ವೀರಾಜಪೇಟೆ(Virajpet) : ವ್ಯಕ್ತಿತ್ವ ವಿಕಸನದೊಂದಿಗೆ ಸಮಾಜದಲ್ಲಿ ವಿಶೇಷವಾದ ಸ್ಥಾನಮಾನ ಪಡೆಯುವುದರೊಂದಿಗೆ ಸಹಕಾರ ಮನೋಭಾವನೆ ಬೆಳೆಸಲು ಎನ್.ಎಸ್.ಎಸ್(NSS) ಸಹಕಾರಿ ಎಂದು ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಕೊಡಗು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ನೋಡಲ್ ಅಧಿಕಾರಿ ಡಾ.ಕೆ.ಸಿ. ದಯಾನಂದ ಅಭಿಪ್ರಾಯಪಟ್ಟರು.
ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಮಂಗಳವಾರ ನಡೆದ ಎನ್.ಎಸ್.ಎಸ್ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಸಮಾಜ ಸೇವೆಯ ಮನೋಭಾವವನ್ನು ಬೆಳೆಸುವುದರೊಂದಿಗೆ ಸಮಸ್ಯೆ ಬಗೆಹರಿಸಲು ಹೇಗೆ ಒಗ್ಗೂಡಬೇಕು ಹಾಗೂ ಸಮಾಜದ ವಿವಿಧ ಸ್ತರಗಳ ಬಗ್ಗೆ ಗಮನಹರಿಸುವಂತೆ ಮಾಡಲು ವೇದಿಕೆಯಾಗಿದೆ. ಸಮಾಜದ ಅಭಿವೃದ್ಧಿಗೆ ನಿಸ್ವಾರ್ಥ ಸೇವೆಯನ್ನು ಸಲ್ಲಿಸುವುದರೊಂದಿಗೆ ತಮ್ಮಲ್ಲಿರುವ ಪ್ರತಿಭೆ ಅನಾವರಣಕ್ಕೆ ಎನ್ಎಸ್ಎಸ್ ಸಹಕಾರಿಯಾಗಿದೆ ಎಂದರು.
ಇದು ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ರಚನಾತ್ಮಕ ಮತ್ತು ಕ್ರಿಯಾಶೀಲವಾಗಿ ಎಲ್ಲಾ ವಿಚಾರಗಳಲ್ಲೂ ಭಾಗವಹಿಸುವಂತೆ ಮಾಡುತ್ತದೆ. ಸ್ವಯಂಸೇವಕರಲ್ಲಿ ನಾಯಕತ್ವ ಗುಣ, ಸರಳತೆ, ಶಿಸ್ತು, ಸಂಯಮ, ಪ್ರಾಮಾಣಿಕತೆ, ಸಹನೆ, ತಾಳ್ಮೆಯ ಗುಣವನ್ನು ಮೈಗೂಡಿಸಿಕೊಂಡು ಡೆಡಿಕೇಶನ್, ಡಿಟರ್ಮಿನೇಷನ್, ಡಿಸಿಪ್ಲಿನ್ ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಬೆನೆಡಿಕ್ಟ್ ಆರ್. ಸಲ್ಡನಾ, ಎನ್ಎಸ್ಎಸ್‌ನಲ್ಲಿ ಎಲ್ಲವೂ ಹಿತಕರ, ಎಲ್ಲವೂ ಪ್ರಯೋಜನಕರವಾಗಿರುತ್ತದೆ. ಇದು ನಮ್ಮಲ್ಲಿರುವ ಸ್ವಾರ್ಥವನ್ನು ಬಿಟ್ಟು ನಿಸ್ವಾರ್ಥ ಸೇವೆಗೆ ಸಿದ್ಧರಾಗುವಂತೆ ಮಾಡುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಸ್ವಯಂಸೇವಕರಾಗಿ ನಿರಂತರ ಸೇವೆ ಮಾಡುವುದರಿಂದ ಸಮಾಜ ಸೇವೆಯಲ್ಲಿ ತೊಡಗುವಂತೆ ಮಾಡುವ ಮನೋಭಾವವನ್ನು ನಮ್ಮಲ್ಲಿ ಸ್ಥಿರವಾಗಿ ನಿಲ್ಲುವಂತೆ ಮಾಡುತ್ತದೆ ಹಾಗೂ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಉತ್ತಮ ಸಮಾಜ ನಿರ್ಮಾಣಕ್ಕೆ ನಮ್ಮನ್ನು ಪ್ರೇರೇಪಿಸುತ್ತದೆ ಎಂದರು.
ವೇದಿಕೆಯಲ್ಲಿ ಕಾಲೇಜಿನ ಐಕ್ಯೂಎಸಿ ಹಾಗೂ ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿ ಸಂಚಾಲಕಿ ಪ್ರಿಯ ಮುದ್ದಪ್ಪ, ಎನ್ಎಸ್ಎಸ್ ಯೋಜನಾಧಿಕಾರಿ ಸುನಿಲ್ ಕುಮಾರ್, ಎನ್‌ಎಸ್‌ಎಸ್ ನಾಯಕ ರಿಶಿ ಸೋಮಣ್ಣ ಉಪಸ್ಥಿತರಿದ್ದರು.



