ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತಿನ ಕೊಡಗು ಘಟಕದ ಪದಗ್ರಹಣ, ಸಾಧಕರಿಗೆ ಪ್ರಶಸ್ತಿ ಪ್ರದಾನ

Share this post :

ವಿರಾಜಪೇಟೆ: ಕಲೆ ಮತ್ತು ಸಂಸ್ಕೃತಿಯ ಅನಾವರಣಕ್ಕೆ ಸಾಹಿತ್ಯ ಪರಿಷತ್ತು ಅತ್ಯುತ್ತಮ ವೇದಿಕೆಯಾಗಿದ್ದು, ನೌಕರರು ತಮ್ಮ ಪ್ರತಿಭೆಗಳನ್ನು ಹೊರತರಲು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೊಡಗು ಜಿಲ್ಲಾ ಖಜಾನೆ ಇಲಾಖೆಯ ಉಪ ನಿರ್ದೇಶಕ ಡಾ. ರಘುನಾಥ್ ಬಿ.ಎನ್. ತಿಳಿಸಿದರು. ವಿರಾಜಪೇಟೆಯ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಪದಗ್ರಹಣ ಹಾಗೂ ಆದರ್ಶ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲೆ-ಸಂಸ್ಕೃತಿ ಪ್ರದರ್ಶನಕ್ಕೆ ಭಾಷೆ, ಗಡಿಯ ಮಿತಿಗಳಿಲ್ಲ; ಪ್ರತಿಯೊಬ್ಬರೂ ವಿಶ್ವಮಾನವ ಪ್ರಜ್ಞೆ ಬೆಳೆಸಿಕೊಂಡು ಬೌದ್ಧಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಪರಿಷತ್ತಿನ ಸಂಸ್ಥಾಪಕ ರಾಜ್ಯ ಗೌರವಾಧ್ಯಕ್ಷ ಎಲ್.ಐ. ಲಕ್ಕಮ್ಮನವರ್ ಮಾತನಾಡಿ, ಓದುವ ಹವ್ಯಾಸ ಸಾಹಿತ್ಯದ ಒಲವನ್ನು ಹೆಚ್ಚಿಸುತ್ತದೆ ಎಂದರು. ಸಂಸ್ಥಾಪಕ ರಾಜ್ಯ ಪ್ರಧಾನ ಕಾರ್ಯದರ್ಶಿ ಪರ್ವಿನ್ ಬಾನು ಬುಳ್ಳಣ್ಣವರ್ ವೃತ್ತಿಯ ಜೊತೆಗೆ ಪ್ರವೃತ್ತಿಯನ್ನು ಬೆಳೆಸಿಕೊಂಡು ಕನ್ನಡದ ಅಸ್ಮಿತೆಯನ್ನು ಬೆಳಗಿಸಲು ಕರೆ ನೀಡಿದರು. ಇದೇ ವೇಳೆ ರಾಜ್ಯ ಸಹ ಕಾರ್ಯದರ್ಶಿಯಾಗಿ ಆಯ್ಕೆಯಾದ ಹೇಮಲತಾ ಅವರಿಗೆ ಆದೇಶ ಪತ್ರ ವಿತರಿಸಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷೆ ಕಮಲಮ್ಮ ಕೆ.ಎನ್., ಜಿಲ್ಲೆಯಲ್ಲಿ ಸಾಹಿತ್ಯಿಕ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸುವ ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಲಿಟಲ್ ಸ್ಕಾಲರ್ಸ್ ಅಕಾಡೆಮಿ, ನಾಟ್ಯ ಮಯೂರಿ ನೃತ್ಯ ಟ್ರಸ್ಟ್, ರುದ್ರಂ ಚಂಡೆ ಬಳಗ ಹಾಗೂ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಉಮ್ಮತ್ತಾಟ್ ಪ್ರದರ್ಶನ ಜರುಗಿದವು. ಆರಂಭದಲ್ಲಿ ದಿವಂಗತ ಕ್ಷೇತ್ರ ಶಿಕ್ಷಣಾಧಿಕಾರಿ ಆನಂದ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಇದೇ ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಬಿ.ಟಿ. ದೇವರಾಜ್ (ಸಂಘಟನೆ), ಮನು ಕೆ.ಆರ್. (ಸಾಹಿತ್ಯ), ಶಶಿ ಅಚ್ಚಪ್ಪ, ಬಿ.ಎನ್. ಶಾಂತಿಭೂಷಣ್ (ಮಾಧ್ಯಮ), ಸಾಧಿಕ್ ಅಹಮದ್, ಪೂಜಾ ಸಜೇಶ್, ಮಹೇಶ್ ಅಪ್ಪಯ್ಯ (ಸಮಾಜ ಸೇವೆ), ಮೀನಾಕ್ಷಿ, ಪ್ರೇಮಾಂಜಲಿ ಆಚಾರ್ಯ ಎಸ್. (ಕಲೆ), ಕೆ.ಆರ್. ವಿಶಾಲಾಕ್ಷಮ್ಮ ಹಾಗೂ ಟಿ.ವಿ. ಭಾಗ್ಯವತಿ ಅಣ್ಣಪ್ಪ (ಶಿಕ್ಷಣ) ಅವರಿಗೆ ಆದರ್ಶ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕೊಡಗು ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಕಮಲಮ್ಮ ಕೆ.ಎನ್., ಮಹಾ ಪೋಷಕರಾಗಿ ರಾಜೇಶ್ ಕೆ.ಆರ್., ಗೌರವಾಧ್ಯಕ್ಷರಾಗಿ ಡಾ. ರಘುನಾಥ್, ಪ್ರಧಾನ ಕಾರ್ಯದರ್ಶಿಯಾಗಿ ಅಶ್ವಿನ್ ಕುಮಾರ್ ಹೆಚ್.ಬಿ., ಕಾರ್ಯಾಧ್ಯಕ್ಷರಾಗಿ ಜಯಮಾಲ ಎಸ್.ಕೆ., ಖಜಾಂಚಿಯಾಗಿ ಉತ್ತಪ್ಪ ವಿ.ಎನ್., ಹಿರಿಯ ಉಪಾಧ್ಯಕ್ಷರಾಗಿ ಪ್ರೇಮ ಹೆಚ್.ಎಸ್., ಉಪಾಧ್ಯಕ್ಷರಾಗಿ ದೀಪ ಡಿ.ಎಸ್., ಜಂಟಿ ಕಾರ್ಯದರ್ಶಿಯಾಗಿ ಸುನಿಲ್ ರಾಜ್ ಇ.ಕೆ., ಸಂಘಟನಾ ಕಾರ್ಯದರ್ಶಿಯಾಗಿ ರಾಣಿ ಎಸ್.ಕೆ., ಸಹ ಕಾರ್ಯದರ್ಶಿಯಾಗಿ ಸುನಿತಾ ಕುಮಾರಿ, ಕ್ರೀಡಾ ಕಾರ್ಯದರ್ಶಿಗಳಾಗಿ ರವಿಕಾಂತ್ ಎಂ.ಎನ್., ಪದ್ಮಾವತಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪದ್ಮ ಎಚ್.ಎನ್., ಕಾನೂನು ಸಲಹೆಗಾರರಾಗಿ ಗೋವಿಂದರಾಜ್ ಹಾಗೂ ತಾಂತ್ರಿಕ ಸಲಹೆಗಾರರಾಗಿ ಕಮರುನ್ನಿಸ ಡಿ.ಎ. ಅಧಿಕಾರ ಸ್ವೀಕರಿಸಿದರು. ರಾಜ್ಯ ಉಪಾಧ್ಯಕ್ಷ ಗಣೇಶ್ ನಿಲುವಾಗಿಲು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎಂ. ತಿಮ್ಮಯ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

coorg buzz
WhatsApp Image 2026-08-11 at 16.11.22