ವಿರಾಜಪೇಟೆ: ವಿರಾಜಪೇಟೆಯ ಖಾಸಗಿ ಬಸ್ಸು ನಿಲ್ದಾಣದಲ್ಲಿ (By stand) ಖಾಸಗಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಖಾಸಗಿ ಬಸ್ಸುಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಖಾಸಗಿ ಬಸ್ಸು ಕಾರ್ಮಿಕರ ಸಂಘದ ಖಜಾಂಚಿ ದಿನೇಶ್ ನಾಯರ್ ಆರೋಪಿಸಿದರು. ಖಾಸಗಿ ಬಸ್ಸು ನಿಲ್ದಾಣದಲ್ಲಿ ವಾಹನಗಳ ಪಾರ್ಕಿಂಗ್ನಿಂದ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಮಾದ್ಯಮದವರಿಗೆ ಮಾಹಿತಿ ನೀಡಿದ ದಿನೇಶ್ ಅವರು, ದಿನನಿತ್ಯದ ಸಂಬಳಕ್ಕಾಗಿ ದುಡಿಯುವ ಕಾರ್ಮಿಕ ವರ್ಗದ ಬಸ್ಸು ಚಾಲಕ ಮತ್ತು ನಿರ್ವಾಹಕರು ಇಲ್ಲಿದ್ದಾರೆ. ಬಸ್ಸು ನಿಲ್ದಾಣದಲ್ಲಿ ಬಂದು ಅವರಿಗೆ ತಿನ್ನಲು ಕುಡಿಯಲು ಕೇವಲ ೫-೧೦ ನಿಮಿಷಗಳ ಕಾಲಾವಧೀ ಇರುತ್ತದೆ. ಅಂತಹ ಸಂದರ್ಭದಲ್ಲಿ ನಿಲ್ದಾಣದೊಳಗೆ ಖಾಸಗಿ ವಾಹನ ನಿಲುಗಡೆ ಮಾಡಿಕೊಂಡು ಬಸ್ಸು ಚಾಲಕರಿಗೆ ತೊಂದರೆ ಮಾಡುತ್ತಾರೆ. ಬಸ್ಸು ಟರ್ನ್ ಮಾಡುವ ಸಂದರ್ಭ ಅಚಾನಕ್ಕಾಗಿ ಯಾವುದಾದರೂ ವಾಹನಕ್ಕೆ ತಾಗಿದರೆ ಚಾಲಕರ ಮೇಲೆ ತಪ್ಪು ಹೊರಿಸುತ್ತಾರೆ. ಈ ಹಿಂದೆ ಒಂದು ಸಾಲಿನಲ್ಲಿ ಮಾತ್ರ ವಾಹನ ನಿಲುಗಡೆಗೆ ಅವಕಾಶ ಕೊಡಲಾಗಿತ್ತು. ಇದೀಗ ಮೂರು ನಾಲ್ಕು ಸಾಲಿನಲ್ಲಿ ವಾಹನ ನಿಲುಗಡೆ ಮಾಡಿಕೊಂಡು ಬಸ್ಸಿನವರಿಗೆ ಸಮಸ್ಯೆ ಮಾಡುತ್ತಿದ್ದಾರೆ. ಇದರ ಬಗ್ಗೆ ಪುರಸಭೆಯವರು ಕ್ರಮ ತೆಗೆದುಕೊಳ್ಳಬೇಕು. ಈ ಹಿಂದೆ ಪುರಸಭೆಗೆ ಮನವಿ ಮಾಡಿದ್ದರೂ ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರಲ್ಲದೆ, ಇಲ್ಲಿ ವಾಹನ ನಿಲುಗಡೆ ಮಾಡಲು ಅವಕಾಶ ನೀಡಿರುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಸಂಘಧ ನಿರ್ದೇಶಕರಾದ ಜೂಡಿವಾಸ್ ಮಾತನಾಡಿ ಪುರಸಭೆಯ ವಾಹನ ಶುಲ್ಕ ಎತ್ತಾವಳಿ ಸಂದರ್ಭ ಬಸ್ಸು ನಿಲ್ದಾಣದಲ್ಲಿನ ವಾಹನ ನಿಲುಗಡೆಯ ಶುಲ್ಕ ಎತ್ತಾವಳಿ ಕೈಬಿಡಬೇಕು. ಇಲ್ಲಿ ವಾಹನ ನಿಲುಗಡೆ ಮಾಡುತ್ತಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಯಾವುದೇ ಒಂದು ಖಾಸಗಿ ಬಸ್ಸು ನಿಲ್ದಾಣದೊಳಗೆ ವಾಹನ ನಿಲುಗಡೆಗೆ ಅವಕಾಶ ಕೊಟ್ಟಿದ್ದನ್ನ ನಾವ್ಯಾರು ನೋಡಿಲ್ಲ. ಇದೇ ಮೊದಲ ಬಾರಿ ವಿರಾಜಪೇಟೆಯಲ್ಲಿ ಕೊಟ್ಟಿದ್ದಾರೆ. ಪುರಸಭೆ ಅಧಿಕಾರಿಗಳು ಈ ಕುರಿತು ಗಮನಹರಿಸಿ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಬಾರದು. ಪುರಸಭೆಯ ಬಜೆಟ್ ಪೂರ್ವಭಾವಿ ಸಭೆಯ ಸಂದರ್ಭದಲ್ಲಿ ಕೂಡ ಈ ವಿಚಾರವಾಗಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ಆದರೂ ಪ್ರಯೋಜನವಾಗಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರುಗಳಾದ ಕಿಶನ್, ಸುರೇಶ್, ನಿರ್ದೇಶಕ ಮಹೇಶ್ ಇದ್ದರು.
✍️ ರಜಿತ ಕಾರ್ಯಪ್ಪ



