ಪೊನ್ನಂಪೇಟೆ: ಇತ್ತೀಚಿನ ದಿನಗಳಲ್ಲಿ ಕೃಷಿ ಲಾಭದಾಯಕವಾಗಿ ಉಳಿದಿಲ್ಲ. ರೈತರ ಆದಾಯ ಹೆಚ್ಚಾಗಬೇಕಾದರೆ ದೊಡ್ಡ ದೊಡ್ಡ ಕಂಪನಿಗಳು ಕೃಷಿ ಯಂತ್ರೋಪಕರಣಗಳ ಅಭಿವೃದ್ಧಿಯತ್ತ ಗಮನಹರಿಸಿ, ರೈತರಿಗೆ ಕೈಗೆಟುಕುವ ದರದಲ್ಲಿ ಆಧುನಿಕ ಯಂತ್ರೋಪಕರಣಗಳನ್ನು ಉತ್ಪಾದಿಸಬೇಕು ಎಂದು ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥೆ ಪೂಜಾ ಸಜೇಶ್ ಅಭಿಪ್ರಾಯಪಟ್ಟರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಕಾರ್ಯಾನುಭವ ಶಿಬಿರ ಮತ್ತು ಕೊಡಗು ಜಿಲ್ಲಾ ಕೃಷಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಬೇಟೋಳಿ ಗ್ರಾಮದ ಪುದುಪಾಡಿ ಅಯ್ಯಪ್ಪ ಸಭಾ ಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ‘ಬೆಳೆ ವಿಚಾರ ಸಂಕಿರಣ’ವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಸಮುದಾಯವು ಉನ್ನತ ಶಿಕ್ಷಣ ಪಡೆದು ನಗರ ಹಾಗೂ ವಿದೇಶಗಳಿಗೆ ಉದ್ಯೋಗಕ್ಕೆ ತೆರಳುತ್ತಿರುವುದರಿಂದ ಗ್ರಾಮೀಣ ಭಾಗದಲ್ಲಿ ಕೃಷಿಕರ ಸಂಖ್ಯೆ ಕಡಿಮೆಯಾಗುತ್ತಿದೆ. ಕಾರ್ಪೊರೇಟ್ ಕಂಪನಿಗಳು ರೈತರೊಂದಿಗೆ ಕೈಜೋಡಿಸಿ ಕಡಿಮೆ ವೆಚ್ಚದಲ್ಲಿ ತಂತ್ರಜ್ಞಾನವನ್ನು ತಲುಪಿಸಿದರೆ ಕೃಷಿ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಬದಲಾವಣೆ ಸಾಧ್ಯ. ಸರಿಯಾದ ಮಾಹಿತಿಯೊಂದಿಗೆ ಕೃಷಿಯಲ್ಲಿ ತೊಡಗಿದರೆ ಉತ್ತಮ ಜೀವನ ಕಟ್ಟಿಕೊಳ್ಳಬಹುದು ಎಂದು ಅವರು ಹೇಳಿದರು.
ಕೃಷಿ ತಜ್ಞರಿಂದ ವೈಜ್ಞಾನಿಕ ಮಾಹಿತಿ ರವಾನೆ:
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿವಿಧ ರಂಗಗಳ ತಜ್ಞರು ರೈತರಿಗೆ ಕೃಷಿ ತಾಂತ್ರಿಕತೆಯ ಬಗ್ಗೆ ಮಹತ್ವದ ಮಾಹಿತಿ ನೀಡಿದರು:
ಭತ್ತದ ಕೃಷಿ: ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಜಡೇಗೌಡ ಎಂ. ಅವರು ಭತ್ತದ ಕೃಷಿಯಲ್ಲಿನ ನೂತನ ತಾಂತ್ರಿಕತೆಗಳ ಕುರಿತು ವಿಷಯ ಮಂಡಿಸಿದರು.
ತೋಟಗಾರಿಕೆ ಬೆಳೆಗಳು: ಗೋಣಿಕೊಪ್ಪ ಕೆ.ವಿ.ಕೆ. ವಿಷಯ ತಜ್ಞ ಡಾ. ಸಿ. ಪ್ರಭಾಕರ್ ತೋಟಗಾರಿಕಾ ಬೆಳೆಗಳ ವಿವರ ನೀಡಿದರು.
ಕೀಟ ಮತ್ತು ರೋಗ ನಿರ್ವಹಣೆ: ಐ.ಸಿ.ಎ.ಆರ್ ಕೆ.ವಿ.ಕೆ. ತಜ್ಞ ಡಾ. ವೀರೇಂದ್ರಕುಮಾರ್ ಕೆ.ವಿ. ಕಾಳುಮೆಣಸು ಹಾಗೂ ಕಾಫಿ ಬೆಳೆಗೆ ತಗುಲುವ ರೋಗಗಳ ನಿರ್ವಹಣೆ ಬಗ್ಗೆ ತಿಳಿಸಿದರು.
ವೈಜ್ಞಾನಿಕ ಕೃಷಿ: ಅಪ್ಪಂಗಳದ ಐ.ಐ.ಎಸ್.ಆರ್. ಹಿರಿಯ ವಿಜ್ಞಾನಿ ಡಾ. ಜಿ.ಎ. ರಾಜಣ್ಣ ಕಾಳುಮೆಣಸು ಮತ್ತು ಏಲಕ್ಕಿಯಲ್ಲಿ ಅನುಸರಿಸಬೇಕಾದ ಪದ್ಧತಿಗಳನ್ನು ವಿವರಿಸಿದರು.
ಕಾರ್ಬನ್ ಕ್ರೆಡಿಟ್: ಅರಣ್ಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಎಂ. ಮಂಜುನಾಥ್ ಕಾರ್ಬನ್ ಕ್ರೆಡಿಟ್ ಕುರಿತು ಅರಿವು ಮೂಡಿಸಿದರು.
ಆಹಾರ ಅಭಾವದ ಬಗ್ಗೆ ಎಚ್ಚರಿಕೆ:
ಮುಖ್ಯ ಅತಿಥಿಯಾಗಿದ್ದ ಮಡಿಕೇರಿ ಉಪ ಕೃಷಿ ನಿರ್ದೇಶಕ ಡಾ. ಡಿ.ಎಸ್. ಸೋಮಶೇಖರ್ ಮಾತನಾಡಿ, “ಕೈಗಾರಿಕೆಗಳು ಎಷ್ಟೇ ಬೆಳೆದರೂ ಆಹಾರ ಉತ್ಪಾದನೆಯಾಗದಿದ್ದರೆ ಮಾನವಕುಲ ಉಳಿಯಲು ಸಾಧ್ಯವಿಲ್ಲ. ಕೃಷಿ ಭೂಮಿಯನ್ನು ರಿಯಲ್ ಎಸ್ಟೇಟ್ ಹಾಗೂ ಲೇಔಟ್‌ಗಳಿಗೆ ಬಳಸುವುದು ಹೆಚ್ಚಾದರೆ ಮುಂದಿನ ದಿನಗಳಲ್ಲಿ ತೀವ್ರ ಆಹಾರ ಅಭಾವ ಎದುರಾಗಲಿದೆ,” ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅರಣ್ಯ ಮಹಾವಿದ್ಯಾಲಯದ ಪ್ರಭಾರ ಡೀನ್ ಡಾ. ಪಿ.ಎಸ್. ಶಿವಕುಮಾರ್ ಮಾತನಾಡಿ, ರೈತರು ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳಿಂದ ಕಾಲಕಾಲಕ್ಕೆ ವೈಜ್ಞಾನಿಕ ಮಾಹಿತಿ ಪಡೆದು ಕೃಷಿ ಮಾಡಿದರೆ ಸ್ವಾವಲಂಬಿ ಹಾಗೂ ಲಾಭದಾಯಕ ಜೀವನ ನಡೆಸಬಹುದು ಎಂದರು.
ಕಾರ್ಯಕ್ರಮದಲ್ಲಿ ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಆರ್.ಎನ್. ಕೆಂಚಾರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ. ಲಕ್ಷ್ಮೀ ಬಳಗಾನೂರಮಠ, ಕೆ.ಎಂ. ನಾಣಯ್ಯ, ಡಾ. ನವೀನ್, ಡಾ. ನಿಂಗರಾಜ್ ದಳವಾಯಿ ಹಾಗೂ ಡಾ. ಸುಮನ ಉಪಸ್ಥಿತರಿದ್ದರು. ವಿಚಾರ ಸಂಕಿರಣದಲ್ಲಿ ಹೆಗ್ಗಳ ಹಾಗೂ ಬೇಟೋಳಿ ಗ್ರಾಮದ ರೈತರು, ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.



