ಕೊಡಗಿನಲ್ಲಿ ಮಿನಿ ವಿಮಾನ ನಿಲ್ದಾಣ – ಮಡಿಕೇರಿ ವ್ಯಾಪ್ತಿಯಲ್ಲಿ 120 ಎಕ್ರೆ ಜಾಗ ಖರೀದಿಗೆ ಸರ್ಕಾರದ ಒಪ್ಪಿಗೆ : ಶಾಸಕ ಮಂತರ್‌ ಗೌಡ ಮಾಹಿತಿ

Share this post :

ಮಡಿಕೇರಿ : ಜಿಲ್ಲೆಯಲ್ಲಿ ಮಿನಿ ವಿಮಾನ ನಿಲ್ದಾಣ ಸ್ಥಾಪನೆಗೆ ರಾಜ್ಯ ಸರಕಾರ ತಯಾರಿದ್ದು, ಮಡಿಕೇರಿ ಸಮೀಪ ಖಾಸಗಿ ವ್ಯಕ್ತಿಗಳಿಂದ ಕನಿಷ್ಠ ೧೨೦ ಎಕರೆ ಸಮತಟ್ಟು ಜಾಗ ಲಭ್ಯವಿದ್ದಲ್ಲಿ ಅದನ್ನು ಮಾರುಕಟ್ಟೆ ದರದಲ್ಲಿ ಖರೀದಿಸಲು ಸರಕಾರ ಒಪ್ಪಿಗೆ ನೀಡಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾಕ್ಟರ್ ಮಂತರ್ ಗೌಡ ಹೇಳಿದರು.
ಮಡಿಕೇರಿ ಹೊರವಲಯದ ಮಹಿಂದ್ರ ರೆಸಾರ್ಟ್‌ನಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ವಾಣಿಜ್ಯ ಮಹಾ ಸಂಸ್ಥೆ ವತಿಯಿಂದ ಸಂವಾದ ಕಾರ್ಯಕ್ರಮ ಹಾಗೂ ಕೊಡಗು ಜಿಲ್ಲೆಯ ಪ್ರವಾಸೋದ್ಯಮ ಹಾಗೂ ಇತರ ಅಭಿವೃದ್ಧಿ ಕುರಿತ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಕುಶಾಲನಗರ ಸಮೀಪದ ಚಿಕ್ಕ ಅಳುವಾರದಲ್ಲಿ ಜಾಗ ಗುರುತಿಸಿದ್ದರೂ ಅದು ಸೂಕ್ತವಲ್ಲ ಎಂದು ವರದಿ ಬಂದಿದ್ದು ಹಾಗಾಗಿ ಮಡಿಕೇರಿ ಸಮೀಪ ಸಮತಟ್ಟು ಪ್ರದೇಶ ಲಭ್ಯವಾದಲ್ಲಿ ಅದನ್ನು ಸರಕಾರ ಖರೀದಿಸಲಿದೆ ಎಂದು ತಿಳಿಸಿದ ಶಾಸಕರು ಜಿಲ್ಲೆಯಲ್ಲಿ ನಾಲ್ಕು ಕಡೆ ಹೆಲಿಪೋರ್ಟ್ ಸ್ಥಾಪನೆಗೂ ಸರಕಾರ ಮುಂದಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಹಲವು ಹೋಂಸ್ಟೇಗಳು ಕಾನೂನಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದು ಇದರಿಂದ ಪ್ರವಾಸಿಗರಿಗೂ ತೊಂದರೆ ಉಂಟಾಗುತ್ತಿದೆ, ಹಾಗಾಗಿ ಪ್ರವಾಸೋದ್ಯಮಕ್ಕೆ ಕಟ್ಟು ನಿಟ್ಟಿನ ನಿಯಮ ಜಾರಿ ಅಗತ್ಯ ಎಂದು ಅವರು ಒತ್ತಿ ಹೇಳಿದರು. ಮೈಸೂರಿನಿಂದ ಕುಶಾಲನಗರವರೆಗಿನ ರೈಲ್ವೆ ಸಂಪರ್ಕ ಯೋಜನೆಗೆ ರಾಜ್ಯ ಸರಕಾರ ಆದಾಯದ ದೃಷ್ಟಿಯಿಂದ ಒಪ್ಪಿಗೆ ನೀಡದಿದ್ದರೂ, ಕೇಂದ್ರ ರೈಲ್ವೆ ಸಚಿವ ಸೋಮಣ್ಣ ಅವರು ಈ ಬಗ್ಗೆ ರಾಜ್ಯ ಸರಕಾರದೊಂದಿಗೆ ಸಂಪರ್ಕದಲ್ಲಿದ್ದು ಸರಕಾರವನ್ನು ಮನವೊಲಿಸಲಾಗುವುದು ಎಂದು ಮಂತರ್ ತಿಳಿಸಿದರು.
ಮಡಿಕೇರಿಯಿಂದ ಕೊಡ್ಲಿಪೇಟೆ ಮೂಲಕ ದೋಣಿಗಲ್ ಗೆ ರಸ್ತೆ ಅಗಲೀಕರಣಕ್ಕಾಗಿ ೭೦೦ ರಿಂದ ೮೦೦ ಕೋಟಿ ರೂಪಾಯಿ ವೆಚ್ಚ ಮಾಡುವುದಾಗಿ ಶಾಸಕರು ಸಭೆಗೆ ಮಾಹಿತಿ ಇತ್ತರು. ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಹೃದಯ ಚಿಕಿತ್ಸೆ ವಿಭಾಗಕ್ಕೆ ೧೦.೫೬ ಕೋಟಿ ರೂಪಾಯಿ ವೆಚ್ಚದಲ್ಲಿ ಉಪಕರಣ ಖರೀದಿಸಲಿದ್ದು, ಜಿಲ್ಲೆಯಲ್ಲಿ ಎಲ್ಲಾ ಹೃದಯ ರೋಗಿಗಳಿಗೆ ಸುಲಭದಲ್ಲಿ ಚಿಕಿತ್ಸೆ ಲಭ್ಯವಾಗುವ ರೀತಿ ಯೋಜನೆ ರೂಪಿಸಲಾಗಿದೆ ಎಂದರು. ಹದಗೆಟ್ಟ ರಸ್ತೆಗಳನ್ನು ರಿಪೇರಿ ಮಾಡಲು ೫೦ ಕೋಟಿ ರೂಪಾಯಿ ಮೀಸಲಿದ್ದು ಮಳೆಯಿಂದಾಗಿ ವಿಳಂಬವಾಗುತ್ತಿದೆ ಎಂದು ಶಾಸಕರು ವಿವರಿಸಿದರು.
ಪ್ರಾಸ್ತಾವಿಕ ಮಾತನಾಡಿದ ಎಫ್ ಕೆ ಸಿ ಸಿ ಐ ಅಧ್ಯಕ್ಷೆ ಉಮಾರೆಡ್ಡಿ, ತಮ್ಮ ಅಧಿಕಾರಾವಧಿಯಲ್ಲಿ ಮಂತನ್ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸುಮಾರು ೨೫೦೦ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಯೋಜನೆ ಇದೆ ಎಂದರು. ಕರ್ನಾಟಕದಲ್ಲಿ ಸುಮಾರು ೭ ಲಕ್ಷ ಎಂ ಎಸ್ ಎಂ ಇ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು ಇದನ್ನು ೧೦ ಲಕ್ಷಕ್ಕೆ ಏರಿಸುವ ಬಗ್ಗೆ ಸಂಸ್ಥೆ ಯೋಜನೆ ಹಮ್ಮಿಕೊಂಡಿದೆ ಎಂದರು.
ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಪರವಾಗಿ ಮಾತನಾಡಿದ ಸಂಸ್ಥೆಯ ಮಾಜಿ ಅಧ್ಯಕ್ಷ ಜಿ.ಚಿದ್ವಿಲಾಸ್, ಕಳೆದ ಆರು ತಿಂಗಳುಗಳಿಂದ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು ರಸ್ತೆಗಳು ತೀವ್ರ ದುರಸ್ತಿಯಾಗಿದೆ. ಅವುಗಳನ್ನು ಸರಿಪಡಿಸಲು ರಾಜ್ಯ ಸರಕಾರ ವಿಶೇಷ ಅನುದಾನ ನೀಡುವ ನಿಟ್ಟಿನಲ್ಲಿ ಎಫ್ ಕೆ ಸಿ ಸಿ ಐ ರಾಜ್ಯ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಮನವಿ ಮಾಡಿದರು.
ದಶಕಗಳಿಂದ ಕೊಡಗು ಜಿಲ್ಲೆ, ಲೋಕಸಭಾ ಕ್ಷೇತ್ರಕ್ಕಾಗಿ ದಕ್ಷಿಣ ಕನ್ನಡ ಹಾಗೂ ಇದೀಗ ಮೈಸೂರು ಜಿಲ್ಲೆಯನ್ನು ಅವಲಂಬಿಸಿದ್ದು ಮುಂದಿನ ಲೋಕಸಭಾ ಚುನಾವಣಾ ಹಂತದಲ್ಲಿ ಪ್ರತ್ಯೇಕ ಲೋಕಸಭಾ ಕ್ಷೇತ್ರ ಆಗುವಂತೆ ಸರಕಾರ ಗಮನಹರಿಸಬೇಕು ಎಂದು ಅವರು ಆಶಿಸಿದರು.
ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಕೆ. ವಿಶ್ವನಾಥ್, ಕುಶಾಲನಗರದಿಂದ ಮಂಗಳೂರು ನವ ಬಂದರಿಗೆ ರಸ್ತೆ ಮೂಲಕ ಮಳೆಗಾಲದಲ್ಲಿ ಕಾಫಿ ಸಾಗಾಟ ಮಾಡಲು ಅವಕಾಶ ಇರುವುದಿಲ್ಲ, ಇದರಿಂದ ಸಾಗಾಟದ ವೆಚ್ಚ ಹೆಚ್ಚಾಗಿ ಅದು ಬೆಳೆಗಾರನ ಮೇಲೆ ಹೊರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಸರಕಾರ ನಿರಂತರ ಲಾರಿ ಸಾಗಾಟಕ್ಕೆ ಸೂಕ್ತವಾಗುವ ರಸ್ತೆ ನಿರ್ಮಾಣ ಮಾಡುವಂತೆ ಎಫ್ ಕೆ ಸಿ ಸಿ ಐ ಒತ್ತಾಯ ಮಾಡಬೇಕು ಎಂದು ಕೋರಿದರು.
ಕಾರ್ಯಕಾರಿ ಮಂಡಳಿ ಸದಸ್ಯ ಪ್ರದೀಪ್ ಪೂವಯ್ಯ, ಸಿಪಿಎ ಅಧ್ಯಕ್ಷ ನಂದ ಬೆಳ್ಳಿಯಪ್ಪ ಮಾತನಾಡಿದರು. ವೇದಿಕೆಯಲ್ಲಿ ಎಸ್ ಕೆ ಸಿ ಸಿ ಐ ನಿಕಟ ಪೂರ್ವ ಅಧ್ಯಕ್ಷ ಎಂ. ಜಿ. ಬಾಲಕೃಷ್ಣ, ನಿರ್ದೇಶಕ ಕೆ. ಬಿ. ಗಿರೀಶ್ ಗಣಪತಿ, ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ಮೋಂತಿ ಗಣೇಶ್, ರಾಜ್ಯ ನಿರ್ದೇಶಕ ಹಿರೇಮಠ್ ಉಪಸ್ಥಿತರಿದ್ದರು .
ಜಿಲ್ಲಾ ಚೇಂಬರ್ ವತಿಯಿಂದ ರಾಜ್ಯಾಧ್ಯಕ್ಷೆ ಉಮಾ ರೆಡ್ಡಿ, ಹಿರಿಯ ಉಪಾಧ್ಯಕ್ಷ ಸಾಯಿ ರಾಮ್ ಪ್ರಸಾದ್, ಹಿಂದಿನ ಅಧ್ಯಕ್ಷ ಎಂ.ಜಿ.ಬಾಲಕೃಷ್ಣ ಇವರುಗಳನ್ನು ಸನ್ಮಾನಿಸಲಾಯಿತು. ರಾಜ್ಯ ಸಂಸ್ಥೆ ವತಿಯಿಂದ ಶಾಸಕ ಮಂತರ್ ಗೌಡ ಅವರನ್ನು ಗೌರವಿಸಲಾಯಿತು. ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷ ಅಂಬೆಕಲ್ ನವೀನ್ ಗೌರವ ಸ್ವೀಕರಿಸಿದರು .
ಸುಶೀಮ ಪ್ರಾರ್ಥಿಸಿದರು. ಎಫ್ ಕೆ ಸಿ ಸಿ ಐ ಹಿರಿಯ ಉಪಾಧ್ಯಕ್ಷ ಸಾಯಿ ರಾಮ್ ಪ್ರಸಾದ್ ವಂದಿಸಿದರು. ಕಾರ್ಯದರ್ಶಿ ಪ್ರಕಾಶ ಕಾರ್ಯಕ್ರಮ ನಿರೂಪಿಸಿದರು.

coorg buzz
coorg buzz