ಮಡಿಕೇರಿ : ತಾಲೂಕಿನ ಕತ್ತಲೆಕಾಡು ಗ್ರಾಮದಲ್ಲಿ ವನ್ಯಪ್ರಾಣಿ ದಾಳಿಗೆ ಜಾನುವಾರು ಬಲಿಯಾಗಿದ್ದು, ಹುಲಿ ದಾಳಿಯಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಗ್ರಾಮದ ಆನಂದ ಎಂಬವರ ಎತ್ತು ನಾಲ್ಕು ದಿನದಿಂದ ಕಾಣೆಯಾಗಿತ್ತು. ಹುಡುಕಾಟ ನಡೆಸಿದಾಗ ಬ್ರೂಕ್ ವ್ಯೂ ಎಸ್ಟೇಟ್‌ನಲ್ಲಿ ಭಾನುವಾರ ಸಂಜೆ ಕಳೇಬರ ಪತ್ತೆಯಾಗಿದೆ. ಈ ಬಗ್ಗೆ ಸ್ಥಳೀತಯರಾದ ನಾಸರ್ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಸೋಮವಾರ ಅರಣ್ಯ ಇಲಾಖೆ ಸಿಬ್ಬಂದಿ, ಪಶು ವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ಪಕ್ಕದಲ್ಲೇ ಕಾಡು ಹಂದಿಯ ಕಳೇಬರ ಕೂಡಾ ಕಂಡುಬಂದಿದೆ.
ಮೇಲ್ನೋಟಕ್ಕೆ ಹುಲಿ ದಾಳಿ ಮಾಡಿರುವ ರೀತಿ ಕಂಡುಬರುತ್ತಿದೆ. ಯಾವ ಪ್ರಾಣಿಯ ದಾಳಿಯಿಂದ ಜಾನುವಾರು ಮೃತಪಟ್ಟಿದೆ ಎಂಬುದು ವೈದ್ಯರ ಪರೀಕ್ಷೆಯಿಂದ ಬಯಲಾಗಬೇಕಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಸಿಬ್ಬಂದಿ ತಿಳಿಸಿದ್ದಾರೆ.
ಘಟನೆ ನಡೆದಿರುವ ಪ್ರದೇಶದಲ್ಲಿ ಕ್ಯಾಮರಾ ಅಳವಡಿಸಲಾಗಿದ್ದು, ಹುಲಿಯ ಚಲನವಲನದ ಬಗ್ಗೆ ನಿಗಾ ವಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ತೋಟದಲ್ಲಿ ಪ್ರತಿನಿತ್ಯ ನೂರಾರು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಈ ಬೆಳವಣಿಗೆಯಿಂದ ಆತಂಕಗೊಂಡಿದ್ದಾರೆ. ಪಕ್ಕದಲ್ಲೇ ಜನವಸತಿ ಪ್ರದೇಶ ಕೂಡಾ ಇದೆ. ಕೆಲವು ತಿಂಗಳ ಹಿಂದೆ ಇಬ್ನಿವಳವಾಡಿ, ಕಡಗದಾಳು ವ್ಯಾಪ್ತಿಯಲ್ಲಿ ಹುಲಿಯ ಸಂಚಾರ ಕಂಡುಬಂದಿತ್ತು. ಅದೇ ಹುಲಿ ಕತ್ತಲೆಕಾಡು ಭಾಗಕ್ಕೆ ಬಂದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಅರಣ್ಯ ಇಲಾಖೆ ಎಚ್ಚೆತ್ತು ಹುಲಿ ಸೆರೆಗೆ ಮುಂದಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತುರ್ತು ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆಗೆ ಸೂಚಿಸುವುದಾಗಿ ಶಾಸಕ ಡಾ.ಮಂತರ್ ಗೌಡ ತಿಳಿಸಿದ್ದಾರೆ.



