ಚೇರಳ ಗೌಡ ಸಮಾಜದ ನೂತನ ಸಮುದಾಯ ಭವನ ಲೋಕಾರ್ಪಣೆ

Share this post :

ಕುಶಾಲನಗರ : ಚೆಟ್ಟಳ್ಳಿಯ ಚೇರಳ ಗೌಡ ಸಮಾಜದ ನೂತನ ಸಮುದಾಯ ಭವನದ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆಯಿತು. ನೂತನ ಭವನವನ್ನು ವಿಧಾನಸಭೆ ಮಾಜಿ ಅಧ್ಯಕ್ಷ ಕೊಂಬಾರನ ಜಿ.ಬೋಪಯ್ಯ ಲೋಕಾರ್ಪಣೆಗೊಳಿಸಿದರು.
ಗೌಡ ಬಾಂಧವರು ಸಾಂಪ್ರಾದಾಯಿಕ ಉಡುಪಿನಲ್ಲಿ ಕಂಗೊಳಿಸಿದರು. ಜಿಲ್ಲೆಯ ವಿವಿಧೆಡೆಗಳಿಂದ ಗೌಡ ಸಮಾಜ, ಸಂಘಟನೆ, ಯುವ ವೇದಿಕೆ ಹಾಗೂ ಮಹಿಳಾ ಒಕ್ಕೂಟದ ಪ್ರತಿನಿಧಿಗಳು ಆಗಮಿಸಿದ್ದರು. ಸಮುದಾಯ ಭವನಕ್ಕೆ ಧನಸಹಾಯ ನೀಡಿದವರು ಹಾಗೂ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು.
ಶಾಸಕ ಡಾ.ಮಂತರ್ ಗೌಡ, ಮಾತನಾಡಿ ಗೌಡ ಸಮುದಾಯ ಎಲ್ಲಾ ಕ್ಷೇತ್ರಗಳಿಗೂ ತನ್ನದೇ ಆದ ಕೊಡುಗೆ ನೀಡಿದೆ. ಸಮುದಾಯ ಭವನ ನಿರ್ಮಾಣ ಮಾಡುವುದರ ಮೂಲಕ ಈ ಗ್ರಾಮದ ಗೌಡ ಜನಾಂಗ ಭಾಂದವರ ಮೂಲ ಉದ್ದೇಶ ಈಡೇರಿದಂತಾಗಿದ್ದು, ಗೌಡರ ಅಸ್ತಿತ್ವ ಕಾಣುವಂತಾಗಿದೆ. ಈ ನೂತನ ಸಮುದಾಯ ಭವನ ಇಲ್ಲಿನ ಎಲ್ಲ ಜನಾಂಗದವರಿಗೂ ಸದುಪಯೋಗ ಆಗುವಂತಾಗಲಿ ಎಂದು ಆಶಿಸಿದರು.
ಕೆ.ಜಿ. ಬೋಪಯ್ಯ ಮಾತನಾಡಿ, 17 ವರ್ಷಗಳ ಸತತ ಪ್ರಯತ್ನದ ನಂತರ ನೂತನ ಭವ್ಯವಾದ ಸಮುದಾಯ ಭವನ ನಿರ್ಮಾಣಗೊಂಡಿದೆ. ಸಮಾಜ, ಸಂಘಟನೆಗಳು ಇತರ ಜಾತಿಗಳೊಂದಿಗೆ ಸಂಘರ್ಷಕ್ಕಾಗಿಯೋ, ಸವಾಲಿಗಾಗಿಯೋ ಅಲ್ಲ. ಬದಲು ತಮ್ಮ ಆಚಾರ ವಿಚಾರಗಳನ್ನು ಉಳಿಸುತ್ತಾ ಸಮಾಜದಲ್ಲಿ ಸೌಹಾರ್ದತೆಯಿಂದ ಕೂಡಿ ಬಾಳಿ ಬದುಕುವುದಕ್ಕಾಗಿ. ತಮ್ಮ ಆಚಾರ, ವಿಚಾರ ಪದ್ದತಿ ಪರಂಪರೆಯನ್ನು ಉಳಿಸಿ ಬೆಳೆಸುವುದಕ್ಕಾಗಿ ಎಂದರು.
ಮಾಜಿ ಸಚಿವ ಮಂಡೇಪಂಡ ಪಿ. ಅಪ್ಪಚ್ಚುರಂಜನ್ ಮಾತನಾಡಿ, ನಾವೆಲ್ಲರೂ ಅನ್ಯೋನ್ಯತೆಯಿಂದ ಬಾಳಬೇಕು. ಗೌಡ ಮತ್ತು ಕೊಡವ ಸಮುದಾಯದ ನಡುವೆ ಉತ್ತಮ ಬಾಂಧವ್ಯವಿದ್ದು, ನಾವೆಲ್ಲರೂ ಒಗ್ಗಟ್ಟಾಗಿ ಬದುಕಬೇಕು ಎಂದು ಹೇಳಿದರು.
ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ, ಉಪಾಧ್ಯಕ್ಷ ಡಾ.ತೇನನ ರಾಜೇಶ್, ಮಾಜಿ ಅಧ್ಯಕ್ಷ ಪೇರಿಯನ ಜಯಾನಂದ, ಜಿ.ಪಂ ಮಾಜಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿದರು. ಚೇರಳ ಗೌಡ ಸಮಾಜದ ಅಧ್ಯಕ್ಷ ಅಯ್ಯಂಡ್ರ ರಾಘವಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಕೊಂಬಾರನ ಕುಂತಿ ಬೋಪಯ್ಯ, ಕಾಫಿ ಬೆಳೆಗಾರ ಮರದಾಳು ಬಸಪ್ಪ, ಉಪಾಧ್ಯಕ್ಷ ಹೊಸಮನೆ ಪೂವಯ್ಯ ಉಪಸ್ಥಿತರಿದ್ದರು. ಖಜಾಂಚಿ ಪೇರಿಯನ ಉದಯ ಹಾಗೂ ಕಾರ್ಯದರ್ಶಿ ಆಜೀರ ಧನಂಜಯ ಕಾರ್ಯಕ್ರಮ ನಿರ್ವಹಿಸಿದರು. ಪೇರಿಯನ ಪ್ರಣವಿ, ಪೇರಿಯನ ಜೀವಿತ, ಪೇರಿಯನ ಖುಷಿ ಪ್ರಾರ್ಥಿಸಿದರು.

coorg buzz
coorg buzz