್ರ ಪ್ರಸವ ವೇದನೆ ಕಾಣಿಸಿಕೊಂಡಿತ್ತು. ಮಡಿಕೇರಿ ಟೋಲ್‌ಗೇಟ್‌ನಲ್ಲಿ ಬಸ್ ಹತ್ತಿದ್ದ ಆಕೆಯ ಸ್ಥಿತಿ ಹದಗೆಡುತ್ತಿರುವುದನ್ನು ಗಮನಿಸಿದ ಬಸ್ ಚಾಲಕ ರಾಕೇಶ್ ಹಾಗೂ ನಿರ್ವಾಹಕ ಕಿಶನ್, ಪರಿಸ್ಥಿತಿಯ ಗಂಭೀರತೆಯನ್ನು ಅರಿತು ತಕ್ಷಣವೇ ಆಕೆಗೆ ಬಸ್ಸಿನಲ್ಲಿ ಆಸನದ ವ್ಯವಸ್ಥೆ ಕಲ್ಪಿಸಿ ನೆರವಾದರು.

ಯಾವುದೇ ಸಮಯ ವ್ಯರ್ಥ ಮಾಡದೆ ಅಪಾರ ಸಮಯಪ್ರಜ್ಞೆ ಮೆರೆದ ಸಿಬ್ಬಂದಿ, ಪ್ರಯಾಣಿಕರಿದ್ದ ಬಸ್ಸನ್ನು ನೇರವಾಗಿ ವಿರಾಜಪೇಟೆಯ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಮುಂಭಾಗಕ್ಕೆ ಚಲಾಯಿಸಿಕೊಂಡು ಹೋಗಿ ಆಕೆಯನ್ನು ದಾಖಲಿಸಿದರು. ಆಸ್ಪತ್ರೆಗೆ ತಲುಪಿಸಿದ ಕೆಲವೇ ಕ್ಷಣಗಳಲ್ಲಿ ವೈದ್ಯರ ಸೂಕ್ತ ಚಿಕಿತ್ಸೆಯಿಂದ ಮಹಿಳೆಗೆ ಸುಖಪ್ರಸವವಾಗಿದ್ದು, ಸುಂದರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಪ್ರಸ್ತುತ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

ತುರ್ತು ಸಂದರ್ಭದಲ್ಲಿ ಕರ್ತವ್ಯದ ಜತೆಗೆ ಅಪಾರ ಮಾನವೀಯತೆ ಮೆರೆದು ಇಬ್ಬರ ಜೀವ ಉಳಿಸಿದ ಚಾಲಕ ರಾಕೇಶ್ ಹಾಗೂ ನಿರ್ವಾಹಕ ಕಿಶನ್ ಅವರನ್ನು ಕೊಡಗು ಜಿಲ್ಲಾ ಖಾಸಗಿ ಬಸ್ ಕಾರ್ಮಿಕರ ಮತ್ತು ಮಾಲೀಕರ ಸಂಘದ ವತಿಯಿಂದ ವಿರಾಜಪೇಟೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಜೂಡಿ ವಾಜ್, ಪ್ರಧಾನ ಕಾರ್ಯದರ್ಶಿ ದಿನೇಶ್ ನಾಯರ್, ನಿರ್ದೇಶಕರಾದ ಮಹೇಶ್, ಅಜಯ್ ಹಾಗೂ ಕೋಶಾಧಿಕಾರಿ ವಿನಂತು ಉಪಸ್ಥಿತರಿದ್ದು ಸಿಬ್ಬಂದಿಯ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

✍️ ರೆಜಿತ ಕಾರ್ಯಪ್ಪ

coorg buzz
WhatsApp Image 2026-08-11 at 16.11.22