ಪಾಕಿಸ್ತಾನದ ಮೇಲಿನ ಸಿಟ್ಟಿಗೆ ಮೈಸೂರು ಪಾಕ್‌ ಹೆಸರು ಚೇಂಜ್: ಹೊಸ ಹೆಸರೇನು?

Mysore Pak

Share this post :

ಪಹಲ್ಗಾಂನಲ್ಲಿ ಭಯೋತ್ಪಾದಕ ದಾಳಿ ನಡೆದು ಒಂದು ತಿಂಗಳಾದರೂ ಪಾಕಿಸ್ತಾನದ ವಿರುದ್ಧ ಸಿಟ್ಟು ಕಡಿಮೆಯಾಗುತ್ತಿಲ್ಲ. ರಾಜಸ್ಥಾನದ ಜೈಪುರದಲ್ಲಿ ಪಾಕ್ ಹೆಸರಿರುವ ತಿನಿಸುಗಳ ಹೆಸರು ಬದಲಾಯಿಸಲಾಗಿದೆ. ಅದರಲ್ಲೂ ಹೀಗಾಗಿ, ಇಲ್ಲಿ ಮೈಸೂರು ಪಾಕ್ (Mysore Pak) ಮೈಸೂರು ಶ್ರೀಯಾಗಿ (Mysore Shree) ಬದಲಾಗಿದೆ. ಸಿಹಿ ತಿನಿಸುಗಳಲ್ಲಿನ ‘ಪಾಕ್’ ಪದಕ್ಕೂ ಪಾಕಿಸ್ತಾನಕ್ಕೂ ಸಂಬಂಧವಿಲ್ಲದಿದ್ದರೂ, ವ್ಯಾಪಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ.

ನಾವು ಮೋತಿ ಪಾಕ್ ಅನ್ನು ಮೋತಿ ಶ್ರೀ ಎಂದು ಗೋಂದ್ ಪಾಕ್ ಅನ್ನು ಗೋಂದ್ ಶ್ರೀ ಎಂದು, ಮೈಸೂರು ಪಾಕ್’ ಅನ್ನು ಮೈಸೂರು ಶ್ರೀ ಎಂದು ಮರುನಾಮಕರಣ ಮಾಡಿದ್ದೇವೆ ಎಂದು ಅಂಗಡಿಯವರು ತಿಳಿಸಿದ್ದಾರೆ. ಆದರೆ ಈ ಸಿಹಿ ತಿನಿಸುಗಳಲ್ಲಿರುವ ‘ಪಾಕ್’ ಎಂಬ ಪದಕ್ಕೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ. ಇದು ಕನ್ನಡ ಪದವಾಗಿದ್ದು, ಪಾಕ ಪದವನ್ನು ಸಿಹಿ ತಿನಿಸುಗಳ ಹೆಸರಿನ ಜೊತೆ ಪಾಕ್‌ ಎಂದು ಬಳಸಲಾಗಿದೆ. ಕನ್ನಡದಲ್ಲಿ ಸಕ್ಕರೆ ಪಾಕ, ಬೆಲ್ಲದ ಪಾಕ ಹೀಗೆ ಹಲವು ಪದಗಳು ಚಾಲ್ತಿಯಲ್ಲಿದ್ದು, ಇದೇ ರೀತಿ ಮೈಸೂರ್‌ ಪಾಕ್‌ ಪದ ಬಂದಿದೆ.

ಜೈಪುರದ ನಗರದಲ್ಲಿ ಈ ಒಬ್ಬರೇ ಅಂಗಡಿ ಮಾಲೀಕರಲ್ಲ, ಬದಲಿಗೆ ಬೇರೆ ಬೇರೆ ಸ್ವೀಟ್ ಅಂಗಡಿ ಮಾಲೀಕರು ಇದೇ ರೀತಿ ಹೆಸರನ್ನು ಬದಲಾವಣೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಮೈಸೂರ್‌ ಪಾಕ್‌ ಅಲ್ಲದೆ ಇತ್ತೀಚೆಗೆ ಹೈದರಾಬಾದ್‌ನಲ್ಲಿ ಕರಾಚಿ ಬೇಕರಿ ಮೇಲೂ ದಾಳಿ ನಡೆದಿತ್ತು. ಪಾಕಿಸ್ತಾನದ ನಗರ ಕರಾಚಿ ಹೆಸರು ಇರುವ ಕಾರಣಕ್ಕೆ ಕರಾಚಿ ಬೇಕರಿಯ ಬೋರ್ಡ್‌ಗಳನ್ನು ಕಿತ್ತು ಹಾಕಿದ್ದರು.

ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿತ್ತು. ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳಲು ಭಾರತ ಆಪರೇಷನ್‌ ಸಿಂಧೂರ್‌ ಹೆಸರಿನಲ್ಲಿ ಭಯೋತ್ಪಾದಕ ನೆಲೆಗಳ ಮೇಲೆ ಮುಗಿಬಿದ್ದಿತ್ತು. ಇದಾದ ಬಳಿಕ ಎರಡೂ ದೇಶಗಳ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. ಪ್ರತೀಕಾರವಾಗಿ, ಭಾರತೀಯ ಸೇನೆ ಪಾಕಿಸ್ತಾನದಲ್ಲಿನ ವಾಯುನೆಲೆಗಳ ಮೇಲೆ ದಾಳಿ ಮಾಡಿದವು. ನಂತರ ಮೇ 10ರಂದು ನಡೆದ ಕದನ ವಿರಾಮ ಘೋಷಣೆಯಾಗಿದೆ.