ವಿವಿಧ ಅಂಗನವಾಡಿಗಳಲ್ಲಿ ಅರಿವು ಕಾರ್ಯಕ್ರಮ – ನಿವೃತ್ತರಾದ ಕಾರ್ಯಕರ್ತೆ, ಸಹಾಯಕಿಯರಿಗೆ ಬೀಳ್ಕೊಡುಗೆ

Share this post :

ಮಡಿಕೇರಿ : ಕೆ. ನೀಡುಗಣೆ ಗ್ರಾಮ ಪಂಚಾಯಿತಿಯ ಭಗವತಿ ನಗರ, ಭಾಗಮಂಡಲ ಗ್ರಾಮ ಪಂಚಾಯಿತಿಯ ತಾವೂರು ಗ್ರಾಮದಲ್ಲಿ ಬೇಟಿ ಬಚಾವೋ ಅರಿವು ಕಾರ್ಯಕ್ರಮ ನಡೆಯಿತು.
ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಅಭಿಯಾನದ ಕುರಿತಾಗಿ ಮಾಹಿತಿ ನೀಡಿದರು. ಇಲಾಖೆ ವತಿಯಿಂದ ಜಿಲ್ಲಾಧ್ಯಂತ ಗ್ರಾಮ ಪಂಚಾಯಿತಿವಾರು ಬೇಟಿ ಬಚಾವೋ ಬೇಟಿ ಪಡವೋ ಕಾರ್ಯಕ್ರಮ, ಇಲಾಖೆಯ ಯೋಜನೆಗಳ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡು ಮಾಹಿತಿ ಪಡೆದುಕೊಳ್ಳಲು ಕರೆ ನೀಡಿದರು.
36 ವರ್ಷ 7 ತಿಂಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ತಾವೂರು ಅಂಗನವಾಡಿ ಕಾರ್ಯಕರ್ತೆ ಎಚ್‌.ಆರ್. ಹೇಮಾವತಿ‌, 22 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ತಣ್ಣಿಮಾನಿ ಕೇಂದ್ರದ ಸಹಾಯಕಿ ಎಂ.ಸಿ. ಮೋಹಿನಿ, 28 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಮಡೆಕಾನ ಕೇಂದ್ರದ(ಕರಿಕೆ)ಸಹಾಯಕಿ ಕೆ.ಆರ್. ದಮಯಂತಿ‌ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಸಂಯೋಜಕಿ ಮಮತಾ ಮಾತನಾಡಿ, ಸಖಿ ಒನ್ ಸ್ಟಾಪ್ ಸೆಂಟರ್ ಬಗ್ಗೆ ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ವಿವಿಧ ಇಲಾಖೆಗಳಲ್ಲಿ ಮಹಿಳೆಯರಿಗಾಗಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಅರಿಯಲು ಎಲ್ಲಾ ಮಹಿಳೆಯರು ಇಲಾಖೆಯ 08272-228010 ದೂರವಾಣಿ ಸಂಖ್ಯೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆ ಸುಶಿ ಸ್ವಾಗತಿಸಿದರು. ಕೋಡಿಮೊಟ್ಟೆ ಅಂಗನವಾಡಿ ಕಾರ್ಯಕರ್ತೆ ಮಾಲತಿ ನಿರೂಪಿಸಿದರು. ತಾವೂರು ಅಂಗನವಾಡಿ ಕಾರ್ಯಕರ್ತೆ ಗೀತಾ ವಂದಿಸಿದರು.

coorg buzz
coorg buzz