ಮಡಿಕೇರಿ, ಗೋಣಿಕೊಪ್ಪ ದಸರಾ: ಶಾಂತಿಯುತ ಆಚರಣೆಗೆ ಜಿಲ್ಲಾಡಳಿತ ಮನವಿ

kodagu police

Share this post :

ಮಡಿಕೇರಿ: ಕೊಡಗು ಜಿಲ್ಲೆಯ ಪ್ರಸಿದ್ಧ ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಮಹೋತ್ಸವವನ್ನು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ, ಅರ್ಥಪೂರ್ಣ ಹಾಗೂ ಶಾಂತಿಯುತವಾಗಿ ಆಚರಿಸಲು ಸಹಕರಿಸುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರು ಸಾರ್ವಜನಿಕರು ಹಾಗೂ ದಸರಾ ಸಮಿತಿಗಳಲ್ಲಿ ಮನವಿ ಮಾಡಿದ್ದಾರೆ.

ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ದಸರಾ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಕುರಿತು ದಸರಾ ಸಮಿತಿ ಪ್ರಮುಖರ ಜೊತೆ ನಡೆದ ಸಭೆಯಲ್ಲಿ ಈ ಸೂಚನೆಗಳನ್ನು ನೀಡಲಾಯಿತು. ದಸರಾ ಆಚರಣೆ ವೇಳೆ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಡಿಸಿ ಎಸ್.ಜೆ.ಸೋಮಶೇಖರ್ ತಿಳಿಸಿದರು.

ಸಭೆಯ ಪ್ರಮುಖ ನಿರ್ಧಾರಗಳು ಹಾಗೂ ನಿಯಮಗಳು:

ಸಿಸಿಟಿವಿ ಕಡ್ಡಾಯ: ಭದ್ರತಾ ದೃಷ್ಟಿಯಿಂದ ಮಡಿಕೇರಿಯಲ್ಲಿ 27 ಹಾಗೂ ಗೋಣಿಕೊಪ್ಪದಲ್ಲಿ 15 ಕಡೆಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಲು ಪೊಲೀಸ್ ಇಲಾಖೆ ಸೂಚಿಸಿದೆ.

ಮೂಲಸೌಕರ್ಯ ಹಾಗೂ ಭದ್ರತೆ: ವಾಹನ ನಿಲುಗಡೆ ಸ್ಥಳಗಳಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಮಾಡಬೇಕು. ಪ್ರವಾಸಿ ತಾಣಗಳಲ್ಲಿ ಡಿಎಫ್‍ಎಂಡಿ (ಮೆಟಲ್ ಡಿಟೆಕ್ಟರ್) ಅಳವಡಿಸಲಾಗುವುದು. ಚೆಕ್ ಪೋಸ್ಟ್‌ಗಳಲ್ಲಿ ಟೆಂಟ್ ಹಾಗೂ ಸಹಾಯವಾಣಿ ಕೇಂದ್ರಗಳನ್ನು ತೆರೆಯಲು ನಿರ್ಧರಿಸಲಾಗಿದೆ.

ಸಾರಿಗೆ ಮತ್ತು ವೈದ್ಯಕೀಯ ವ್ಯವಸ್ಥೆ: ಆರೋಗ್ಯ ಇಲಾಖೆಯಿಂದ ಹೆಚ್ಚಿನ ಆಂಬ್ಯುಲೆನ್ಸ್ ಹಾಗೂ ಕೆಎಸ್‍ಆರ್‍ಟಿಸಿಯಿಂದ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಲಾಗುವುದು.

ಪಾರ್ಕಿಂಗ್ ಮತ್ತು ಸಂಚಾರ ಬದಲಿ ವ್ಯವಸ್ಥೆ: ವಿರಾಜಪೇಟೆ ಕಡೆಯಿಂದ ಬರುವ ವಾಹನಗಳಿಗೆ ಮೇಕೇರಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು. ಅಲ್ಲಿಂದ ಜನರಲ್ ತಿಮ್ಮಯ್ಯ ವೃತ್ತದವರೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ಪರ್ಯಾಯ ವಾಹನ ವ್ಯವಸ್ಥೆ ಮಾಡಲಾಗುವುದು ಎಂದು ಎಸ್ಪಿ ಆರ್.ಎನ್.ಬಿಂದುಮಣಿ ವಿವರಿಸಿದರು.

ಮದ್ಯಪಾನ ನಿಷೇಧ: ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದು ಕಂಡುಬಂದರೆ ಅಂತವರ ವಿರುದ್ಧ ಕಠಿಣ ಪ್ರಕರಣ ದಾಖಲಿಸುವಂತೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಲಾಯಿತು.

ಮಂಟಪಗಳ ಸುರಕ್ಷತೆ: ದಶಮಂಟಪಗಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು ಮತ್ತು ನಿಯಮಗಳ (SOP) ಉಲ್ಲಂಘನೆ ಆಗಬಾರದು ಎಂದು ಸಮಿತಿಗಳಿಗೆ ಸೂಚಿಸಲಾಯಿತು.

ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ನಿಯಮಗಳಿಗೆ ಸಂಪೂರ್ಣವಾಗಿ ಕೈಜೋಡಿಸುವುದಾಗಿ ಮಡಿಕೇರಿ ದಸರಾ ಸಮಿತಿ ಅಧ್ಯಕ್ಷ ಅರುಣ್ ಕುಮಾರ್, ದಶಮಂಟಪ ಸಮಿತಿ ಅಧ್ಯಕ್ಷ ಪಾಂಡನ ಪೂಣಚ್ಚ ಹಾಗೂ ಗೋಣಿಕೊಪ್ಪ ದಸರಾ ಸಮಿತಿ ಅಧ್ಯಕ್ಷ ಪ್ರಮೋದ್ ಗಣಪತಿ ಭರವಸೆ ನೀಡಿದರು.

ಸಭೆಯಲ್ಲಿ ಡಿವೈಎಸ್‍ಪಿ ಸೂರಜ್, ಹೆಚ್ಚುವರಿ ಜಿಲ್ಲಾಧಿಕಾರಿ ನಿರಂಜನ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

coorg buzz
WhatsApp Image 2026-08-11 at 16.11.22