ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ

datti upanyasa program,

Share this post :

ದತ್ತಿ ಉಪನ್ಯಾಸಗಳು ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಪರಿಚಯಿಸುವುದರೊಂದಿಗೆ ಹೊಸ ವಿಚಾರಗಳನ್ನು ತಿಳಿಸಿ ಕನ್ನಡ ತನವನ್ನು ಬೆಳೆಸುವ ಕಾರ್ಯ ಮಾಡುತ್ತದೆ ಎಂದು ಸ. ಪ್ರ.ದ ಕಾಲೇಜಿನ ಪ್ರಾಂಶುಪಾಲೆ ಪ್ರೊ ಡಿ.ಕೆ. ಸರಸ್ವತಿ ಅಭಿಪ್ರಾಯ ವ್ಯಕ್ತಪಡಿಸಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿರಾಜಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ದಿ. ಸಾಹಿತಿ ಮುಲ್ಲೇಂಗಡ ಬೇಬಿ ಚೋಂದಮ್ಮ ಹಾಗೂ ಮಂಡೇಪಂಡ ಅಕ್ಕಮ್ಮ ಗಣಪತಿ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ಭಾಷೆಯು ಇಂದು ಜಾತಿ , ಧರ್ಮ ಹಾಗೂ ಗಡಿಯನ್ನು ಮೀರಿ ಬೆಳೆದಿದೆ. ಇದಕ್ಕೆ ಒಂದು ಮುಖ್ಯ ಕಾರಣವೆಂದರೆ ಕನ್ನಡ ಸಾಹಿತ್ಯ ಪರಿಷತ್ತು. ತನ್ಮೂಲಕ ಕನ್ನಡ ನಾಡು, ನುಡಿ, ಸಂಸ್ಕೃತಿ, ಕಲೆ, ಸಾಹಿತ್ಯವನ್ನು ನಿರಂತರವಾಗಿ ಪೋಷಿಸುತ್ತ ವಿವಿಧ ಕಾರ್ಯಕ್ರಮ ಮೂಲಕ ಮುಂದಿನ ತಲೆಮಾರಿಗೆ ಕನ್ನಡದ ಶ್ರೇಷ್ಠತೆಯನ್ನು ಪರಿಚಿಸುವಂತಹ ಕೆಲಸವನ್ನು ಮಾಡುತ್ತಿದೆ . ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಹೇಳುವುದಾದರೆ 10ನೇ ಶತಮಾನದಿಂದ ಹಿಡಿದು ಇಂದಿನವರೆಗೂ ಕನ್ನಡ ಸಾಹಿತ್ಯವೆಂಬುದು ಸುಧೀರ್ಘವಾಗಿ ಜೀವಂತಿಕೆಯನ್ನು ಉಳಿಸಿಕೊಂಡು ಬೆಳವಣಿಗೆಯನ್ನು ಕಾಣುತ್ತಾ ಬಂದಿದೆ. ಅದರಲ್ಲಿಯೂ ಹಳೆಯ ಸಾಹಿತ್ಯಗಳಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿ, ಕನ್ನಡಿಗರ ಶೌರ್ಯ , ಗುಣ ಮುಂತಾದವುಗಳ ವರ್ಣನೆ ಹೆಮ್ಮೆ ತರುವಂತಹದ್ದು. ಕನ್ನಡ ಸಾಹಿತ್ಯ ಸಮ್ಮೇಳನಗಳು ,ಕವಿಗೋಷ್ಠಿ ಹಾಗೂ ಇನ್ನಿತರ ಕಾರ್ಯಕ್ರಮಗಳು ನಡೆದು ಕನ್ನಡ ಭಾಷೆಯು ಇನ್ನೂ ಬೆಳವಣಿಗೆಯನ್ನು ಕಾಣುವುದರೊಂದಿಗೆ ಕನ್ನಡ ಭಾಷೆಯು ತನ್ನ ಅಸ್ಮಿತೆಯನ್ನು ಕನ್ನಡಿಗರಿಗೆ ತೋರಿಸಲಿ ಎಂದರು .

ಕೊಡಗಿನ ಮಹಿಳಾ ಸಾಹಿತಿಗಳು ಎಂಬ ವಿಷಯದ ಕುರಿತು ಉಪನ್ಯಾಸವನ್ನು ನೀಡಿದ ನಿವೃತ್ತ ಶಿಕ್ಷಕಿ ಹೆಚ್.ಜಿ. ಸಾವಿತ್ರಿ ಕೊಡಗಿನಲ್ಲಿ ಕೊಡಗಿನ ಗೌರಮ್ಮನಿಂದ ಹಿಡಿದು ಇಂದಿನವರೆಗೂ ಕೃತಿಗಳನ್ನು ರಚಿಸಿದಂತಹ ಪ್ರಮುಖ ಕವಿಯತ್ರಿಗಳು ಹಾಗೂ ಅವರಿಂದ ರಚಿಸಲ್ಪಟ್ಟ ಕೃತಿಗಳನ್ನು ಪರಿಚಯಿಸುವುದರೊಂದಿಗೆ ಮಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಮಟ್ಟದಲ್ಲಿ ಮಹಿಳೆಯರಿಂದ ಸಾಹಿತ್ಯ ಕೃತಿಗಳು ರಚನೆಯಾಗಲಿ ಎಂದು ಆಶಿಸಿದರು.

ವಿರಾಜಪೇಟೆ ಕಾವೇರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಬಿ.ಬಿ. ಸುನಿಲ್ ಕುಮಾರ್ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್ . ತಿಮ್ಮಯ್ಯ ನವರ ಜೀವನ ಸಾಧನೆ ಎಂಬ ವಿಷಯದ ಕುರಿತು ಉಪನ್ಯಾಸವನ್ನು ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕೊಡಗು ಜಿಲ್ಲಾ ಸಾಹಿತ್ಯ ಪರಿಷತ್ ನ ಅದ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳು ಬಾಲ್ಯದಿಂದಲೇ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಪುಸ್ತಕಗಳು, ವೃತ್ತ ಪತ್ರಿಕೆಗಳನ್ನು ಓದುವುದರಿಂದ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್. ಯಾವುದೇ ಕಾರ್ಯಕ್ರಮ , ಸ್ಪರ್ಧೆಯಾದರು ಅದರಲ್ಲಿ ಭಾಗವಹಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಇಂದು ಸೋತರೆ ನಾಳೆ ಗೆಲ್ಲುವ ಛಲ ಬೆಳೆಯುತ್ತದೆ. ವಿದ್ಯಾರ್ಥಿಗಳ ತಮ್ಮ ಪ್ರತಿಭೆ ಅನಾವರಣಕ್ಕೆ ಸಿಗುವ ಪ್ರತಿಯೊಂದು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.

ಕಾರ್ಯಕ್ರಮವನ್ನು ಉದ್ದೇಶಿಸಿ ದತ್ತಿದಾನಿ ಮುಲ್ಲೇಂಗಡ ಮಧೂಶ್ ಪೂವಯ್ಯ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಿ.ರಾಜೇಶ್ ಪದ್ಮನಾಭ ಅಧ್ಯಕ್ಷೀಯ ನುಡಿಗಳನ್ನಾಡಿದರು.

ವೇದಿಕೆ ಕಾರ್ಯಕ್ರಮದ ನಂತರ ಕನ್ನಡ ವಿಷಯದಲ್ಲಿ 100ಕ್ಕೆ 100 ಹಾಗೂ ಅಧಿಕ ಅಂಕ ಪಡೆದ ಪದವಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ , ಬಹುಮಾನ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಗೌ.ಕೋಶಾಧಿಕಾರಿ ಶಬರೀಶ್ ಶೆಟ್ಟಿ , ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಸಹ ಕಾರ್ಯದರ್ಶಿ ಮಂಜುನಾಥ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕನ್ನಡ ಉಪನ್ಯಾಸಕರದ ಕೆ. ಹರಿಣಿ , ಹರೀಶ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು .

 

coorg buzz
coorg buzz