ಗ್ಯಾರಂಟಿ ಭರವಸೆ ಈಡೇರಿಸುವಲ್ಲಿ ಕಾಂಗ್ರೆಸ್‌ ಸರ್ಕಾರ ವಿಫಲ : ಜಿಲ್ಲಾ ಬಿಜೆಪಿ

Share this post :

ಮಡಿಕೇರಿ : ಮೂರು ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಜನತೆಗೆ ಚುನಾವಣೆ ಸಂದರ್ಭದಲ್ಲಿ ನೀಡಿದ ಗ್ಯಾರಂಟಿ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬರುತ್ತದೆ ಎಂದು ಬಹುತೇಕ ಸಮೀಕ್ಷೆಯಲ್ಲಿ ಹೇಳಲಾಗಿತ್ತು. ಇದರಿಂದ ವಿಚಲಿತವಾದ ಕಾಂಗ್ರೆಸ್ ಚುನಾವಣೆ ಗೆಲ್ಲಲು ಬೇರೆ ಯಾವ ಮಾರ್ಗವಿಲ್ಲದೆ ಮತದಾರರಿಗೆ ಬಿಟ್ಟಿ ಭಾಗ್ಯಗಳ ಆಮಿಷ ಒಡ್ಡಿ ಚುನಾವಣೆ ಗೆದ್ದಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್ ಚುನಾವಣ ಪ್ರಣಾಳಿಕೆ ಮತ್ತು ಪ್ರಚಾರ ಸಭೆಗಳಲ್ಲಿ ಎಲ್ಲರಿಗೂ ಫ್ರೀ ಎಂಬ ದೊಡ್ಡ ಮಟ್ಟದ ವಾಗ್ದಾನವನ್ನು ಕಾಂಗ್ರೆಸ್ ನಾಯಕರು ನೀಡಿದ್ದರು. ಆದರೆ ಗೃಹ ಲಕ್ಷ್ಮಿಯೋಜನೆ ಒಂದರಲ್ಲೇ ನಾಲ್ಕೈದು ತಿಂಗಳ ಹಣವನ್ನು ಫಲಾನುಭವಿಗಳ ಖಾತೆಗಳಿಗೆ ಹಾಕಲಿಲ್ಲ. ಜೊತೆಗೆ ಇದರಲ್ಲಿ ಹಣವನ್ನು ದುರುಪಯೋಗ ಪಡಿಸಿಕೊಂಡು ವಂಚನೆ ಮಾಡುತ್ತಿದ್ದುದನ್ನು ವಿಧಾನ ಸಭೆಯಲ್ಲಿ ಬಿಜೆಪಿ ಶಾಸಕರು ಪ್ರಶ್ನೆ ಮಾಡಿದಾಗ ಸಾವಿರಾರು ಕೋಟಿ ವಂಚನೆ ಬೆಳಕಿಗೆ ಬಂದಿತ್ತು. ಆಗಿನ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಇದನ್ನು ಒಪ್ಪಿಕೊಂಡಿದ್ದರು. ಈಗ ಮತ್ತೆ ಸರ್ಕಾರ ಯೋಜನೆಗಳಿಗೆ ಹಣ ಒದಗಿಸಲಾಗದೆ ಪರಿಷ್ಕರಣೆ ನೆಪದಲ್ಲಿ ಅರ್ಹರನ್ನು ಅನರ್ಹ ಮಾಡಲು ಹೊರಟಿರುವುದು ಖಂಡನೀಯವೆಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈಗ ಗೃಹಲಕ್ಷ್ಮಿ, ಮುಂದೆ ಗೃಹ ಜ್ಯೋತಿ ಹೀಗೆ ಒಂದೊಂದೇ ಯೋಜನೆಗಳಿಗೆ ವಿವಿಧ ಷರತ್ತುಗಳನ್ನು ನಿಗದಿಪಡಿಸಿ ಅಮಾಯಕ ಮತದಾರರಿಗೆ ಅನ್ಯಾಯವೆಸಗುವ ಕುತಂತ್ರ ಇದರಲ್ಲಿ ಅಡಗಿದೆ. ಕಾಂಗ್ರೆಸ್ ಚುನಾವಣೆ ವೇದಿಕೆಗಳಲ್ಲಿ ಹೇಳುತಿದ್ದ ಮಹದೇವಪ್ಪ ನಿಂಗು ಫ್ರೀ… ಕಾಕಾ ಪಟೇಲ್ ನಿಂಗು ಫ್ರೀ… ಇದೆಲ್ಲ ಬರಿ ಬೋಗಸ್ ಎಂದು ಅವರು ವ್ಯಂಗ್ಯವಾಡಿದ್ದಾರೆ.

coorg buzz
coorg buzz