ಮಡಿಕೇರಿ : ಕಾವೇರಿ ನೀರು ಹಂಚಿಕೆ ವಿವಾದದ ನಡುವೆ ರಾಜಾಜಿನಗರ ಶಾಸಕ, ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಅವರು ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇಂದು ರಾಜಾಜಿನಗರ ಕ್ಷೇತ್ರದ ಕಾರ್ಯಕರ್ತರೊಂದಿಗೆ ಜೀವನದಿ ಉಗಮ ಸ್ಥಾನ ತಲಕಾವೇರಿಗೆ ಆಗಮಿಸಿದ ಸುರೇಶ್ ಕುಮಾರ್, ಕಾವೇರಿಗೆ ನಮಿಸಿ ನಾಡಿನ ಸುಭಿಕ್ಷೆಗಾಗಿ ಪ್ರಾರ್ಥಿಸಿದರು. ಈ ವೇಳೆ ಮಾತನಾಡಿದ ಅವರು, ಕೆಆರ್‌ಎಸ್‌ನಲ್ಲಿ ಕಳೆದ ವರ್ಷ ಈ ಅವಧಿಯಲ್ಲಿ ಮೂರು ಬಾರಿ 100 ಅಡಿಗೂ ಹೆಚ್ಚು ನೀರು ತುಂಬಿತ್ತು. ಆದರೆ ಈ ಬಾರಿ ಸಕಾಲಕ್ಕೆ ಮಳೆಯಾದಗದೆ ಆತಂಕದ ವಾತಾವರಣವಿತ್ತು. ಹಾಗಾಗಿ ಡ್ಯಾಂ ಭರ್ತಿಯಾದರೆ ಬೆಂಗಳೂರಿಗರ ಪರವಾಗಿ ಜೀವನದಿ ಕಾವೇರಿಗೆ ಧನ್ಯವಾದ ಅರ್ಪಿಸಬೇಕೆಂದು ಅಂದುಕೊಂಡಿದ್ದೆ. ಕೆಲವು ದಿನಗಳಿಂದ ಕಾವೇರಿ ಪಾತ್ರದಲ್ಲಿ ಉತ್ತಮ ಮಳೆಯಾಗಿ ಆತಂಕ ದೂರವಾಗಿದೆ. ಹೀಗಾಗಿ ಇಂದು ಕ್ಷೇತ್ರಕ್ಕೆ ಬಂದು ಆ ಹರಕೆಯನ್ನು ನಾನು ತೀರಿಸಿದ್ದೇನೆ ಎಂದರು.
ಕೊಡಗಿನಲ್ಲಿ ಮಳೆಯಾದರೆ, ಇಲ್ಲಿ ಕಾವೇರಿ ಉಕ್ಕಿ ಹರಿದರೆ ಮೈಸೂರು, ಮಂಡ್ಯ, ಬೆಂಗಳೂರಿನ ಮಂದಿ ನೆಮ್ಮದಿಯಿಂದ ಇರೋದಕ್ಕೆ ಸಾಧ್ಯ. ಆದರೆ ಮಳೆಯಾದ ಸಂದರ್ಭ ಕೊಡಗಿನವರು ವಿವಿಧ ರೀತಿಯ ಸಮಸ್ಯೆಯನ್ನು ಎದುರಿಸಬೇಕಾದ ಪರಿಸ್ಥಿತಿ ಇದೆ. ಮಂಡ್ಯ, ಮೈಸೂರು, ಬೆಂಗಳೂರಿನ ಜನ ಕೊಡಗು ಹಾಗೂ ಕಾವೇರಿಗೆ ಕೃತಜ್ಞರಾಗಿರಬೇಕು. ಹಾಗಾಗಿ ಸಾಮಾನ್ಯ ಪ್ರಜೆಯಾಗಿ ನನ್ನ ಕರ್ತವ್ಯ ನಿಭಾಗಿಸಿದ್ದೇನೆ ಎಂದರು.
ಕೊಡಗು ಅಭಿವೃದ್ಧಿ ಪ್ರಾಧಿಕಾರ ಬೇಕು : 2018ರಲ್ಲಿ ಕೊಡಗಿನಲ್ಲಾದ ಪ್ರಾಕೃತಿಕ ವಿಪತ್ತನ್ನು ಕಣ್ಣಾರೆ ಕಂಡಿದ್ದೇನೆ. ಆ ಸಂದರ್ಭದ ಸಾವು ನೋವುಗಳು ಇಂದಿಗೂ ಕಣ್ಣೆದುರು ಬರುತ್ತದೆ. ಕೊಡಗು ಯಾವುದೇ ಕಾರಣಕ್ಕೂ ಭೂದಾಹಕ್ಕೆ ಬಲಿಯಾಗಬಾರದು. ಇಲ್ಲಿನ ಪ್ರಾಕೃತಿಕ ಸೌಂದರ್ಯ ಕೊಡಗಿಗೆ ಮಾರಕವಾಗಬಾರದು. ಹಣವಂತರು ಬಂದು ಪ್ರಕೃತಿ ನಾಶ ಮಾಡಿ ಇಲ್ಲಿ ರೆಸಾರ್ಟ್‌ನಂತ ಉದ್ಯಮವನ್ನು ನಡೆಸುವಂತೆ ಆಗಬಾರದು. ಆ ನಿಟ್ಟಿನಲ್ಲಿ ಎಚ್ಚರಿಕೆಯ ಕ್ರಮವನ್ನು ಕೈಗೊಳ್ಳಬೇಕಿದೆ ಎಂದು ಹೇಳಿದರು.
ಪ್ರಕೃತಿಗೆ ಪೂರಕವಾದ ಚಟುವಟಿಕೆಗಳ ಜೊತೆಗೆ ಅಭಿವೃದ್ಧಿ ಆಗುವಂತ ನಿಟ್ಟಿನಲ್ಲಿ ಕ್ರಮಗಳು ಆಗಬೇಕು. ಹೀಗಾಗಿ ಕೊಡಗು ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆಯಾಗಬೇಕು. ಜೊತೆಗೆ ಕೊಡಗು ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಬೇಕೆಂಬುದು ಅನೇಕರ ಬೇಡಿಕೆಯಿದೆ. ನಾನು ಕೂಡಾ ಈ ವಿಚಾರವಾಗಿ ಸಂಬಂಧಪಟ್ಟ ವ್ಯಕ್ತಿಗಳ ಜೊತೆಗೆ ಚರ್ಚಿಸುವುದರ ಜೊತೆಗೆ ಸದನದಲ್ಲೂ ಪ್ರಸ್ತಾಪ ಮಾಡುವುದಾಗಿ ತಿಳಿಸಿದರು.
ಇದಕ್ಕೂ ಮುನ್ನ ಭಾಗಮಂಡಲ ಭಗಂಡೇಶ್ವರ ದೇವಾಲದಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕ್ಷೇತ್ರದಲ್ಲಿ ಜರುಗಿದ ಪೊಲಿಂಕಾನ ಉತ್ಸವದಲ್ಲೂ ಅವರು ಭಾಗಿಯಾದರು. ಗ್ರೀನ್ ಸಿಟಿ ಫೋರಂ ಸಂಸ್ಥಾಪಕ ಚೈಯ್ಯಂಡ ಸತ್ಯ ಗಣಪತಿ, ಸದಸ್ಯ ಕಿಶೋರ್ ರೈ ಕತ್ತಲೆಕಾಡು, ರಾಜಾಜಿನಗರ ಕ್ಷೇತ್ರದ ಪ್ರಮುಖರು ಈ ಸಂದರ್ಭ ಉಪಸ್ಥಿತರಿದ್ದರು.



