ಮಡಿಕೇರಿ : ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ ದುರಸ್ತಿ ವಿಚಾರದಲ್ಲಿ ನಿರಂತರ ಕಾಮಗಾರಿ ಆಗುತ್ತಿದೆ. ಅನೇಕ ಕಡೆ ಉತ್ತಮ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ವಿಪಕ್ಷಗಳು ಹಾಗೂ ಕೆಲವವರು ಕೈಯ್ಯಲ್ಲಿ ಮೊಬೈಲ್ ಇದೆ ಎಂಬ ಕಾರಣಕ್ಕೆ ಸಣ್ಣ ಗುಂಡಿಗಳನ್ನು ದೊಡ್ಡದಾಗಿ ವೈಭವೀಕರಿಸಿ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವೀರಾಜಪೇಟೆ ವಿಧಾಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜಕೀಯ ವಿದ್ಯಮಾನಗಳು, ಅಭಿವೃದ್ಧಿ ಕಾರ್ಯ, ಕೊಡಗಿನ ಸಮಸ್ಯೆಗಳು, ಜನರಲ್ಲಿರುವ ಗೊಂದಲಗಳು ಹೀಗೆ ನಾನಾ ವಿಷಯಗಳ ಬಗ್ಗೆ ಸಂವಾದದಲ್ಲಿ ಬೆಳಕು ಚೆಲ್ಲಲಾಯಿತು.
ಸಚಿವ ಸ್ಥಾನದಿಂದ ವಂಚಿತಗೊಂಡ ಕುರಿತು ಪ್ರತಿಕ್ರಿಯಿಸಿದ ಪೊನ್ನಣ್ಣ ಅವರು, ಹಲವು ವರ್ಷಗಳ ಹಿಂದೆ ಕೊಡಗಿನ ಮೂವರು ಸಚಿವರಾಗಿದ್ದರು. ನಂತರ ದೀರ್ಘಾವಧಿಗೆ ಸಚಿವ ಭಾಗ್ಯ ಜಿಲ್ಲೆಗೆ ದೊರೆತ್ತಿಲ್ಲ ಇದರ ಹಿಂದೆ ರಾಜಕೀಯ ಲೆಕ್ಕಾಚಾರವೂ ಆಡಗಿದೆ. ಹಲವು ಕ್ಷೇತ್ರಗಳನ್ನೊಳಗಂಡ ಜಿಲ್ಲೆ, ಜಾತಿ ಪ್ರಾತಿನಿಧ್ಯ ಹೀಗೆ ನಾನಾ ವಿಷಯದಡಿ ಸಚಿವ ಸ್ಥಾನ ನಿರ್ಧಾರವಾಗುತ್ತದೆ. ಈ ನಡುವೆ ತನಗೆ ಮಂತ್ರಿ ಸ್ಥಾನ ಸಿಗುವ ವಿಶ್ವಾಸವಿತ್ತು. ಇದಕ್ಕಾಗಿ 2 ಶರ್ಟ್ ಗಳನ್ನು ಕೂಡ ಆಯ್ಕೆ ಮಾಡಿಟ್ಟುಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಸಚಿವ ಸ್ಥಾನ ಕೈತಪ್ಪಿದ ವಿಚಾರ ತಿಳಿದು ಬಂತು. ಆದರೆ, ಉಪಸಭಾಪತಿ ಸ್ಥಾನಕ್ಕೆ ಆಯ್ಕೆ ಮಾಡಿರುವುದು ಆಶ್ಚರ್ಯ ಮೂಡಿಸಿತು. ಇದೊಂದು ಸಂವಿಧಾನಾತ್ಮಕ, ಗೌರವನ್ವಿತ ಹಾಗೂ ದೊಡ್ಡ ಜವಾಬ್ದಾರಿ ಹೊಂದಿರುವ ಹುದ್ದೆಯಾಗಿದೆ. ಆದರೆ, ಈ ಹುದ್ದೆಯಲ್ಲಿದ್ದಾರೆ ಕೆಲವೊಂದು ಪರಿಮಿತಿಗೊಳಪಟ್ಟಿರಬೇಕಾಗುತ್ತದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ನನ್ನನ್ನು ಕಾನೂನು ಘಟಕದ ಅಧ್ಯಕ್ಷರನ್ನಾಗಿ ಮಾಡಿದ್ದರು. ನನ್ನನ್ನು ರಾಜಕೀಯವಾಗಿ ಬಳಸಿಕೊಳ್ಳಬೇಕೆಂಬುದು ಅವರ ಆಸೆಯಾಗಿತ್ತು. ಈ ಹಿನ್ನೆಲೆ ತನಗೆ ರಾಜಕೀಯ ಕಾರ್ಯದರ್ಶಿ ಹುದ್ದೆ ನೀಡಿದ್ದಾರೆ. ಸಚಿವ ಸ್ಥಾನಕ್ಕೆ ತನ್ನ ಹೆಸರನ್ಬು ಪರಿಗಣಿಸಿದ್ದೆ ಹೆಮ್ಮೆ ತಂದಿದೆ. ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.
ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರಕಾರ ಹಲವು ಬಾರಿ ತಿರಸ್ಕರಿಸಿದ್ದು, ಇದೀಗ ಮತ್ತೊಮ್ಮೆ ಕರಡು ಅಧಿಸೂಚನೆಯನ್ನು ತಿರಸ್ಕಾರ ಮಾಡಿದೆ. ಕೊಡಗಿನ ಗ್ರಾಮಗಳನ್ನು ಸೇರಿಸಿರುವುದು ಸಹಜವಾಗಿ ಆತಂಕ ಮೂಡಿಸುತ್ತದೆ. ಪರಿಸರ ಸಂರಕ್ಷಣೆಯೊಂದಿಗೆ ಜನರ ಹಿತಾಸಕ್ತಿ ಕಾಪಾಡುವುದು ಕೂಡ ಸರಕಾರದ ಕರ್ತವ್ಯವಾಗಿದೆ ಎಂದು ಪೊನ್ನಣ್ಣ ಅಭಿಮತ ವ್ಯಕ್ತಪಡಿಸಿದರು.
ಪರಿಸರ ಹಾಗೂ ಪಶ್ಚಿಮಘಟ್ಟ ಖಂಡಿತವಾಗಿಯೂ ಸಂರಕ್ಷಣೆಯಾಗಲೇ ಬೇಕು ಇದು ರಕ್ಷಣೆಯಾದರೆ ಮಾತ್ರ ದೇಶ ಉಳಿಯುತ್ತದೆ.ನೈಸರ್ಗಿಕ ಸಮತೋಲನ ಕಾಯ್ದುಕೊಳ್ಳಬಹುದಾಗಿದೆ. ಈ ವಿಷಯದಲ್ಲಿ ಪರ-ವಿರೋಧದೊಂದಿಗೆ ವಾಸ್ತವಾಂಶವನ್ನು ತಿಳಿದುಕೊಳ್ಳಬೇಕಾಗಿದೆ. ವರದಿ ಜಾರಿಯಿಂದ ಗ್ರಾಮೀಣ ಭಾಗದ ಜನಜೀವನ, ಕೃಷಿ ಚಟುವಟಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈಗಾಗಲೇ ಅರಣ್ಯ ಇಲಾಖೆಯಿಂದ ಅನೇಕ ಕಡಿವಾಣಗಳಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈ ಕರಡು ಅಧಿಸೂಚನೆಯನ್ನು ಒಪ್ಪಲಾಗುವುದಿಲ್ಲ. ರಾಜ್ಯ ಸರಕಾರ ಈಗಾಗಲೇ ಕರಡು ಅಧಿಸೂಚನೆ ಹೊರಡಿಸಿದ್ದು, ಅದರಲ್ಲಿ ಯಾವುದಕ್ಕೆ ನಿರ್ಬಂಧ ಹೇರಲಾಗುವುದು ಎಂಬುದನ್ನು ಸ್ಪಷ್ಟಪಡಿಸಲಿ. ಗಣಿಗಾರಿಕೆ, ಕ್ವಾರಿ, ಐಷಾರಾಮಿ ರೆಸಾರ್ಟ್ ಗಳನ್ನು ಬಂದ್ ಮಾಡಲ್ಲಿ ಅದಕ್ಕೆ ನಮ್ಮ ವಿರೋಧವಿಲ್ಲ ಎಂದು ಹೇಳಿದ ಅವರು, ಕೃಷಿ ಚಟುವಟಿಕೆ ಸಂಬಂಧ ಬಾವಿ ನಿರ್ಮಾಣ, ಮರ ಕಪಾತ್ ನಂತಹ ಚುವಟಿಕೆಗಳಿಗೆ ನಿರ್ಬಂಧ ಹೇರುವುದನ್ನು ಒಪ್ಪಲಾಗುವುದಿಲ್ಲ ಎಂದರು.
ವನ್ಯಜೀವಿ-ಮಾನವ ಸಂಘರ್ಷವನ್ನು ತಡೆಯುವ ಕೆಲಸವಾಗುತ್ತಿದ್ದು, ಮತ್ತಷ್ಟು ಪರಿಣಾಮಕಾರಿಯಾಗಿ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಆ. 28ಕ್ಕೆ ಅರಣ್ಯ ಸಚಿವರೇ ಜಿಲ್ಲೆಗೆ ಆಗಮಿಸಲಿದ್ದು, ಜನರು ಹಾಗೂ ಬಾಧಿತರೊಂದಿಗೆ ಸಮಾಲೋಚಿಸಲು ಮುಕ್ತ ಅವಕಾಶ ಕಲ್ಪಿಸಲಾಗುವುದು. ಸಭೆ ನಡೆಸಿ ಪರಿಹಾರದ ಬಗ್ಗೆ ಚರ್ಚಿಸಲಾಗುವುದು. ಈಗಾಗಲೇ ಕಾಡಾನೆ ಕಾರ್ಯಾಚರಣೆ ಕೈಗೊಂಡು 2 ಆನೆಗಳನ್ನು ಸೆರೆಹಿಡಿಯಲಾಗಿದೆ. ಆದರೆ, ಮತ್ತೇ ಅದನ್ನು ಕಾಡಿಗೆ ಬಿಟ್ಟರೆ ಮರಳಿ ತೋಟಗಳಿಗೆ ಲಗ್ಗೆಯಿಡುತ್ತವೆ. ಈ ಹಿನ್ನೆಲೆ ಕಲವೊಂದು ವ್ಯವಸ್ಥಿತ ಕ್ರಮಗಳ ಅಗತ್ಯವಿದೆ ಎಂದು ಪೊನ್ನಣ್ಣ ಅಭಿಪ್ರಾಯಿಸಿದರು.
ಕೊಡಗಿನಲ್ಲಿ ದುಬಾರೆ ಮತ್ತು ಮತ್ತಿಗೋಡಿನಲ್ಲಿ ಮಾತ್ರ ಸಾಕಾನೆ ಶಿಬಿರಗಳಿದ್ದು, ಸೆರೆಯಾದ ಆನೆಯನ್ನು ದುಬಾರೆ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲಿರುವ ಕ್ರಾಲ್ ಗಳ ಸಂಖ್ಯೆ ಹೆಚ್ಚಾಗಬೇಕು. ವ್ಯವಸ್ಥೆಗಳನ್ನು ಬಲಪಡಿಸಬೇಕಾಗಿದೆ. ಅಲ್ಲದೆ ಈ ಹಿಂದಿನ ಅರಣ್ಯ ಸಚಿವರು ಕಾಡಾನೆಯನ್ನು ಸಾಫ್ಟ್ ಲಾಂಚ್ ಮಾಡುವ ಸಂಬಂಧ ಯೋಜನೆ ರೂಪಿಸಿದ್ದರು. ಅದು ಲಾಭದಾಯಕವಾಗಿದ್ದರೆ ಯೋಜನೆ ಅನುಷ್ಠಾನಕ್ಕೂ ಪ್ರಯತ್ನಿಸಲಾಗುವುದು. ರೈಲ್ವೆ ಬ್ಯಾರಿಕೇಡ್, ಕಂದಕ, ಸೋಲಾರ್ ಬೇಲಿ ಸೇರಿದಂತೆ ಹಂತಹಂತವಾಗಿ ಕಾರ್ಯಕ್ರಮ ಹಮ್ಮಿಕೊಂಡು ಕಾಡಾನೆ ಹಾವಳಿ ನಿಯಂತ್ರಣಕ್ಕೆ ಪ್ರಯತ್ನಿಸಲಾಗುತ್ತಿದೆ. ಕಾಡಾನೆ ಕಡಿಮೆ ಇರುವ ರಾಜ್ಯಗಳಿಗೂ ಅನೆಗಳನ್ನು ಹಸ್ತಾಂತರಿಸಬಹುದಾಗಿದೆ ಎಂದ ಅವರು, ಉಸ್ತುವಾರಿ ಸಚಿವರ ಮೂಲಕ ಮಾಜಿ ಶಾಸಕರಿಗೆ ಸಭೆಗೆ ಆಹ್ವಾನ ನೀಡಲಾಗುವುದು ಎಂದರು.
ಪ್ರಾಜೆಕ್ಟ್ ಎಲಿಫೆಂಟ್ ಇದ್ದು, ಅದರ ಮೂಲಕ ಒಂದು ರೂಪಾಯಿ ಅನುದಾನವೂ ಬಂದಿಲ್ಲ. ಇಂತಹ ವಿಚಾರದಲ್ಲಿ ಪಕ್ಷಾತೀತವಾಗಿ ಕೈಜೋಡಿಸಿ ಪರಿಹಾರೋಪಾಯಕ್ಕೆ ಬೆಂಬಲ ನೀಡಬೇಕು. ಪ್ರತಿಭಟನೆ ಮಾಡುವ ಬದಲು ಕೇಂದ್ರ ಸಚಿವರನ್ನು ಭೇಟಿಯಾಗಿ ಸಮಸ್ಯೆ ಪರಿಹಾರಕ್ಕೆ ವಿಪಕ್ಷ ಬಿಜೆಪಿ ಪ್ರಯತ್ನಿಸಬೇಕೆಂದರು.
ಕೊಡಗಿನ ರಸ್ತೆ ಮೊದಲಿಗಿಂತ ಸುಧಾರಿಸಿದ್ದು, ಕೆಲವೊಂದು ರಸ್ತೆಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ ಎಂದು ಪೊನ್ನಣ್ಣ ಮಾಹಿತಿ ನೀಡಿದರು.
ಭಾಗಮಂಡಲ ರಸ್ತೆ ಉತ್ತಮವಾಗಿ ನಿರ್ಮಾಣವಾಗಿದ್ದು, ವೀರಾಜಪೇಟೆ-ಮಡಿಕೇರಿ ಹಾಗೂ ನಾಪೋಕ್ಲು ರಸ್ತೆ ದುರಸ್ತಿಗೆ ಟೆಂಡರ್ ಆಗಿದೆ. ವೀರಾಜಪೇಟೆ ರಸ್ತೆ ನಿರ್ಮಾಣಕ್ಕೆ ರೂ. 40 ಕೋಟಿ ಅನುದಾನವೂ ಬಿಡುಗಡೆಯಾಗಿದೆ. ಗ್ರಾಮೀಣ ರಸ್ತೆಗಳು ದುರಸ್ತಿಯಾಗುತ್ತಿದ್ದು, ರಾಜಕೀಯ ಪ್ರಚಾರಕ್ಕಾಗಿ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಎಲ್ಲಾ ರಸ್ತೆಯೂ ಸರಿಯಾಗಿದೆ ಎಂದು ಹೇಳಲಾಗುವುದಿಲ್ಲ. ಆದರೆ, 3 ವರ್ಷಗಳಲ್ಲಿ ಗರಿಷ್ಠ ಪ್ರಮಾಣದ ಕೆಲಸವಾಗಿದೆ ಎಂದರು.
ವೀರಾಜಪೇಟೆ ಆಸ್ಪತ್ರೆ ಮೇಲ್ದರ್ಜೆಗೆ ಅನುಮೋದನೆಯಾಗಿದೆ. ವಿದ್ಯುತ್ ಜಾಲ ಬಲವರ್ಧನೆಗೊಳಿಸಲಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ಪ್ರಯತ್ನವನ್ನು ಪ್ರಮಾಣಿಕವಾಗಿ ಮಾಡಲಾಗುವುದು ಎಂದು ಪೊನ್ನಣ್ಣ ಹೇಳಿದರು.
ಇದೇ ಸಂದರ್ಭ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡ ಪೊನ್ನಣ್ಣ ಅವರನ್ನು ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ, ಪ್ರಧಾನ ಕಾರ್ಯದರ್ಶಿ ಹೆಚ್.ಜೆ. ರಾಕೇಶ್ ಹಾಜರಿದ್ದರು.
ರಾಕೇಶ್ ಸ್ವಾಗತಿಸಿ, ಖಜಾಂಚಿ ಸುನಿಲ್ ಪೊನ್ನೇಟಿ ವಂದಿಸಿದರು.



