ಬೆಂಗಳೂರು : ಕನ್ನಡ ಜಾನಪದ ಪರಿಷತ್ ವತಿಯಿಂದ ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ. ಜ಼ಮೀರ್ ಅಹಮದ್ ಅವರಿಗೆ ಕರ್ನಾಟಕ ಜಾನಪದ ಕಲೆ, ಸಾಹಿತ್ಯದ ಸಂರಕ್ಷಣೆಗಾಗಿ ಸಲ್ಲಿಸಿದ ಅಮೂಲ್ಯ ಸೇವೆಯನ್ನು ಗುರುತಿಸಿ ‘ನಾಡೋಜ ಕರೀಂ ಖಾನ್ ರಾಜ್ಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಪ್ರಥಮ ಕನ್ನಡ ಜಾನಪದ ಸಮ್ಮೇಳನದಲ್ಲಿ 2025ನೇ ಸಾಲಿನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕನ್ನಡ ಸಾಹಿತ್ಯ ವಿದ್ಯಾರ್ಥಿಯಾಗಿರುವ ಜಮೀರ್ ಅಹಮದ್, ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಬದುಕಿನುದ್ದಕ್ಕೂ ಮೈಗೂಡಿಸಿಕೊಂಡು ಸರ್ವ ಜನಾಂಗದ ಪ್ರೀತಿಗೆ ಪಾತ್ರರಾಗಿದ್ದಾರೆ. ಕನ್ನಡ ಉಪನ್ಯಾಸಕರಾಗಿ ಮತ್ತು ಪತ್ರಕರ್ತರಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಜೀವನದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಆರ್ಥಿಕವಾಗಿ ದುರ್ಬಲವಾಗಿರುವ ರೋಗಿಗಳಿಗೆ ಅದರಲ್ಲೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಸಾಮಾಜಿಕ ಜಾಲತಾಣದ ಮತ್ತು ಮಾಧ್ಯಮದ ಸಹಾಯದೊಂದಿಗೆ ಆರ್ಥಿಕ ಸಹಕಾರ ಕೊಡಿಸುವಂತಹ ಸಾಮಾಜಿಕ ಕಾಳಜಿಗೆ ತಮ್ಮ ಹೆಚ್ಚಿನ ಸಮಯವನ್ನು ಮೀಸಲಿಟ್ಟಿರುವುದು ಧರ್ಮಾತೀತ ಮಾನವತಾ ಪ್ರೀತಿಗೆ ಹಿಡಿದ ಕೈಗನ್ನಡಿಯಾಗಿದೆ.
ಇವರು ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರ ನಿರ್ದೇಶಕ ಎಂ.ಡಿ. ಹಾಷಂ ತುಂಬಿದ ಮನೆ ಮತ್ತು ದಿ. ಮೊಖ್ಬುಲ್ ದಂಪತಿಯ ಪುತ್ರ.
