ಪೊನ್ನಂಪೇಟೆ: ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಗ್ರಾಮೀಣ ಕಾರ್ಯಾನುಭವ ಶಿಬಿರದ ವತಿಯಿಂದ ಸಮೀಪದ ಬೇಟೋಳಿ ಗ್ರಾಮದ ಪ್ರಗತಿಪರ ರೈತ ವೇದಾತ್ಮ ಅವರ ಭತ್ತದ ಗದ್ದೆಯಲ್ಲಿ ಸ್ಥಳೀಯ ರೈತರಿಗಾಗಿ ಜೀವಾಮೃತ ತಯಾರಿಕೆಯ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಬುಧವಾರ ಯಶಸ್ವಿಯಾಗಿ ನೆರವೇರಿತು. ಶಿಬಿರಾರ್ಥಿ ವಿದ್ಯಾರ್ಥಿಗಳು 20 ಕೆ.ಜಿ. ಹಸುವಿನ ಸಗಣಿ, 15ರಿಂದ 20 ಲೀಟರ್ ಗೋಮೂತ್ರ, 2 ಕೆ.ಜಿ. ಬೆಲ್ಲ, 2 ಕೆ.ಜಿ. ದ್ವಿದಳ ಧಾನ್ಯದ ಹಿಟ್ಟು ಹಾಗೂ ಗದ್ದೆಯ ಜೀವರಸಯುಕ್ತ ಮಣ್ಣನ್ನು ನಿಗದಿತ ಪ್ರಮಾಣದಲ್ಲಿ ಮಿಶ್ರಣ ಮಾಡಿ, ವೈಜ್ಞಾನಿಕ ಹಾಗೂ ಪ್ರಾಯೋಗಿಕ ವಿಧಾನಗಳ ಮೂಲಕ ಜೀವಾಮೃತ ಸಿದ್ಧಪಡಿಸುವುದನ್ನು ರೈತರಿಗೆ ಹಂತ-ಹಂತವಾಗಿ ಪ್ರದರ್ಶಿಸಿದರು.
ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ಜೀವಾಮೃತದ ಬಳಕೆಯಿಂದ ಮಣ್ಣಿನಲ್ಲಿ ಸೂಕ್ಷ್ಮಜೀವಿಗಳ ಚಟುವಟಿಕೆ ವೃದ್ಧಿಸಿ ಫಲವತ್ತತೆ ಸುಧಾರಿಸುವುದರ ಜತೆಗೆ, ಬೆಳೆಗಳ ಆರೋಗ್ಯಕರ ಬೆಳವಣಿಗೆಗೆ ಪೂರಕವಾಗಲಿದೆ ಮತ್ತು ದುಬಾರಿ ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆಯನ್ನು ತಗ್ಗಿಸಬಹುದು ಎಂದು ಶಿಬಿರಾರ್ಥಿಗಳು ಈ ಸಂದರ್ಭದಲ್ಲಿ ವಿವರಣೆ ನೀಡಿದರು. ಕಾರ್ಯಕ್ರಮದಲ್ಲಿ ರೈತರಾದ ವೇದಾತ್ಮ, ಜೀವನರಾಮ್, ಅಮೃತೇಶ್ವರ್, ಉದಯಶಂಕರ್, ಗೌರಿಶಂಕರ್, ರಾಮಶರ್ಮ, ಪ್ರಥಮ್, ರಕ್ಷಿತ್, ವಿದ್ಯಾಶ್ರೀ, ಕಲಾವತಿ ಸೇರಿದಂತೆ ಅರಣ್ಯ ಮಹಾವಿದ್ಯಾಲಯದ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.



