ಸಾಂದರ್ಭಿಕ ಲೇಖನ – ಕೊಕ್ಕಲೆಮಾಡ ಮಂಜು ಚಿಣ್ಣಪ್ಪ
ಕೊಡವರ ನಾಡಿನ ಸಾಂಪ್ರದಾಯಿಕ ‘ಬೋಡ್ ನಮ್ಮೆ’ಯು ಮಾನವನ ಬದುಕಿನಲ್ಲಿ ಬರುವ ಶಾರೀರಿಕ ವಾಂಛೆಗಳು, ಮಾನಸಿಕ ಬಯಕೆಗಳು ಹಾಗು ಭಾವನಾತ್ಮಕ ತುಮುಲಗಳಂತಹ ಅತಿರೇಕಗಳನ್ನು ದೇವರಿಗೆ ಸಮರ್ಪಿಸಿ ಮನಸ್ಸಿನ ಕ್ಲೇಶ ನಿವಾರಣೆ ಮಾಡಿ ಕೊಳ್ಳುವುದರೊಂದಿಗೆ ಶಾರೀರ, ಮನಸ್ಸು ಹಾಗು ಭಾವನೆಗಳ ಸಮತೋಲನವನ್ನು ಕಾಪಾಡಿಕೊಳ್ಳುವ ಒಂದು ಪಾರಂಪರಿಕ ಪ್ರಕ್ರಿಯೆಯಾಗಿದೆ, ಆಚರಣೆಯಾಗಿದೆ. ಇದನ್ನು ಧಾರ್ಮಿಕ ಕಟ್ಟುಪಾಡುಗಳೊಂದಿಗೆ ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಸಿಕೊಂಡು ಬರಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ‘ಬೋಡ್ ಕಳಿಯು’ ಅತಿರೇಕವನ್ನು ಮುಟ್ಟಿದೆ, ಇದು ಬೋಡ್ ನಮ್ಮೆಯ ಕಟ್ಟುಪಾಡುಗಳಿಗೆ ವಿರುದ್ಧವಾಗಿ ನಡೆಯುತ್ತಿದೆ ಎಂಬುವುದು ಸುಳ್ಳಲ್ಲ.
ದಕ್ಷಿಣ ಕೊಡಗಿನ ಬೆಳ್ಳೂರಿನಿಂದ ಚೆಂಬೆಬೆಳ್ಳೂರಿನವರೆಗೆ ಬಹುತೇಕ ಎಲ್ಲಾ ಊರು ನಾಡುಗಳಲ್ಲಿ ಈ ಪಾರಂಪರಿಕ ಬೋಡ್ ನಮ್ಮೆ ಆಚರಣೆ ನಡೆಯಲಿದೆ. ಸಾಧಾರಣವಾಗಿ ಬೋಟೆ ಕರುಂಬ ಅಥವ ಬೋಟೆಕಾರ ಅಯ್ಯಪ್ಪ ಇಲ್ಲವೇ ಭದ್ರಕಾಳಿ ದೇವರಿಗೆ ಬೋಡ್ ನಮ್ಮೆ ಆಚರಿಸುವ ಸಂಪ್ರದಾಯವಿದೆ. ಪ್ರತಿ ಊರಿನ ಬೋಡ್ ನಮ್ಮೆಗೆ ಅದರದ್ದೇ ಆದ ಮಹತ್ವ ಹಾಗು ಅದಕ್ಕೆ ತಕ್ಕಂತೆ ಕಟ್ಟುಪಾಡುಗಳಿರುತ್ತವಾದರೂ ಮೂಲವಾಗಿ ಎಲ್ಲಾ ಊರಿನ ಆಚರಣೆಗಳಲ್ಲಿ ಬಹುತೇಕ ಸಾಮ್ಯತೆ ಕಂಡುಬರುತ್ತದೆ. ಆದರೂ ಊರಿನಿಂದ ಊರಿಗೆ ಆಚರಣೆಯಲ್ಲಿ ಕೆಲವೊಂದು ವೈವಿಧ್ಯತೆಗಳನ್ನೂ ಕಾಣಬಹುದಾಗಿದೆ.
ಸಾಮಾನ್ಯವಾಗಿ ಅಯ್ಯಪ್ಪ ದೇವರ ಬೋಡ್ ನಮ್ಮೆಯಲ್ಲಿ ಮಣ್ಣಿನಿಂದ ಮಾಡಿದ ಶ್ವಾನದ ಪ್ರತಿರೂಪವನ್ನು ದೇವರಿಗೆ ಅರ್ಪಿಸುವ ಸಂಪ್ರದಾಯಕ್ಕೆ ವಿಶೇಷ ಮಹತ್ವವಿರುತ್ತದೆ. ಇದನ್ನು ‘ಬೋಟೆಕಾರನ ಕೊಂಡ ಬಪ್ಪೊ’ ಎಂದು ಹೇಳುತ್ತಾರೆ.
ಬೋಡ್ ನಮ್ಮೆಯಲ್ಲಿ ಕುದುರೆಗೆ ಪ್ರಧಾನವಾದ ಸ್ಥಾನವಿರುತ್ತದೆ. ವಾರ್ಷಿಕವಾಗಿ ಬೋಡ್ ನಮ್ಮೆಯ ಪ್ರಾರಂಭ ಹಾಗೂ ಸಮಾರೋಪಗಳಲ್ಲಿ ಕುದುರೆ ಪ್ರಮುಖ ಪಾತ್ರ ವಹಿಸುತ್ತದೆ.
“ಕುಂದತ ಬೊಟ್ಟ್’ಲ್ ನೇಂದ ಕುದುರೆ ಪಾರಣ ಮಾನಿಲ್ ಅಳ್ಂಜ ಕುದುರೆ” ಎಂಬ ಜಾನಪದದಂತೆ, ತುಲಾ ಮಾಸದಲ್ಲಿ ಕಾವೇರಿ ತೀರ್ತೋದ್ಭವದ ನಂತರ ಬೊಟ್ಯತ್ ನಾಡಿನ ಕುಂದ ಬೆಟ್ಟದಲ್ಲಿನ ಬೊಟ್ಲಪ್ಪ ಅಂದರೆ ಬೊಟ್ಟಲಯ್ಯಪ್ಪ ದೇವರಿಗೆ ಮೊದಲ ಬೋಡ್ ನಮ್ಮೆ ನಡೆಯುವಾಗ ಅಲ್ಲಿ ಬೆತ್ತದಿಂದ ಮಾಡಿದ ಕುದುರೆಯನ್ನು ಸಂಪ್ರದಾಯಬದ್ಧವಾಗಿ ಕುಣಿಸುವುದರೊಂದಿಗೆ ಮೊದಲ ಬೋಡ್ ನಮ್ಮೆ ಆಚರಿಸಲ್ಪಡುತ್ತದೆ. ಹಾಗೆಯೇ ಬೇರಳಿನಾಡಿನಲ್ಲಿ ವೃಷಭ ಮಾಸದಲ್ಲಿ ಅಂದರೆ ಜೂನ್ ಒಂದನೇ ತಾರೀಕಿನಂದು ನಡೆಯುವ ಪಾರಣ ಬೋಡ್‌ನಲ್ಲಿ ಪ್ರತಿವರ್ಷ ಬಿದಿರಿನಿಂದ ಬೃಹತ್ ಗಾತ್ರದ ಕುದುರೆಯನ್ನು ಮಾಡಿ ಹೊತ್ತು ಕುಣಿಸಿ ಅದನ್ನು ಕೊನೆಯಲ್ಲಿ ಕತ್ತಿಯಿಂದ ಕಡಿದು ಅಳಿಸಲಾಗುತ್ತದೆ. ಇದರೊಂದಿಗೆ ಕುದುರೆಯನ್ನು ಹೊರುವ ಬೋಡ್ ನಮ್ಮೆಗೆ ತೆರೆಬೀಳುತ್ತದೆ.
ಬೋಡ್ ನಮ್ಮೆಯಲ್ಲಿ ‘ಮೊಗ’ ಎಂದು ಕರೆಯಲ್ಪಡುವ ವಿಶೇಷ ವಿನ್ಯಾಸದ ದೇವರ ಪ್ರತಿಬಿಂಬವನ್ನು ತಲೆಯ ಮೇಲೆ ಹೊತ್ತು ಕುಣಿಸಲಾಗುತ್ತದೆ, ಈ ಮೊಗವನ್ನು ಊರಿನವರು ಅತ್ಯಂತ ಶ್ರದ್ಧಾಭಕ್ತಿಯಿಂದ ಪೂಜಿಸುತ್ತಾರೆ. ಹಾಗು ನಾಡಿನ ಸರ್ವ ಕಷ್ಟವನ್ನೂ ನಿವಾರಿಸುವ ಹಾಗು ಬೇಡಿದ್ದನ್ನು ಕೊಡುವ ಶಕ್ತಿ ಈ ಮೊಗಕ್ಕಿದೆ ಎಂಬ ದೃಢನಂಬಿಕೆ ಈಗಲೂ ಉಳಿದುಕೊಂಡಿದೆ.
‘ಬೋಡ್ ಕಳಿ’ ಎಂಬುವುದು ಬೋಡ್ ನಮ್ಮೆಯ ಅವಿಭಾಜ್ಯ ಅಂಗ. ವಿವಿಧ ವೇಷಗಳನ್ನು ಹಾಕಿ ಊರಿನ ಪ್ರತಿಯೊಂದು ಮನೆಗಳನ್ನು ಪ್ರವೇಶಿಸುತ್ತಾ ಅಲ್ಲಿ ನಡುಬೈಡೆಯಲ್ಲಿ ವೇಶಕ್ಕೆ ತಕ್ಕಂತೆ ಅಭಿವ್ಯಕ್ತಿ ಪಡಿಸುತ್ತಾ ಸಾಗಿ ಕೊನೆಗೆ ದೇವರಿಗೆ ಮೀಸಲಿರಿಸಿದ ಅಂಬಲಗಳಲ್ಲಿ ದೇವರಿಗೆ ಹರಕೆಯ ರೂಪದಲ್ಲಿ ತಾವು ಹಾಕಿದ ವೇಷಗಳನ್ನು ಹರಕೆಯ ರೂಪದಲ್ಲಿ ಸಮರ್ಪಿಸುವುದು ನಿಜವಾದ ಸಂಪ್ರದಾಯ. ಹಾಗೆಯೇ ನಿರ್ದಿಷ್ಟವಾದ ಕಳಿ ಅಂದರೆ ವೇಷಗಳನ್ನೇ ಹಾಕಿ ಇಂದಿನ ನಾಗರೀಕತೆಯಲ್ಲಿ ಅಶ್ಲೀಲ ಎಂದು ಕರೆಯಲ್ಪಡುವ ಹಾಡುಗಳು ಹಾಗು ಉಚ್ಛರಣೆಗಳನ್ನೇ ಹೇಳುತ್ತಾ ಬೋಡ್ ಕಳಿಯುದ್ದಕೂ ಹೇಳುತ್ತಾ ಹಾಡುತ್ತಾ ಡೋಲು ಬಡಿಯುತ್ತಾ ಸಾಗಿ ಕೊನೆಗೆ ದೇವರಿಗೆ ಒಪ್ಪಿಸಬೇಕು ಎಂಬ ನಿಯಮವಿದೆ. ಅವುಗಳಲ್ಲಿ, ‘ಚೂಳೆಕಳಿ, ಇದನ್ನು ಕುಂದನೂ ಚೂಳೆಯು ಎನ್ನುವುದೂ ಇದೆ. ಹಾಗೆಯೇ ಜೋಯಿಕಳಿ, ವಡ್ಡಕಳಿ, ಸೀಲ್ವೇಗಾರ, ಬಸವ ಕಳಿ, ಪಟ್ಟಕಳಿ, ಮಾಪಳೆಕಳಿ, ಮುಂತಾದ ಕಳಿ ವೇಷಧಾರಿಗಳನ್ನು ಮನೆಯ ನಡುಬಾಡೆಯಲ್ಲಿ ಡೋಲು ಹಿಡಿದವರು ಕರೆದಂತೆ ಬಂದು ಅವರ ಪಾತ್ರಗಳನ್ನು ಪ್ರದರ್ಶಿಸಬೇಕು. ಪ್ರತಿಯೊಂದು ವೇಷಕ್ಕೂ ಅದರದ್ದೇಯಾದ ಹಾಡುಗಳು ಹಾಗು ರಾಗ ತಾಳಗಳಿದ್ದಾವೆ, ಇವುಗಳಿಗೂ ಸಹ ಊರಿನ ಕಟ್ಟುಪಾಡುಗಳಿರುತ್ತದೆ. ಅದನ್ನು ಮೀರಿ ವರ್ತಿಸಿದವರಿಗೆ ಊರಿನಿಂದ ಗಡಿಪಾರು ಮಾಡಿರುವ ಶಿಕ್ಷ ನೀಡಿರುವ ಇತಿಹಾಸವೂ ಸಹ ಇದೆ. ಹಾಗೆಯೇ ಚೂಳೆಕಳಿ ಅಂದರೆ ವೇಶ್ಯೆಯ ವೇಷಧಾರಿಯೂ ಸಹ ಅತಿರೇಕದ ವೇಷ ಧರಿಸುವಂತಿಲ್ಲ, ಕೆಂಪು ಬಣ್ಣದ ಸೀರೆ, ತಲೆಗೆ ವಸ್ತ್ರ ಕಟ್ಟಿ ನರ್ತಿಸಬೇಕು. ಸೀಮಿತವಾದ ಅಶ್ಲೀಲ ಭಾಷೆಗಳ ಬಳಕೆ ಹಾಗು ಸನ್ನೆಗಳು ಹಾಗು ನಟನೆಗೆ ಅವಕಾಶ ಖಂಡಿತವಾಗಿಯೂ ಇದೆ. ಮನೆಗೆ ಕಳಿ ಪ್ರವೇಶಿಸುವಾಗ ಹೊಸದಾಗಿ ಮದುವೆಯಾಗಿ ಬಂದ ಹೆಣ್ಣುಮಕ್ಕಳನ್ನೆಲ್ಲಾ ಗೋಳುಹೊಯ್ದುಕೊಳ್ಳುವುದು, ಅವರನ್ನು ರೇಗಿಸುವುದು, ಅವರ ಮುಂದೆ ಸಾರಾಯಿ ಇಲ್ಲವೇ ದುಡ್ಡಿಗೆ ಬೇಡಿಕೆಯಿಡುವುದು ಇವೆಲ್ಲವೂ ಬೋಡ್ ಕಳಿಯಲ್ಲಿ ಸಖ್ಯವೇ. ಆದರೆ ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರ ಒಳಉಡುಪುಗಳ ಪ್ರದರ್ಶನ ಹಾಗು ಅತಿರೇಕದ ವರ್ತನೆಯೇ ಬೋಡ್ ನಮ್ಮೆ ಎಂಬಂತೆ ಬಿಂಬಿತವಾಗುತ್ತಿರುವುದು ವಿಷಾದವೀಯ. ಮೈ ಮುಟ್ಟಿ ಅತಿರೇಕದಿಂದ ವರ್ತಿಸುವುದು, ಕಟ್ಟುಪಾಡುಗಳಿಗೆ ವಿರುದ್ಧವಾಗಿ ವರ್ತಿಸುವುದು, ಊರಿಗೆ ಬಂದಿರುವ ನೆಂಟರಿಷ್ಟರಿಗೆ ತೊಂದರೆ ಕೊಡುವುದು, ಊರಿನ ಅಂದರೆ ಹಬ್ಬದ ಕಟ್ಟಳೆಗೆ ಒಳಪಡದ ನೆರೆಯ ಊರು ಅಥವ ಪಟ್ಟಣಗಳಿಗೆ ವೇಷ ಹಾಕಿ ನುಗ್ಗುವುದು, ಸಾರ್ವಜನಿಕವಾಗಿ ವಸೂಲಾತಿ ಮಾಡುವುದು, ಅನಗತ್ಯ ಬೈಗುಳಗಳು ಎಲ್ಲವೂ ಹಬ್ಬದ ಕಟ್ಟುಪಾಡುಗಳನ್ನು ಮೀರಿ ವರ್ತಿಸುವುದು ಶಿಕ್ಷಾರ್ಹ ಅಪರಾಧಗಳಾಗಿ ಪರಿಗಣಿಸಲ್ಪಡುತ್ತವೆ.
ಈ ಕುರಿತಂತೆ ತಕ್ಕ ಮುಖ್ಯಸ್ಥರು ದೇವನಡೆಯಲ್ಲಿ ನಿಂತು ಹಬ್ಬದ ತಪ್ಪಡಕ ಕಟ್ಟುವಾಗ ವಿಧಿಸುವ ಕಟ್ಟಳೆಗಳಲ್ಲಿ ವಿವರಿಸಲಾಗುತ್ತದೆ.
ಆದರೆ ಇತ್ತೀಚಿನ ದಿನಗಳಲ್ಲಿ ಅದರಲ್ಲೂ, ದೇವರ ಪುರದಹೆಬ್ಬಾಲೆಯ ಭದ್ರಕಾಳಿ ದೇವರ ಬೋಡ್ ನಮ್ಮೆಯು ಕುಂಡೇ ಹಬ್ಬವಾಗಿ ಬಿಟ್ಟಿದೆ. ಬೋಡ್ ನಮ್ಮೆಯಲ್ಲಿ ಸೀಮಿತ ಅಶ್ಲೀಲತೆ ಇರಬೇಕು ಆದರೆ ಇಲ್ಲಿ ಅಶ್ಲೀಲತೆಯೇ ಹಬ್ಬವೇನೋ ಎಂಬಂತಾಗಿಬಿಟ್ಟಿದೆ. ಇಲ್ಲಿ ವೇಷ ಧರಿಸುವ ಬಹುತೇಕರಿಗೆ ಹಬ್ಬದ ಮಹತ್ವವೇ ಗೊತ್ತಿರುವ ಸಾಧ್ಯತೆಗಳಿಲ್ಲ. ಜನ ಮರಳೋ ಜಾತ್ರೆ ಮರಳೋ ಎಂಬಂತೆ ಹಬ್ಬದ ಕಟ್ಟುಪಾಡುಗಳ ವ್ಯಾಪ್ತಿಯನ್ನು ಮೀರಿ ಪಟ್ಟಣಗಳತ್ತ ಮುಖಮಾಡುವ ವೇಷಧಾರಿಗಳು ವಿಚಿತ್ರ ಹಾಗು ಅತಿರೇಕದ ವೇಷಭೂಷಣಗಳೊಂದಿಗೆ, ನೋಡುಗರಿಗೆ ಮುಜುಗರವನ್ನುಂಟುಮಾಡುತ್ತಿರುವುದು ಸುಳ್ಳಲ್ಲ. ಊರಿನ ಹೊರಗಿನವರು ಹರಕೆಯ ರೂಪದಲ್ಲಿ ಕಳಿ ಹಾಕಬಹುದಾರೂ ಊರಿನ ಹೊರಗೆ ಕಳಿಯಾಡುವಂತಿಲ್ಲ. ಕಟ್ಟುಪಾಡುಗಳನ್ನು ಮೀರಿ ವರ್ತಿಸುವಂತಿಲ್ಲ, ಹಾಗು ಕಳಿ ಹಾಕಿದ ಮೇಲೆ ಸಂಪ್ರದಾಯಬದ್ಧವಾಗಿ ದೇವರಿಗೆ ಅದನ್ನು ಒಪ್ಪಿಸಬೇಕು. ಇದೆಲ್ಲವೂ ಈ ಹೆಬ್ಬಾಲೆ ಬೋಡ್ ನಮ್ಮೆಯಲ್ಲಿ ಉಲ್ಲಂಘನೆಯಾಗುತ್ತಿರುವುದು ಸುಳ್ಳಲ್ಲ. ಚೆಂಬೆಬೆಳ್ಳೂರು ಬೋಡ್ ಸೇರಿದಂತೆ ಇತರೆ ಎಲ್ಲಾ ಬೋಡ್ ನಮ್ಮೆಯಲ್ಲಿ ಕೆಲವೊಮ್ಮೆ ವೇಷಭೂಷಣಗಳು ಅತೀ ಎನಿಸಿದರೂ, ಆಧುನಿಕತೆಯ ಪ್ರಭಾವ ಕಂಡುಬಂದರೂ ಅವರೆಲ್ಲರೂ ಊರಿನ ಕಟ್ಟುಪಾಡುಗಳಿಗೆ ಸೀಮಿತವಾಗಿ ವರ್ತಿಸುತ್ತಾ ಸಂಪ್ರದಾಯದಂತೆ ಮನೆ ಮನೆಗಳಿಗೆ ಕಳಿಯಾಡಿ ಕೊನೆಗೆ ಭಕ್ತಿಯಿಂದ ಹರಕೆ ಸಮರ್ಪಿಸುತ್ತಿದ್ದಾರೆ. ಇದನ್ನು ಸಾರ್ವಜನಿಕವಾಗಿ ಪ್ರಶಿಸುವ ಮಟ್ಟಕ್ಕೆ ಅವರ ವರ್ತನೆಯೂ ಎಲ್ಲೆಯನ್ನು ಮೀರಿರುವುದು ಇದುವರೆಗೆ ಕಂಡುಬಂದ ಉದಾಹರಣೆಗಳಿಲ್ಲ. ಆದರೆ ಹೆಬ್ಬಾಲೆ ಬೋಡ್ ನಮ್ಮೆಯಲ್ಲಿ ಅತಿರೇಕದ ವರ್ತನೆಗಳು ವರ್ಷದಿಂದ ವರ್ಷಕ್ಕೆ ಮಿತಿಮೀರುತ್ತಿರುವುದರಿಂದ, ಈ ಕುರಿತು ಊರಿನ ತಕ್ಕಮುಖ್ಯಸ್ಥರು ಚಿಂತಿಸಬೇಕಿದೆ. ದೇವರ ನಡೆಯಲ್ಲಿ ವಿಧಿಸುವ ಕಟ್ಟುಪಾಡುಗಳನ್ನು ಹಾಗು ಅದರ ನಿಯಮಗಳನ್ನು ಸಾರ್ವಜನಿಕ ಪ್ರಕಟಣೆಯ ರೂಪದಲ್ಲಿಯಾದರೂ ಸರಿಯೇ, ಜನರಿಗೆ ತಲುಪುವಂತೆ ಮಾಡಬೇಕು. ಜನರೂ ಅಷ್ಟೆ ಪೋಲೀಸರು ಬಂದು ದೇವಸ್ಥಾನದ ಸಾಂಪ್ರದಾಯಿಕ ಆಚರಣೆಗಳನ್ನು ನಿಯಂತ್ರಿಸುವ ಮಟ್ಟಕ್ಕೆ ಅತಿರೇಕದಿಂದ ವರ್ತಿಸಬಾರದು. ನಮ್ಮ ಧಾರ್ಮಿಕ ಆಚರಣೆಗಳ ಬಗ್ಗೆ ನಾವು ಭಕ್ತಿ ಹಾಗು ಗೌರವವನ್ನು ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಆಚರಣೆಗಳೇ ಉಳಿಯುವುದು ಕಷ್ಟಸಾದ್ಯ.
ಬೋಡ್ ನಮ್ಮೆ ಎಂದರೆ ಅದೊಂದು ಶ್ರದ್ಧೆ, ಅದು ಭಕ್ತಿಯ ಪರಾಕಾಷ್ಠೆ, ಹಾಗು ಜನರ ಭಾವನೆಗಳಿಂದ ಅಳಿಸಲಾಗದ ಒಂದು ಸದೃಢ ನಂಬಿಕೆ. ಜೊತೆಗೆ ಮನರಂಜನೆಯ ಮಹಾಪೂರವೇ ಇರುತ್ತದೆಯಾದ್ದರಿಂದ ಬೋಡ್ ನಮ್ಮೆ ಎಂದರೆ ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಒಂದು ಪುಳಕ ಇದ್ದೇ ಇರುತ್ತದೆ. ಈ ನಿಟ್ಟಿನಲ್ಲಿ ಶ್ರದ್ಧೆ ಹಾಗು ಭಕ್ತಿಯನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆಯೂ ಕೂಡ ನಮಗೇ ಇದೆ. ಇದನ್ನು ಅರಿತು ಬೆರೆತರೆ ಎಲ್ಲವೂ ಒಳಿತೇ ಆಗುತ್ತದೆ.



