ಬೇಟೋಳಿಯಲ್ಲಿ ವೈಭವದ ಗೌರಿ-ಗಣೇಶ ವಿಸರ್ಜನೋತ್ಸವ

Gauri-Ganesha

Share this post :

ವಿರಾಜಪೇಟೆ: ಸಮೀಪದ ಬೇಟೋಳಿ ಗ್ರಾಮದ ರಾಮನಗರದಲ್ಲಿರುವ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 44ನೇ ವರ್ಷದ ಗೌರಿ ಗಣೇಶ ಮೂರ್ತಿಗಳ ವಿಸರ್ಜನೋತ್ಸವವು ಶ್ರದ್ಧಾ ಭಕ್ತಿ ಹಾಗೂ ವಿಜೃಂಭಣೆಯಿಂದ ನೆರವೇರಿತು.

ಕಳೆದ ಏಳು ದಿನಗಳಿಂದ ಶ್ರೀ ಗಣಪತಿ ಮತ್ತು ಗೌರಿ ದೇವರುಗಳ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗಿತ್ತು. ವಿಸರ್ಜನೋತ್ಸವದಂದು ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಪ್ರಧಾನ ಅರ್ಚಕರಾದ ವಿಶ್ವನಾಥ್ ಭಟ್ ಹಾಗೂ ವಾಮನಮೂರ್ತಿ ಭಟ್ ಅವರ ನೇತೃತ್ವದಲ್ಲಿ ಶ್ರೀ ಮಹಾಗಣಪತಿ, ಶ್ರೀ ಅಯ್ಯಪ್ಪ ಸ್ವಾಮಿ, ಶ್ರೀ ವನದುರ್ಗಾ ಹಾಗೂ ಶ್ರೀ ನಾಗ ದೇವರಿಗೆ ವಿಶೇಷ ಪೂಜೆ ನೆರವೇರಿತು. ಮಹಾಮಂಗಳಾರತಿಯ ನಂತರ ಭಕ್ತರಿಗೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಜರುಗಿತು.

ಶೋಭಾಯಾತ್ರೆಗೆ ಮೆರುಗು ತಂದ ಕುಣಿತ ಭಜನೆ, ಚಂಡೆ ವಾದನ:
ಮಧ್ಯಾಹ್ನದ ಬಳಿಕ ವಿದ್ಯುತ್ ದೀಪ ಹಾಗೂ ಹೂವುಗಳಿಂದ ಸುಂದರವಾಗಿ ಅಲಂಕರಿಸಿದ್ದ ತೇರಿನ ಮಂಟಪದಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ದೇವಸ್ಥಾನದ ಆವರಣದಿಂದ ಶೋಭಾಯಾತ್ರೆಯನ್ನು ಆರಂಭಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಕುಣಿತ ಭಜನಾ ತಂಡ, ರಾಮನಗರದ ಮಕ್ಕಳ ಕುಣಿತ ಭಜನಾ ತಂಡ, ರುದ್ರಂ ಚಂಡೆ ಬಳಗದ ಚಂಡೆ ವಾದನ, ಬೊಂಬೆ ಕುಣಿತ ಹಾಗೂ ದೇವಸ್ಥಾನದ ಮಹಿಳಾ ಮಂಡಳಿಯ ಭಜನಾ ಸೇವೆಯು ಮೆರವಣಿಗೆಗೆ ವಿಶೇಷ ಆಕರ್ಷಣೆ ನೀಡಿದವು.

ದೇವಸ್ಥಾನದಿಂದ ಆರಂಭಗೊಂಡ ಶೋಭಾಯಾತ್ರೆಯು ಬೇಟೋಳಿ ಮೂಲೆ ಅಂಗಡಿಯ ಹೊಳೆಯವರೆಗೂ ಸಾಗಿತು. ಬಳಿಕ ಅರ್ಚಕರು ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿ ಮೂರ್ತಿಗಳನ್ನು ಹೊಳೆಯಲ್ಲಿ ವಿಸರ್ಜಿಸಿದರು.

ಈ ವೈಭವದ ಉತ್ಸವದಲ್ಲಿ ಬೇಟೋಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಅಪಾರ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಸಂತೋಷ್ ಬಿ.ಪಿ., ಉಪಾಧ್ಯಕ್ಷರಾದ ನಂದ ಬಿ.ಜಿ. ಹಾಗೂ ಶೈಲೇಶ್ ಬಿ.ಎಂ., ಕಾರ್ಯದರ್ಶಿ ಬಿ.ಎನ್. ಶಾಂತಿಭೂಷಣ್, ಖಜಾಂಚಿ ಜ್ಯೋತಿ, ಆಡಳಿತ ಮಂಡಳಿಯ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

 

coorg buzz
WhatsApp Image 2026-08-11 at 16.11.22