ರಾಮಾಯಣ ಪ್ರೀತಿ, ಮಾನವೀಯತೆ ಹಾಗೂ ಸಮರಸತೆಯ ಸಂದೇಶ ಸಾರುವ ಮಹಾಕಾವ್ಯ: ಪ್ರೊ. ನಂಜುಂಡಸ್ವಾಮಿ

Valmiki Jayanti

Share this post :

ಮಹರ್ಷಿ ವಾಲ್ಮೀಕಿಯವರು ರಚಿಸಿದ ‘ರಾಮಾಯಣ’ ಕೇವಲ ಒಂದು ಧಾರ್ಮಿಕ ಗ್ರಂಥವಲ್ಲ; ಅದು ಮಾನವ ಸಮಾಜಕ್ಕೆ ಪ್ರೀತಿ, ಕರುಣೆ, ಸೌಹಾರ್ದತೆ ಮತ್ತು ಸಮರಸತೆಯ ಅತ್ಯುನ್ನತ ಸಂದೇಶ ನೀಡುವ ಶ್ರೇಷ್ಠ ಮಹಾಕಾವ್ಯವಾಗಿದೆ ಎಂದು ಪಿರಿಯಾಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನಂಜುಂಡಸ್ವಾಮಿ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಗರದ ಗಾಂಧಿ ಭವನದಲ್ಲಿ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.

ವಾಲ್ಮೀಕಿಯವರು ಚಿತ್ರಿಸಿದ ರಾಮರಾಜ್ಯದ ಮೂಲ ಪರಿಕಲ್ಪನೆಯೇ ‘ಸಾಮರಸ್ಯ’ವಾಗಿದ್ದು, ಅಲ್ಲಿ ಯಾವುದೇ ರೀತಿಯ ಶೋಷಣೆ, ತಾರತಮ್ಯ ಅಥವಾ ಅನ್ಯಾಯಕ್ಕೆ ಆಸ್ಪದವಿರಲಿಲ್ಲ. ಎಲ್ಲರಿಗೂ ಸಮಾನ ಅವಕಾಶ ಮತ್ತು ನ್ಯಾಯ ದೊರೆಯುವ ಸಮಾಜವೇ ವಾಲ್ಮೀಕಿಯವರ ಕನಸಾಗಿತ್ತು. ಜಾತಿ, ಕುಲ ಅಥವಾ ಅಂತಸ್ತಿನ ಆಧಾರದ ಮೇಲೆ ತಾರತಮ್ಯ ಮಾಡದೆ ಪ್ರತಿಯೊಬ್ಬರ ನಡುವೆ ಸೌಹಾರ್ದತೆ ಇರಬೇಕು. ಶ್ರೇಷ್ಠತೆ ಎಂಬುದು ಹುಟ್ಟಿನಿಂದ ಬರುವುದಿಲ್ಲ, ವ್ಯಕ್ತಿಯ ಭಕ್ತಿ ಮತ್ತು ಗುಣದಿಂದ ನಿರ್ಧಾರವಾಗುತ್ತದೆ ಎಂಬುದನ್ನು ರಾಮಾಯಣದಲ್ಲಿ ತೋರಿಸಿಕೊಡಲಾಗಿದೆ. ಅಲ್ಲದೆ ಮಾನವರಷ್ಟೇ ಅಲ್ಲದೆ ಪ್ರಕೃತಿ ಮತ್ತು ಸಕಲ ಜೀವರಾಶಿಗಳೊಂದಿಗೆ ಮಾನವನು ಸಮರಸತೆಯಿಂದ ಬಾಳಬೇಕು ಎಂಬುದನ್ನು ವಾಲ್ಮೀಕಿಯವರು ತಮ್ಮ ಶ್ಲೋಕಗಳಲ್ಲಿ ವಿವರಿಸಿದ್ದಾರೆ. ಅವರು ಕೇವಲ ಮೊದಲ ಕಾವ್ಯ ರಚಿಸಿದ ‘ಆದಿಕವಿ’ ಮಾತ್ರವಲ್ಲ, ತದನಂತರ ಬಂದ ಸಾಹಿತಿಗಳಿಗೆ ದಾರಿದೀಪವಾದ ‘ಯುಗದಕವಿ’ ಎಂದು ಬಣ್ಣಿಸಿದರು.

ಇಂದಿನ ಸ್ಪರ್ಧಾತ್ಮಕ ಹಾಗೂ ತಂತ್ರಜ್ಞಾನ ಆಧಾರಿತ ಆಧುನಿಕ ಕಾಲಘಟ್ಟದಲ್ಲಿ ಮನುಷ್ಯ ಭೌತಿಕವಾಗಿ ಮುಂದುವರಿದಿದ್ದರೂ, ಮಾನವೀಯ ಮೌಲ್ಯಗಳು ಹಾಗೂ ನೈತಿಕತೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿವೆ. ಇಂತಹ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಸಾವಿರಾರು ವರ್ಷಗಳ ಹಿಂದೆ ರಚನೆಯಾದ ರಾಮಾಯಣ ಮಹಾಕಾವ್ಯವು ಇಂದಿನ ಯುವ ಪೀಳಿಗೆಗೆ ಕೈಪಿಡಿಯಂತೆ ಮಾರ್ಗದರ್ಶನ ನೀಡುತ್ತಿದೆ ಎಂದು ಪ್ರೊ. ನಂಜುಂಡಸ್ವಾಮಿ ತಿಳಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು, ಮಹಾನ್ ವ್ಯಕ್ತಿಗಳ ಕಾರ್ಯಕ್ರಮವನ್ನು ಒಂದು ದಿನದ ಸಮಾರಂಭಕ್ಕೆ ಸೀಮಿತಗೊಳಿಸದೆ, ಅವರ ಸತ್ಯ, ಧರ್ಮ ಮತ್ತು ನ್ಯಾಯದ ಸಂದೇಶವನ್ನು ಮೈಗೂಡಿಸಿಕೊಳ್ಳುವ ಮೂಲಕ ಆರೋಗ್ಯಕರ ಸಮಾಜ ನಿರ್ಮಿಸಬೇಕು ಎಂದು ಕರೆ ನೀಡಿದರು.

ಸಮುದಾಯದ ಪ್ರಮುಖರಾದ ಕುಡಿಯರ ಮುತ್ತಪ್ಪ ಮಾತನಾಡಿ, ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತರಾಗಿ ಸಮಾಜದಲ್ಲಿ ನಡೆಯುವ ಅನ್ಯಾಯ ಹಾಗೂ ಬಾಲಕಾರ್ಮಿಕ ಪದ್ಧತಿಯ ವಿರುದ್ಧ ಧ್ವನಿ ಎತ್ತಬೇಕು ಎಂದು ಸಲಹೆ ನೀಡಿದರು. ಜಿಲ್ಲಾಡಳಿತದಿಂದ ಬುಡಕಟ್ಟು ಸಮುದಾಯದ ನಾಯಕರ ಪುಸ್ತಕಗಳನ್ನು ಹೊರತರುವಂತೆ ಮನವಿ ಮಾಡಿದರು. ಮತ್ತೊಬ್ಬ ಪ್ರಮುಖರಾದ ಗಂಗಾಧರ್ ಮಾತನಾಡಿ, ಪ್ರತಿಯೊಬ್ಬರೂ ಸಮಾಜಕ್ಕೆ ಮತ್ತು ಪರಿಸರಕ್ಕೆ ಒಳ್ಳೆಯ ಸಂದೇಶ ನೀಡುವ ವ್ಯಕ್ತಿಗಳಾಗಿ ಬಾಳಬೇಕು ಎಂದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಚ್.ಎಲ್.ದಿವಾಕರ್ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳನ್ನು ಪಾಲಿಸಬೇಕು ಹಾಗೂ ಶಿಕ್ಷಣದ ಮೂಲಕ ಅಸಮಾನತೆಯನ್ನು ತೊಡೆದುಹಾಕಬೇಕು ಎಂದು ಕರೆ ನೀಡಿದರಲ್ಲದೆ, ಡಿಎಸ್ಎಸ್ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು. ನಗರಸಭೆ ಅಧ್ಯಕ್ಷೆ ಪಿ.ಕಲಾವತಿ ಅವರು ನಗರ ನೈರ್ಮಲ್ಯ ಕಾಪಾಡುವ ಪೌರಕಾರ್ಮಿಕರ ಸೇವೆಯನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಪೌರಕಾರ್ಮಿಕರು, ಮಾಜಿ ಸೈನಿಕರು, ನಿವೃತ್ತ ಉಪನ್ಯಾಸಕರು, ಸಮುದಾಯದ ಮುಖಂಡರು ಹಾಗೂ SSLC, PUC ಮತ್ತು NEET ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಪ್ರಮುಖರಾದ ಮುತ್ತಮ್ಮ, ಪಿ.ಎಸ್.ಮುತ್ತ, ಗಪ್ಪು ಸೇರಿದಂತೆ ಹಲವು ಗಣ್ಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ತಿತಿಮತಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಯೋಜನಾ ಸಮನ್ವಯಾಧಿಕಾರಿ ಎಚ್.ಸಿ.ಭಾಗೀರಥಿ ಸ್ವಾಗತಿಸಿ, ಬಾಲಕೃಷ್ಣ ರೈ ವಂದಿಸಿದರು. ಪವನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

 

coorg buzz
WhatsApp Image 2026-08-11 at 16.11.22