ಕಾಫಿ ತೋಟಕ್ಕೆ ಕಡಗದಾಳು ಶಾಲೆ ವಿದ್ಯಾರ್ಥಿಗಳ ಭೇಟಿ : ಪ್ರಮುಖರೊಂದಿಗೆ ಸಂವಾದ

Share this post :

ಮಡಿಕೇರಿ : ಕಡಗದಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಇತ್ತೀಚೆಗೆ ವಿಶೇಷ ಅನುಭವ ಪಡೆದರು. ತರಗತಿ, ಪಠ್ಯ, ಆಟೋಟ ಚಟುವಟಿಕೆಯ ಮಧ್ಯೆ ಕಾಫಿ ತೋಟಕ್ಕೆ ಭೇಟಿ ನೀಡುವ ಅವಕಾಶ ವಿದ್ಯಾರ್ಥಿಗಳಿಗೆ ಸಿಕ್ಕಿತ್ತು.
ಕೊಡಗು ಜಿಲ್ಲೆಯಲ್ಲಿ ಕಾಫಿಯನ್ನು ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತಿದೆ. ಹೀಗಾಗಿ ಶಾಲಾ ಮಕ್ಕಳಿಗೆ ಕಾಫಿಯ ಬಗ್ಗೆ ಅರಿವು ಹಾಗೂ ಮಾಹಿತಿ ಒದಗಿಸುವ ಉದ್ದೇಶದಿಂದ ಕಾಫಿ ತೋಟಕ್ಕೆ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ಬೆಳೆಗಾರ ಮುಕ್ಕಾಟಿರ ಗಣಪತಿ ಅವರ ತೋಟಕ್ಕೆ ಮಕ್ಕಳ ಜೊತೆ ತೆರಳಿದ ಶಿಕ್ಷಕರು ಅಲ್ಲಿನ ಪ್ರಮುಖರಿಂದ ಕಾಫಿ ಗಿಡ, ಅದರ ನಿರ್ವಹಣೆಯ ವಿವಿಧ ಪ್ರಕ್ರಿಯೆ, ಕಾಫಿ ಹೂಬಿಡುವುದು, ಫಸಲು ನೀಡುವ ಸಮಯ ಹೀಗೆ ವಿವಿಧ ಮಾಹಿತಿಯನ್ನು ಪಡೆದುಕೊಂಡರು. ತೋಟದ ರೈಟರ್‌ ಮುತ್ತುರವರು ಕಾಫಿ ಗಿಡದಲ್ಲಿನ ವಿಧಗಳು, ಅವುಗಳ ಆರೈಕೆ, ಗೊಬ್ಬರ ಪೂರೈಕೆ, ರೋಗ ತಡೆ ಬಗ್ಗೆ ವಿವರವಾಗಿ ಮಾಹಿತಿ ಒದಗಿಸಿದರು.
ಕಾಫಿ ಕೊಯ್ಲಿಗೆ ಆಗಮಿಸಿದ್ದ ನಂಜನಗೂಡಿನ ಕಾರ್ಮಿಕರ ಜೊತೆಗೂ ಸಂವಾದ ನಡೆದಲಾಯಿತು. 25 ವರ್ಷದಿಂದ ಕಾಫಿ ಕೊಯ್ಲಿಗೆ ಆಗಮಿಸುತ್ತಿದ್ದೇವೆ. ಕೊಯ್ಲು ಮುಗಿದ ನಂತರ ಊರಿಗೆ ವಾಪಸ್‌ ಹೋಗುತ್ತೇವೆಂದು ಕಾರ್ಮಿಕರು ಹೇಳಿದರು.
ಶಾಲೆ ಮುಖ್ಯ ಶಿಕ್ಷಕಿ(ಪ್ರಭಾರ) ಕೃಷ್ಣ ಕುಮಾರಿ, ನಾಗವೇಣಿ, ಎಸ್‌ಡಿಎಂಸಿ ಉಪಾಧ್ಯಕ್ಷ ಸುರೇಶ್‌, ವಿದ್ಯಾರ್ಥಿಗಳು ಈ ಸಂದರ್ಭ ಇದ್ದರು.

 

coorg buzz
coorg buzz