ಕೊಡವ ಪೊಮ್ಮಕ್ಕಡ ಒಕ್ಕೂಟದಿಂದ ಸಂಭ್ರಮದ ‘ಕಕ್ಕಡ ನಮ್ಮೆ’ ಆಚರಣೆ

Kodava Samaja

Share this post :

ಕೊಡವ ಪೊಮ್ಮಕ್ಕಡ ಒಕ್ಕೂಟ ಕೊಡವ ಸಮಾಜ ವಿರಾಜಪೇಟೆ ಇದರ ವತಿಯಿಂದ ಕೊಡವ ಸಮಾಜದಲ್ಲಿ 2026-27ನೇ ಸಾಲಿನ ‘ಕಕ್ಕಡ ನಮ್ಮೆ’ ಆಚರಣೆಯನ್ನು ಪೊನ್ನಕ್ಕ ತಂಡದವರ ಸಹಯೋಗದೊಂದಿಗೆ ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಅಮ್ಮಣಿಚಂಡ ರವಿ ಉತ್ತಪ್ಪ ಅವರು, ಚಳಿ-ಮಳೆಯೆನ್ನದೆ ಪ್ರತಿಯೊಬ್ಬರೂ ತಮ್ಮ ಮನೆಯ ಕೆಲಸಗಳನ್ನು ತಾವೇ ಮಾಡಿಕೊಳ್ಳಬೇಕು ಹಾಗೂ ದೈಹಿಕ ಚಟುವಟಿಕೆಗಳ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಕಕ್ಕಡ ನಮ್ಮೆಯ ಸಂದರ್ಭದಲ್ಲಿ 18 ತರಹದ ಔಷಧೀಯ ಗುಣಗಳನ್ನು ಹೊಂದಿರುವ ‘ಮದ್ ಸೊಪ್ಪಿನ’ ಖಾದ್ಯಗಳನ್ನು ಸೇವಿಸುವುದರಿಂದ ಆರೋಗ್ಯ ವೃದ್ಧಿಸುತ್ತದೆ ಎಂದ ಅವರು, ಮಹಿಳೆಯರು ಯಾವುದೇ ಕೆಲಸಕ್ಕೂ ಹಿಂಜರಿಯದೆ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು. ಉಪಾಧ್ಯಕ್ಷ ಕಾಣತಂಡ ಜಗದೀಶ್‌ ಮಾತನಾಡಿ, ಮಹಿಳೆಯರು ಸಮಾಜದಲ್ಲಿ ಸ್ವಾವಲಂಬಿಗಳಾಗಿ ಬದುಕಿ ಮಾದರಿಯಾಗಬೇಕೆಂದು ಆಶಿಸಿದರು. ಕಾರ್ಯದರ್ಶಿ ಮಾಲೆಟಿರ ಶ್ರೀನಿವಾಸ್‌ ಮಾತನಾಡಿ, ಮಹಿಳೆಯರು ತಮ್ಮಲ್ಲಿರುವ ಕಲೆಯನ್ನು ಪ್ರದರ್ಶಿಸಲು ಮುಂದೆ ಬರಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕೊಡವ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ತಾತಂಡ ಜ್ಯೋತಿ ಪ್ರಕಾಶ್‌ ಮಾತನಾಡಿ, ಕೊಡವ ಸಮಾಜವು ಒಕ್ಕೂಟದ ಚಟುವಟಿಕೆಗಳಿಗೆ ₹10,000 ಪ್ರೋತ್ಸಾಹಧನ ನೀಡಿದ್ದಕ್ಕೆ ಧನ್ಯವಾದ ಸಲ್ಲಿಸಿದರು. ಅಲ್ಲದೆ, ಕೊಡವ ಪೊಮ್ಮಕ್ಕಡ ಒಕ್ಕೂಟವನ್ನು ಕೊಡವ ಸಮಾಜದ ಅಂಗ ಸಂಸ್ಥೆಯಾಗಿ ಅಧಿಕೃತವಾಗಿ ಸೇರ್ಪಡೆಗೊಳಿಸಿ ಬೈಲಾ ಹಸ್ತಾಂತರಿಸಿರುವುದು ಒಂದು ಸುವರ್ಣ ಅಧ್ಯಾಯ (ಗೋಲ್ಡನ್‌ ಎರಾ) ಎಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಕಾರ್ಯದರ್ಶಿ ಕುಂಞಿರ ಚಿತ್ರ ಚರ್ಮಣ ವರದಿ ವಾಚಿಸಿದರು ಹಾಗೂ ಖಜಾಂಚಿ ತಾತಂಡ ಯಶು ಕಬೀರ್‌ ಲೆಕ್ಕಪತ್ರ ಮಂಡಿಸಿದರು.

ಇದೇ ಸಂದರ್ಭದಲ್ಲಿ ನಡೆದ ಮದ್ ಸೊಪ್ಪಿನ ಪಾಯಸ ತಯಾರಿಕೆ ಸ್ಪರ್ಧೆಯಲ್ಲಿ ಮಾಲೆಟಿರ ವಿನಿಶಾ (ಪ್ರಥಮ), ಮಂಡೇಪಂಡ ಶಾಂಶ (ದ್ವಿತೀಯ) ಹಾಗೂ ಮಾಚೆಟ್ಟಿರ ರುಕ್ಮಿಣಿ (ತೃತೀಯ) ಬಹುಮಾನ ಗಳಿಸಿದರು. ಪುಟ್ ತಯಾರಿಸುವ ಸ್ಪರ್ಧೆಯಲ್ಲಿ ಮಾಚೆಟ್ಟಿರ ರುಕ್ಮಿಣಿ ಪ್ರಥಮ ಹಾಗೂ ಪುಗ್ಗೇರ ಭವಾನಿ ದ್ವಿತೀಯ ಸ್ಥಾನ ಪಡೆದರು. ಉಪಾಧ್ಯಕ್ಷೆ ಮುರುವಂಡ ಉಷಾ ಮೊನ್ನಪ್ಪ ಬಹುಮಾನ ಪ್ರಾಯೋಜಿಸಿದ್ದರು. ಮೂಕೋಂಡ ಪ್ರೀತ್‌ ಈರಪ್ಪ ನಡೆಸಿಕೊಟ್ಟ ಭಾಷಣ ಸ್ಪರ್ಧೆಯಲ್ಲಿ ಕಾಣತಂಡ ಬೀನಾ ಜಗದೀಶ್ (ಪ್ರಥಮ), ಬಡುವಮಂಡ ವೀಣಾ (ದ್ವಿತೀಯ) ಹಾಗೂ ಅಮ್ಮಣಿಚಂಡ ಮಂಗಳ ಪ್ರವೀಣ್ (ತೃತೀಯ) ಬಹುಮಾನ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಮಹಿಳೆಯರು ತಯಾರಿಸಿದ ವಿವಿಧ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ತೆರೆಯಲಾಗಿತ್ತು. ಪೊನ್ನಕ್ಕ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು. ಮಂಡೇಪಂಡ ಶಾಂತಿ ಸ್ವಾಗತಿಸಿ, ಪುಡಿಯಂಡ ಅಸ್ತು, ಕುಂದಿರ ಕನಿಕೆ, ಬೊಳ್ಳಾರ್‌ ಪಂಡ ಅನಿತಾ ಪ್ರಾರ್ಥಿಸಿದರು. ಅಜ್ಜಿನಿಕಂಡ ಪ್ರಮೀಳಾ ನಾಚಯ್ಯ ಕಾರ್ಯಕ್ರಮ ನಿರೂಪಿಸಿ, ಕೀತಿಯಂಡ ಕಾವೇರಮ್ಮ ವಂದಿಸಿದರು. ಸಮಾಜದ ಸರ್ವ ಸದಸ್ಯರು ಹಾಗೂ ಆಡಳಿತ ಮಂಡಳಿಯವರು ಉಪಸ್ಥಿತರಿದ್ದು, ನೆರೆದಿದ್ದ ಎಲ್ಲರಿಗೂ ಭೋಜನ ವ್ಯವಸ್ಥೆ ಮಾಡಲಾಗಿತ್ತು.

coorg buzz
coorg buzz