ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ – ಹಲವು ಸಮಸ್ಯೆಗಳ ಬಗ್ಗೆ ಗಮನ ಸೆಳೆದ ಸದಸ್ಯರು..!

Share this post :

ಮಡಿಕೇರಿ : ಅನುಸೂಚಿತ ಮತ್ತು ಅನುಸೂಚಿತ ಪಂಗಡಗಳ(ದೌರ್ಜನ್ಯ ನಿಯಂತ್ರಣ) ನಿಯಮ ರೀತಿಯ ರಚಿಸಲಾಗಿರುವ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಎಚ್.ಎಸ್. ಮುತ್ತಪ್ಪ, ಹೊದ್ದೂರು, ಹೊದವಾಡ ಸೇರಿದಂತೆ ಕಾವೇರಿ ನದಿ ಪಾತ್ರದ ಪ್ರವಾಹ ಪೀಡಿತ ಪ್ರದೇಶದಲ್ಲಿ ಪರಿಶಿಷ್ಟರು ವಾಸ ಮಾಡುತ್ತಿದ್ದು, ಇವರಿಗೆ ಶಾಶ್ವತ ನೆಲೆ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಕುಟುಂಬಗಳಿಗೆ ನಿವೇಶನ ಕಲ್ಪಿಸುವುದರ ಜೊತೆಗೆ ಮನೆ ನಿರ್ಮಿಸಿಕೊಡುವಂತಾಗಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್, ಹೊದ್ದೂರು-ಹೊದವಾಡ ಸೇರಿದಂತೆ ಪ್ರವಾಹ ಪೀಡಿತ ಪ್ರದೇಶದಲ್ಲಿನ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲು ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಮತ್ತೊಬ್ಬ ಸದಸ್ಯ ಜೆ.ಎಲ್. ಜನಾರ್ಧನ ಮಾತನಾಡಿ ಗಂಗಾ ಕಲ್ಯಾಣ ಯೋಜನೆಯಡಿ ಹಲವು ಕೆಲಸಗಳು ಬಾಕಿ ಇದ್ದು, ಕೂಡಲೇ ಪೂರ್ಣಗೊಳಿಸಬೇಕಿದೆ. ಕೊಡ್ಲಿಪೇಟೆ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇಲ್ಲದೆ ಅಲ್ಲಿನ ಸಾರ್ವಜನಿಕರು ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಗಮನ ಸೆಳೆದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ವೈದ್ಯರ ಕೊರತೆ ಎಲ್ಲೆಡೆ ಇದ್ದು, ವೈದ್ಯರ ನಿಯೋಜನೆಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಕುಮಾರ್, ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ, ಸಮಿತಿ ಸದಸ್ಯರಾದ ಪರಮೇಶ್, ವಿಜಯಕುಮಾರ್, ಪುಟ್ಟಮ್ಮ, ಪಿ.ಪಿ.ಸುಕುಮಾರ್, ಜಾಯ್ಸ್ ಮೆನೇಜಸ್, ರಂಗಸ್ವಾಮಿ ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಬಿ.ಬಸಪ್ಪ, ತಹಶೀಲ್ದಾರರಾದ ಪ್ರವೀಣ್ ಕುಮಾರ್, ಕೃಷ್ಣಮೂರ್ತಿ, ಕಿರಣ್ ಗೌರಯ್ಯ, ತಾ.ಪಂ.ಇಒಗಳಾದ ಅಪ್ಪಣ್ಣ, ಪರಮೇಶ, ಪುರಸಭೆ ಮುಖ್ಯಾಧಿಕಾರಿಗಳಾದ ಗಿರೀಶ್, ನಾಚಪ್ಪ, ಸತೀಶ್ ಇತರರು ಇದ್ದರು.