ನವದೆಹಲಿ : ದೇಶದ ಸರ್ವೋಚ್ಛ ನ್ಯಾಯಾಲಯವು ತನ್ನ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಮಹತ್ತರವಾದ ಬದಲಾವಣೆ ಮಾಡಿದೆ. ಅದೇನೆಂದರೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕೆಲಸದ ಅವಧಿಯಲ್ಲಿನ ಮಾರ್ಪಾಡು.
ಎರಡನೇ ಮತ್ತು ನಾಲ್ಕನೇ ಶನಿವಾರ ಸರ್ಕಾರಿ ರಜೆ ಇದ್ದು, ಈವರೆಗೆ ಅದು ಸುಪ್ರೀ ಕೋರ್ಟ್ ಕಚೇರಿ ವ್ಯಾಪ್ತಿಗೂ ಅನ್ವಯವಾಗಿತ್ತು. ಆದರೆ ಈಗ ಆಗಿರುವ ಸುಪ್ರೀಂ ಕೋರ್ಟ್ ತಿದ್ದುಪಡಿ ನಿಯಮದ ಪ್ರಕಾರ ಈ ಎರಡು ದಿನಗಳನ್ನು ಕೆಲಸದ ವ್ಯಾಪ್ತಿಗೆ ತರಲಾಗಿದೆ. ಅಂದರೆ ಇನ್ನು ಮುಂದೆ ತಿಂಗಳ ಎರಡನೇ ಹಾಗೂ ನಾಲ್ಕನೇ ಶನಿವಾರ ಕೂಡಾ ಸರ್ವೋಚ್ಛ ನ್ಯಾಯಾಲಯದ ಕಚೇರಿಗಳು ಕಾರ್ಯನಿರ್ವಹಿಸಲಿದೆ.
ಶನಿವಾರದ ಕಾರ್ಯನಿರ್ವಹಣೆ ಅವಧಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 01 ಗಂಟೆವರೆಗೆ ಇರಲಿದೆ. ತುರ್ತು ಅರ್ಜಿಗಳಿದ್ದರೆ ಮಧ್ಯಾಹ್ನ 12 ಗಂಟೆ ಒಳಗೆ ಸ್ವೀಕರಿಸುವಂತೆ ನೂತನ ತಿದ್ದುಪಡಿಯಲ್ಲಿ ಉಲ್ಲೇಖಿಸಲಾಗಿದೆ.
ಈ ನಡುವೆ ಸಾರ್ವಜನಿಕ ವಲಯದಲ್ಲಿ ಬೇರೆ ಬೇರೆ ರೀತಿಯಲ್ಲಿ ಇದು ಚರ್ಚೆಯಾಗುತ್ತಿದ್ದು, ಸರ್ಕಾರದ ಎಲ್ಲಾ ಇಲಾಖೆಗಳಿಗೂ ಇದೇ ರೀತಿಯ ನಿಯಮ ಜಾರಿ ಮಾಡಬೇಕೆಂದೆಲ್ಲ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಕೆಲಸದ ಸಮಯದ ಅವಧಿಯನ್ನು ಕಡಿಮೆ ಮಾಡಿ, ವಾರದ ಎಲ್ಲಾ ದಿನವೂ ಕಚೇರಿಗಳು ಕಾರ್ಯನಿರ್ವಹಿಸುವಂತೆ ಮಾಡಿದರೆ ಅಧಿಕಾರಿ ಹಾಗೂ ಸಿಬ್ಬಂದಿಯ ಮೇಲಿನ ಒತ್ತಡ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕೆಂಬ ಅಭಿಪ್ರಾಯ ಕೇಳಿಬರುತ್ತಿದೆ. ಮುಂದೆ ಆಡಳಿತ ವ್ಯವಸ್ಥೆಯಲ್ಲೂ ಇಂಥ ಬದಲಾವಣೆ ಆಗುತ್ತಾ ಅನ್ನೋದು ಸದ್ಯಕ್ಕಿರುವ ಕುತೂಹಲ.